ಬದುಕು ಕಥೆಯಾದಾಗ

869

ಕಥೆ ಹೇಳುವಾಗ ‘ಒಂದಾನೊಂದೂರಲ್ಲಿ…’ ಎಂದು ಪ್ರಾರಂಭಿಸಿದರೆ ನಮ್ಮ ಮನಸ್ಸು ತಕ್ಷ ಣ ಆ ಊರನ್ನು ಚಿತ್ರಿಸಿಕೊಳ್ಳುತ್ತದೆ. ಮುಂದಿನ ವಾಕ್ಯ ‘ಒಬ್ಬ ರಾಜ ಇದ್ದ, ಒಂದು ಮನೆ ಇತ್ತು, ರಾಕ್ಷ ಸ ಇದ್ದ…’ ಏನು ಬೇಕಾದರೂ ಆಗಬಹುದು. ಒಟ್ಟು ಅವೆಲ್ಲವೂ ಒಂದು ‘ಊರು’ ಎಂಬ ಚೌಕಟ್ಟಿನೊಳಕ್ಕೆ ಸೇರುವ ವಸ್ತುಗಳಾಗಿರುತ್ತವೆ. ಯಾವುದೇ ಕಥಾ ವಸ್ತುವಿನ ಪರಿಧಿಯು ಒಂದು ಭೌಗೋಳಿಕ ಪ್ರದೇಶವೇ ಆಗಿರುತ್ತದೆ.

ಆಲಿಸ್ಸಾಳ ಮಾಯಾಲೋಕದಂತೆ ಪ್ರತಿಯೊಬ್ಬ ಕಥೆಗಾರನೂ ಒಂದೊಂದು ಅದ್ಭುತ ಮಾಯಾಲೋಕವನ್ನು ಕಟ್ಟಿಕೊಡುತ್ತಾನೆ. ಟಾಲ್ಕಿನ್ನನ ‘ಲಾರ್ಡ್‌ ಆಫ್‌ ದಿ ರಿಂಗ್ಸ್‌ -ಮಿಡ್‌ ಅರ್ತ್‌’, ಮಾರ್ಟಿನ್ನನ ‘ಗೇಮ್‌ ಆಫ್‌ ತ್ರೋನ್ಸ್‌- ವೆಸ್ಟೆರಾನ್‌’ ಅಥವಾ ರೌಲಿಂಗ್‌ಳ ‘ಹ್ಯಾರಿಪಾಟರ್‌ – ಹಾಡ್ವರ್ಡ್‌ ಎಲ್ಲವೂ ವಾಸ್ತವಕ್ಕೆ ಸಂವಾದಿಯಾಗಿ ಒಂದು ಕಾಲ್ಪನಿಕ ಜಗತ್ತನ್ನು ಕಟ್ಟಿಕೊಡುತ್ತವೆ. ‘ಗಲಿವರ್ಸ್‌ ಟ್ರಾವೆಲ್‌’, ‘ಟೇಲ್‌ ಅಫ್‌ ಟು ಸಿಟೀಸ್‌’, ‘ಜೂಡ್‌ ದಿ ಅಬ್‌ ಸ್ಕೂಲ್‌’ ಗ್ರಂಥಗಳು ಚಿತ್ರಿಸುವ ಜಗತ್ತನ್ನು ಮರೆಯಲಾದೀತೇ? ‘ಸೆವಾರ್‌ಂಟೆಯ ‘ಡಾನ್‌ ಕ್ವಿಕ್ಸಾಟ್‌’ ಕಾದಂಬರಿಯನ್ನು ಹಿಡಿದು ಸ್ಪೇನ್‌ ಪ್ರವಾಸಿ ಮಾಡುವ ಓದುಗರು ಇಂದಿಗೂ ಇದ್ದಾರೆ’ ಎಂದು ಲೇಖಕ ಒರ್ಹಾನ್‌ ಪಾಮುಕ್‌ ತನ್ನ ಭಾಷಣದಲ್ಲಿ ಹೇಳಿದ್ದಾನೆ. ಥಾಮಸ್‌ ಮೂರನ ‘ಉಟೋಪಿಯಾ’ ಎಂಬ ಕಾಲ್ಪನಿಕ ದ್ವೀಪದ ಹೆಸರನ್ನು ಒಂದು ಆದರ್ಶ ಜಗತ್ತಿಗೆ ಉಪಮೆಯಾಗಿ ಬಳಸಲಾಗುತ್ತದೆ.

ಇಂಗ್ಲಿಷ್‌ ಲೇಖಕ ಥಾಮಸ್‌ ಸಿ ಫಾಸ್ಟರ್‌ ಹೇಳುತ್ತಾನೆ .” It’s place and space that bring us to ideas, psychology, history and dynamism. It’s enough to make you read a map.” ಅಂದರೆ ನಮ್ಮ ಕಲ್ಪನೆ, ನೋವಿಜ್ಞಾನ, ಇತಿಹಾಸ, ಚೈತನ್ಯ ಎಲ್ಲವೂ ಒಂದು ಕ್ಷೇತ್ರಪಜ್ಞೆಯ ಮೂಲಕವೇ ಅರಳುತ್ತದೆ ಎಂದು. ಆರ್‌.ಕೆ.ನಾರಾಯಣರ (ಬಸವನಗುಡಿ ಮತ್ತು ಮಲ್ಲೇಶ್ವರಂ ಎರಡರ ಕಾಕಸಂಗಮ ಎಂದು ಹೇಳಲ್ಪಡುವ) ‘ಮಾಲ್ಗುಡಿ‘ಯು ಈ ಮಾತಿಗೆ ಸೂಕ್ತ ಉದಾಹರಣೆಯಾಗಿದೆ. ಮಾಲ್ಗುಡಿಯ ಕಥೆಗಳು ವಿಭಿನ್ನ ಪಾತ್ರಗಳು, ಭಾಷೆ, ಸಮಾಜ ಮುಂತಾದ ಅನೇಕ ಎಳೆಗಳನ್ನು ಪ್ರಾದೇಶಿಕ ಚೌಕಟ್ಟಿನ ಮೂಲಕವೇ ಬಿಂಬಿಸಿ ಕಥೆಗೆ ಜೀವತುಂಬಿವೆ.


ಭೌಗೋಳಿಕ ವ್ಯಾಖ್ಯಾನ ಇಲ್ಲದಯೇ ಕಥೆಯನ್ನು ಹೇಳುವುದು ಸಾಧ್ಯವಿಲ್ಲ. ಕಥೆಗಾರನ ಭೌಗೋಳಿಕ ತಿಳಿವಳಿಕೆಗೆ ಅನುಭವದ ವರ್ಣಮಯ ಕುಂಚದಿಂದ ಬಣ್ಣ ಹಚ್ಚಿ ಸುಂದರ ಲೋಕವನ್ನು ಕಟ್ಟಿಕೊಡುತ್ತಾನೆ. ಕೆಲವು ಕಡೆಗಳಲ್ಲಿ ಪ್ರಾದೇಶಿಕ ಪ್ರಭಾವವು ಕಥೆಯ ಪ್ರಮುಖ ಪಾತ್ರವನ್ನೇ ವಹಿಸಿರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಕಥಾಹಂದರದ ಒಳಗೆ ಸೂಕ್ಷ ವಾಗಿ ಹೆಣೆದುಕೊಳ್ಳುವ ವಿವರಗಳು ನಮಗರಿವಿಲ್ಲದೆಯೇ ಪ್ರಭಾವ ಬೀರುತ್ತಿರುತ್ತದೆ. ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತಗಳೇ ಪ್ರಾದೇಶಿಕ ಪ್ರಜ್ಞೆಗೆ ಅತ್ಯದ್ಭುತ ಉದಾಹರಣೆಗಳಾಗುತ್ತವೆ. ಕಥೆ ಕೇಳುತ್ತಾ ನಾವು ಅಯೋಧ್ಯೆ, ಕಿಷ್ಕಿಂಧೆ, ಲಂಕೆ, ಕುರುಕ್ಷೇತ್ರ, ಹಸ್ತಿನಾಪುರ ಹೀಗೆ ಎಲ್ಲಾ ಪ್ರದೇಶಗಳಲ್ಲೂ ವಿಹರಿಸುತ್ತಿರುತ್ತೇವೆ.

ಕನ್ನಡ ಸಾಹಿತ್ಯದಲ್ಲಿ ಈ ಪ್ರಾದೇಶಿಕತೆಯ ಕಾಲ್ಪನಿಕ ಚಿತ್ರಣ ಅಮೋಘವಾಗಿ ಮೂಡಿ ಬಂದಿದೆ. ಮೊಟ್ಟಮೊದಲ ಗದ್ಯವಾದ ವಡ್ಡಾರಾಧನೆಯಲ್ಲಿ ಕಥೆ, ‘ಜಂಬೂದ್ವೀಪದ ಭರತಕ್ಷೇತ್ರದೊಳ್‌ ಲಾಳವಿಷಯದೊಳ್‌ ಕೃತ್ತಿಕಾಪುರವೆಂಬುದು ಪೊಳಲ್‌’ ಎಂದು ಪ್ರಾರಂಭವಾಗುತ್ತದೆ. ಈ ವಿವರವನ್ನು ಊಹಿಸಿಕೊಳ್ಳುವುದು ಗೂಗಲ್‌ ಮ್ಯಾಪ್‌ಅನ್ನು ಮೊಬೈಲಿನಲ್ಲಿ ವಿಸ್ತರಿಸುತ್ತಾ ಹೋಗುವುದಕ್ಕಿಂತ ಭಿನ್ನವೇನಲ್ಲ.

 
ಪ್ರದೇಶ, ಪರಿಸರ ಪ್ರಜ್ಞೆಯ ಕುರಿತು ಆಲೋಚಿಸುವಾಗ ಮೊಟ್ಟ ಮೊದಲು ನೆನಪಾಗುವುದು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’. ಕಥೆಯ ಪಾತ್ರಗಳೊಂದಿಗೆ ಪ್ರಯಾಣ ಮಾಡುವ ನಾವು ಮಲೆಗಳಲ್ಲಿ ಸಂತೋಷವಾಗಿ ಕಳೆದುಹೋಗುತ್ತೇವೆ. ತೇಜಸ್ವಿಯವರ ಕಥೆಗಳಲ್ಲಿ ಊರು-ಕೇರಿಗಳ ಹೆಸರು ವಿಶೇಷವಾಗಿ ಪ್ರಯೋಗವಾಗಿವೆ. ಮಾಯಾಲೋಕದ ‘ಗೊಂದಲಗೇರಿ’, ಚಿದಂಬರ ರಹಸ್ಯದ ‘ಕೆಸರೂರು’ , ಜುಗಾರಿ ಕ್ರಾಸ್‌, ಅಬಚೂರು, ಭೈರಾಪುರ, ಗುರುಗಳ್ಳಿ ಹೀಗೆ ಒಂದು ಪ್ರದೇಶವನ್ನು ಜೀವಂತವಾಗಿಸಿ, ಕಾಲಕ್ಕೆ ತಕ್ಕಂತೆ ಅದು ಬದಲಾಗಿ ಬೆಳೆಯುವ ಚಿತ್ರಣವನ್ನು, ಆ ಬದಲಾವಣೆಗಳು ಜನಸಾಮಾನ್ಯರ ಮೇಲೆ ಬೀರುವ ಪರಿಣಾಮವನ್ನು ರಸವತ್ತಾಗಿ ಚಿತ್ರಿಸುವ ಕಲೆಗಾರಿಕೆಯನ್ನು ತೇಜಸ್ವಿಯವರ ಕಥೆಗಳಲ್ಲಿ ನೋಡಬಹುದು.

ಕಾರಂತರ ಕಾದಂಬರಿಗಳಲ್ಲಿ ಕಾಣುವ ಪ್ರಾದೇಶಿಕ ಚಿತ್ರಣದ ಸೊಗಡು, ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಕಣ್ಣಿಗೆ ರಾಚುವ ಅಗ್ರಹಾರಗಳು ಎಲ್ಲವೂ ಭೌಗೋಳಿಕ ಆಯಾಮಗಳನ್ನು ಸೂಕ್ತವಾಗಿ ಒಳಗೊಂಡಿವೆ, ಪಾತ್ರ ಪ್ರಧಾನವಾಗುವ ಮಾಸ್ತಿಯವರ ಕಥೆಗಳಲ್ಲಿ ಪಾತ್ರಗಳಿಗೆ ಹೊಂದಿಕೊಂಡೇ ಪ್ರಾದೇಶಿಕ ವಿಶೇಷತೆ ನವಿರಾಗಿ ಹರಡಿರುತ್ತದೆ. ಆಲನಳ್ಳಿ ಅವರ ‘ಕಾಡು’ , ಗಾಢ ಕಥಾವಸ್ತುವಿನೊಡನೆ ಪರಿಸರವೂ ಕಾಡುವಂತೆ ಮಾಡುತ್ತದೆ, ಎಂ.ಕೆ. ಇಂದಿರಾ ಅವರ ತುಂಗಭದ್ರಾ ಅಥವಾ ಟು-ಲೆಟ್‌ ಪುಸ್ತಕಗಳನ್ನು ಸಹ ಇಲ್ಲಿ ನೆನೆಯಬಹುದು.

ಕಥೆ, ಕಾದಂಬರಿಗಳಲ್ಲಿ ಪಾತ್ರಗಳು, ಕಥಾವಸ್ತು, ಕಟ್ಟೋಣ, ಹೊಳಹುಗಳು ಇವೆಲ್ಲವುಗಳ ನಡುವೆ ಭೌಗೋಳಿಕ ವಿವರಗಳ ಅಗತ್ಯವೇನು ಎನ್ನಿಸಬಹುದು. ಆದರೆ ಕಥೆಗಾರನ ನೋಟಕ್ಕೆ ಸಿಗುವ ಭೌಗೋಳಿಕ ಪರಿಸರವೇ ಭಿನ್ನವಾದದ್ದಾಗಿರುತ್ತದೆ. ಬೇಂದ್ರೆ ಧಾರವಾಡದ ಸಾಧನಕೇರಿಯನ್ನು ನಂದನದ ತುಣುಕಾಗಿಸುತ್ತಾರೆ. ಬಳ್ಳಾರಿಯ ಗಣಿಗಾರಿಕೆಯ ಪರಿಣಾಮಗಳಿಗೆ ಮಿಡಿದ ವಸುಧೇಂದ್ರರ ಮನಸ್ಸು ‘ಕೆಂಪುಗಿಣಿ’ ಯಾಗಿ ನಮ್ಮನ್ನು ಕಾಡುತ್ತದೆ. ಗುರುವಾಯನಕೆರೆ, ಬೆಂಗಳೂರು ಎರಡನ್ನೂ ಒಳಗೊಂಡ ಜೋಗಿಯು ಬೆಂಗಳೂರಿಗೆ ಸಲಾಂ ಮಾಡುತ್ತಾ ಗುರುವಾಯನಕೆರೆಯನ್ನೇ ನನಪಿಸಿಕೊಳ್ಳುತ್ತಾರೆ. ಜಯಂತರ ಕಥೆಗಳನ್ನು ಓದಿ ಮುಂಬೈಗೆ ಹೋಗಿಬಂದ ಸ್ನೇಹಿತರು ಹಲವರು. ಹೀಗೆ ಕಾಣುವ ದೃಶ್ಯವನ್ನು ದರ್ಶನವನ್ನಾಗಿಸುವ ಶಕ್ತಿಯು ಲೇಖಕರಲ್ಲಿರುತ್ತದೆ.  ಈ ರೀತಿಯಾಗಿ ಲೇಖಕನ ಅನುಭವದ ಮೂಸೆಯಿಂದ ರಚನೆಗೊಂಡ ಭೌಗೋಳಿಕ ವಿವರಗಳು ಮತ್ತೊಂದು ಚಮತ್ಕಾರವನ್ನೂ ಮಾಡುತ್ತದೆ. ಅದೇನೆಂದರೆ ಓದುಗರ ಅನುಭವದ ಒರೆಗೆಹಚ್ಚಿ ವಿವಿಧ ಆಕಾರಗಳನ್ನು ಪಡೆದುಕೊಳ್ಳುವುದು. ಉದಾಹರಣೆಗೆ ಜಯಂತರು ಚಿತ್ರಿಸಿರುವ ‘ಮುಂಬೈ, ಶಹರ’ ಒಂದಾದರೆ, ಓದುಗರು ಕಥೆಯನ್ನು ಓದುತ್ತಾ ತಮ್ಮ ಅನುಭವದ ಮೂಲಕ ಚಿತ್ರಿಸಿಕೊಳ್ಳುವ ಮುಂಬೈ ಶಹರಗಳು ಹಲವಾರು. ಹೀಗೆ ವಿಭಿನ್ನ ಆಯಾಮಗಳ ಕಲೈಡೋಸ್ಕೋಪ್‌ ಆಗಿ ಒಂದು ಪ್ರಾದೇಶಿಕ ಧ್ವನಿ ಕಥೆಗಳ ಮೂಲಕ ಕಾಣಿಸಿಕೊಳ್ಳುತ್ತದೆ.




Leave a Reply

Your email address will not be published. Required fields are marked *

error: Content is protected !!