ಮಲ್ಟಿ ಟ್ಯಾಲೆಂಟ್ ‘ಸಾರಥಿ’..!

1184

ಇವರು ಕಸ್ತೂರಿ ಕನ್ನಡದ ಆಟೋ ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಬೇರೆ ಬೇರೆ ಕಡೆ ಸಹ ಫೇಮಸ್. ಇದರ ಸಾರಥಿ ಮಲ್ಟಿ ಟ್ಯಾಲೆಂಟ್. ಆಟೋ ಡ್ರೈವರ್, ರೇಡಿಯೋ ಜಾಕಿ, ಕವಿ, ಸಮಾಜ ಸೇವಕ. ಹತ್ತಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕ ಜಿ.ಸಿ ಶಿವಕುಮಾರ್ ಅವರ ಸಂದರ್ಶನದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಪ್ರಜಾಸ್ತ್ರ ರಿಪೋರ್ಟರ್ : ಮೊದಲಿಗೆ ಸ್ವರ್ಣ ಸಿರಿ ಪ್ರಶಸ್ತಿ ಬಂದಿರುವುದಕ್ಕೆ ಅಂಭಿನಂದನೆಗಳು.

ಆಟೋ ಶಿವಕುಮಾರ್ : ಧನ್ಯವಾದಗಳು. ಲವ್ ಇಂಡಿಯಾ ಫೌಂಡೇಷನ್ ನವರು ನೀಡಿದ ಪ್ರಶಸ್ತಿ. ತುಂಬಾ ಖುಷಿಯಾಗಿದೆ.

ಪ್ರಜಾಸ್ತ್ರ ರಿಪೋರ್ಟರ್ : ನಿಮ್ಮ ಕನ್ನಡಮಯ ಆಟೋದ ಹಿನ್ನೆಲೆ ಏನು?

ಆಟೋ ಶಿವಕುಮಾರ್ : ಸರ್ ನಾವು ಹುಟ್ಟಿ ಬೆಳೆದಿರೋದು ಕನ್ನಡದಲ್ಲಿ. ಮೊದಲು ನಮ್ಮ ತಾಯಿಗೆ ಜರತಾರೆ ಸೀರೆ ಉಡಿಸೋಣ. ಕನ್ನಡಕ್ಕೆ ತನ್ನದೆಯಾದ ಪರಂಪರೆ ಇದೆ. ನಾವು ಓದಿರೋದು ಕನ್ನಡ ಶಾಲೆಯಲ್ಲಿ. ಅಲ್ಲೆಲ್ಲ ಕನ್ನಡದ ಗೀತೆಗಳನ್ನು ಹಾಡುವುದು ಮಾಡುತ್ತಿದ್ದೆ. ಒಮ್ಮೆ ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆಗ ದೊಡ್ಡರಂಗೇಗೌಡರು ತೀರ್ಪುಗಾರರಾಗಿದ್ದರು. ಅಲ್ಲಿ ನನಗೆ ಬಹುಮಾನ ಬಂತು. ಇದರಿಂದಾಗಿ ಬೇರೆ ಬೇರೆ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳು ನನ್ನನ್ನು ಕಳಿಸುತ್ತಿದ್ದರು. ಇದು ಮುಂದೆ ಕನ್ನಡದ ಮೇಲಿನ ನನ್ನ ಪ್ರೀತಿ ಹೆಚ್ಚಾಗುತ್ತಾ ಹೋಯಿತು. ಹಾಗಂತ ಇತರ ಭಾಷೆಗಳನ್ನು ಪ್ರೀತಿಸಲ್ಲಂತಲ್ಲ. ನನ್ನ ಆಟೋದಲ್ಲಿ ತೆಲುಗು, ತಮಿಳು ಭಾಷೆಯವರು ಹತ್ತಿದರೆ, ನಾವು ಅವರ ಜೊತೆ ವ್ಯವಹರಿಸುತ್ತೇನೆ. ಅದು ನನ್ನ ವ್ಯಾಪಾರಿ ಭಾಷೆ. ನನ್ನ ಆಟೋದಿಂದ ಇಳಿದು ಹೋಗುವಾಗ ಅವರಿಗೆ ಕನ್ನಡ ಕಲಿಯಲು ಹೇಳುತ್ತೇನೆ. ನಮ್ಮ ನೆಲದಲ್ಲಿ ಮೊದಲು ಕನ್ನಡಕ್ಕೆ ಪ್ರಾಮುಖ್ಯತೆ ಕೊಡೋಣ.

ಪ್ರಜಾಸ್ತ್ರ ರಿಪೋರ್ಟರ್ : ಆಟೋ ವೃತ್ತಿಯ ಜೊತೆಗೆ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿರುವುದರ ಬಗ್ಗೆ..

ಆಟೋ ಶಿವಕುಮಾರ್ : ಕಳೆದ 10 ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿದ್ದೇನೆ. ಮೇ 1, 2009ರಲ್ಲಿ ನನ್ನ ಮೊದಲ ಕಾರ್ಯಕ್ರಮ ಶುರುವಾಯಿತು. ಇದಕ್ಕೆ ಕಾರಣ—- ನನ್ನ ವಿಭಿನ್ನ ಆಟೋ, ಅದರಲ್ಲಿ ನನಗೆ ಬಂದಿರುವ ಪ್ರಶಸ್ತಿಗಳು, ನಾನು ಮಾತನಾಡುವ ಶೈಲಿಯನ್ನು ಮೆಚ್ಚಿ, ರೈಲ್ವೆ ಸ್ಟೇಷನ್ ಗೆ ನನ್ನನ್ನು ಕರೆದುಕೊಂಡು ಹೋಗಿ ನನ್ನ ಸಂದರ್ಶನ ಮಾಡಿದರು. ಬಳಿಕ ನೀವ್ಯಾಕೆ ಆರ್ ಜೆ ಆಗಿ ಕೆಲಸ ಮಾಡಬಾರದು ಅಂತಾ ಹೇಳಿ, ನಿಮಗೊಂದು ಅವಕಾಶ ಕೊಡತೀನಿ. ನಮ್ಮ ಜೊತೆ ರೇಡಿಯೋ ಜಾಕಿ ಆಗಿ ಕೆಲಸ ಮಾಡಿ ಅಂತಾ ಹೇಳಿದರು. ಮಾತನಾಡುವುದು ಗೊತ್ತು. ನನಗೆ ಆರ್ ಜೆ ಅಂದ್ರೆ ಏನಂತಾನೆ ಗೊತ್ತಿರಲಿಲ್ಲ. ಈಗ ನೀವು ಏನು ಮಾತನಾಡ್ತೀರಾ, ಅದನ್ನೇ ಒಂದು ವಿಷಯ ಇಟ್ಟುಕೊಂಡು ಹೀಗೆ ಮಾತ್ನಾಡಬೇಕು ಅಂತಾ ಎರಡು ದಿನ ಟ್ರೇನಿಂಗ್ ಕೊಟ್ರು. ಅಲ್ಲಿಂದ ರೇಡಿಯೋ ಆ್ಯಕ್ಟೀವ್ 90.4 ಮೂಲಕ ಆರ್ ಜೆ ಕೆಲಸ ಶುರುವಾಯಿತು. ಟ್ರಾಫಿಕ್, ಪರಿಸರ, ವರದಕ್ಷಿಣೆ, ರಸ್ತೆ ಸುರಕ್ಷತೆ, ಆಟೋ ಡ್ರೈವರ್ ಗಳ ಬಗ್ಗೆ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಇಟ್ಟುಕೊಂಡು ಲೈವ್ ಕಾರ್ಯಕ್ರಮ ಮಾಡುತ್ತಿದ್ದೆ. ಅದಕ್ಕೆ ‘ಮುಖಾಮುಖಿ’ ಅಂತಾ ಟೈಟಲ್ ಕೊಟ್ಟಿದ್ದೇವು. ಇದರ ಜೊತೆಗೆ ‘ಗುರುಕುಲದಲ್ಲಿ ಬದುಕಿನ ಹಾದಿ’ ಅನ್ನೋ ಹೆಸರಿನ ಮೂಲಕ ಸಾಧಕರನ್ನು ಪರಿಚಯಿಸುವ ಕೆಲಸ ಮಾಡುಕೊಂಡು ಬರಲಾಗುತ್ತಿದೆ.

ಪ್ರಜಾಸ್ತ್ರ ರಿಪೋರ್ಟರ್ : ಸಾಹಿತ್ಯದ ಮೇಲೆ ನಿಮಗೆ ಆಸಕ್ತಿ ಮೂಡಿದ್ದು ಹೇಗೆ?

ಆಟೋ ಶಿವಕುಮಾರ್ : ಚಿಕ್ಕವನಿರುವಾಗಿನಿಂದಲೂ ಸಾಹಿತ್ಯದ ಬಗ್ಗೆ ಒಂದಿಷ್ಟು ಒಲುವು ಇತ್ತು. ಅದನ್ನ ಹಾಗೆ ಮುಂದುವರೆಸಿಕೊಂಡು ಬಂದೆ. ಮುಂದೆ ಸಾಹಿತ್ಯ ಪರಿಷತ್ ನಲ್ಲಿ ಸದಸ್ಯನಾದೆ. ಒಮ್ಮೆ ಯುಗಾದಿ ಸಂದರ್ಭದಲ್ಲಿ ಕೆಆರ್ ಪುರಂನಲ್ಲಿ ಚಿತ್ರಬಾನು ಸ್ಪರ್ಧೆ ಇದೆ ಅಂತಾ ಪೇಪರ್ ನಲ್ಲಿ ಬಂದಿತ್ತು. ಸ್ಥಳದಲ್ಲಿಯೇ ಕವಿತೆ ಬರೆದು ವಾಚನ ಮಾಡುವುದು. ಆ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕವಿಗಳು, ಲೇಖಕರು ಬಂದಿದ್ದರು. ಅವರು ಮಾತನಾಡುವುದು ನೋಡಿ, ಸಾಹಿತ್ಯದ ಮೇಲೆ ಮತ್ತಷ್ಟು ಒಲವು ಮೂಡಿತು. ಕವಿತೆಗಳುನ್ನ, ವಚನಗಳನ್ನ ಬರೆಯುತ್ತಾ ಬಂದೆ. 2009ರಲ್ಲಿ ಗುರುಕುಲ ಸೇವಾ ಸಂಸ್ಥೆ ಶುರು ಮಾಡುವ ಮೂಲಕ, ಬಡಮಕ್ಕಳಿಗೆ ಉಚಿತ ಪುಸ್ತಕ ನೀಡುವುದು, ಮೆಡಿಕಲ್ ಕ್ಯಾಂಪ್ ಮಾಡುವುದು ಸೇರಿದಂತೆ ಒಂದಿಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

‘ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ, ಕೊಟ್ಟಿ ದಂಧೆ ಮಾಡುವವರಿಗೆ ಕೆಂಪೇಗೌಡ ಪ್ರಶಸ್ತಿ ಕೊಡ್ತಾರೆ. ಆಗ ನಾನು ಒಳ್ಳೆಯ ಕೆಲಸ ಮಾಡ್ತಿರೋದು ತಪ್ಪಾ ಅನಿಸುತ್ತೆ. ತುಂಬಾ ನೋವಾಗುತ್ತೆ ಸರ್. ಕೆಂಪೇಗೌಡರು ಇವತ್ತೇನಾದರೂ ಬದುಕಿದ್ದರೆ ಇದನ್ನು ನೋಡಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’.

ಆಟೋ ಶಿವಕುಮಾರ್

ಪ್ರಜಾಸ್ತ್ರ ರಿಪೋರ್ಟರ್ : ನಿಮ್ಮ ಸಾಮಾಜಿಕ ಸೇವೆ ಗುರುತಿಸಿ ರಾಜ್ಯ ಸರ್ಕಾರದಿಂದ ಯಾವುದಾದರೂ ಪ್ರಶಸ್ತಿ ಬಂದಿದೆಯಾ?

ಆಟೋ ಶಿವಕುಮಾರ್ : ಸರ್ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ, ಸೈನಿಕರಿಗೆ ಶೇ.50ರಷ್ಟು ರಿಯಾಯಿತಿ. ದೇಶ ಕಾಯೋ ಯೋಧರಿಗೆ ನನ್ನಿಂದ ಮಾಡಬಹುದಾದ ಸಹಾಯ ಇಷ್ಟು ಸರ್. ಪೂರ್ತಿ ಬಿಡಲು ಆಗೋದಿಲ್ಲ. ಯಾಕಂದ್ರೆ ನನಗೂ ಜೀವನ ಇದೆಯಲ್ಲ ಸರ್. ವಿಕಲಚೇತನರಿಗೆ ಉಚಿತ ಸೇವೆ, ಹಿರಿಯ ನಾಗರಿಕರಿಗೆ ಉಚಿತ ಸೇವೆ, ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. 1993ರಿಂದ ಆಟೋ ಓಡಿಸ್ತಿದ್ದು, ನನ್ನ ಪ್ರಮಾಣಿಕ ಆಟೋ ವೃತ್ತಿಯಿಂದ ಪೊಲೀಸ್ ಇಲಾಖೆಯಿಂದ 14 ಬಾರಿ ಪ್ರಮಾಣ ಪತ್ರ ಪಡೆದಿದ್ದೇನೆ. ಹತ್ತಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಘ ಸಂಸ್ಥೆಗಳಿಂದ 38 ಪ್ರಶಸ್ತಿಗಳನ್ನ ಪಡೆದಿದ್ದೇನೆ. ಕನ್ನಡ, ಇಂಗ್ಲಿಷ್ ಪತ್ರಿಕೆ, ಟಿವಿಯಲ್ಲಿ ನನ್ನ ಬಗ್ಗೆ ಸ್ಟೋರಿಗಳನ್ನ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ನಮ್ಮಂತವರನ್ನ ಗುರುತಿಸಿ ಯಾವ ಪ್ರಶಸ್ತಿನೂ ನೀಡಿಲ್ಲ ಸರ್. ಇದನ್ನ ನೋಡಿದಾಗ ನನಗೆ ನಾನು ಕಾಡಿನಲ್ಲಿ ಇದೀನಾ? ನಾಡಿನಲ್ಲಿ ಇದೀನಾ ಅನಿಸುತ್ತೆ. ಪ್ರಶಸ್ತಿಗಾಗಿ ಕೆಲಸ ಮಾಡುತ್ತಿಲ್ಲ. ಆದರೆ, ಒಬ್ಬ ವ್ಯಕ್ತಿಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದಾಗ ಅವನು ಇನ್ನಷ್ಟು ಚೆನ್ನಾಗಿ ಕೆಲಸ ಮಾಡುತ್ತಾನೆ.

ಪ್ರಜಾಸ್ತ್ರ ರಿಪೋರ್ಟರ್ : ನಿಮ್ಮ ಸಮಾಜಮುಖಿ ಕೆಲಸಗಳು ಹಾಗೂ ರೇಡಿಯೋ ಜಾಕಿ ಹೀಗೆ ಮುಂದುವರಿಸಿ. ನಿಮ್ಗೆ ಯಶಸ್ಸು ಸಿಗಲಿ.

ಆಟೋ ಶಿವಕುಮಾರ್ : ಧನ್ಯವಾದಗಳು ಸರ್. ನಿಮ್ಮ ವೆಬ್ ಪೋರ್ಟಲ್ ಗೂ ಒಳ್ಳೆಯದಾಗ್ಲಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಿಮ್ಮ ಪತ್ರಿಕೆ ಹೆಸರು ಮಾಡಲಿ ಅಂತಾ ಶುಭ ಕೋರುತ್ತೇನೆ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.




Leave a Reply

Your email address will not be published. Required fields are marked *

error: Content is protected !!