ಸುದೀಪ್ ಅಭಿಮಾನಿಗಳ ಈ ವರ್ತನೆ ಎಷ್ಟು ಸರಿ?

219

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಬರದೆ ಇರುವ ಕಾರಣಕ್ಕೆ ಗುರುವಾರ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಕುರ್ಚಿಗಳನ್ನು ಮುರಿದು ಹಾಕಿ ಅತಿರೇಕದಿಂದ ವರ್ತಿಸಿದ್ದಾರೆ. ಇದರಿಂದಾಗಿ ಪೊಲೀಸರು ಹೈರಾಣಾದರು.

ಇನ್ನೊಂದು ಕಡೆ ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ಸ್ವಾಮೀಜಿಗಳು, ಗಣ್ಯರಿಗೂ ಇದರಿಂದ ಅವಮಾನ ಮಾಡಿದಂತಾಗಿದೆ. ನಟ ಸುದೀಪ್ ಬರುತ್ತಾರೆ ಎಂದು ಸುತ್ತಮುತ್ತಲಿನ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಆದರೆ, ಅವರು ಬರುವುದು ತಡವಾಗಿದೆ. ಆಗ ಗಲಾಟೆ ಶುರುವಾಗಿದೆ. ಸ್ವತಃ ವಾಲ್ಮೀಕಿ ಪೀಠದ ಪ್ರಸನ್ನಾಂದಪುರಿ ಸ್ವಾಮಿಗಳು ಗರಂ ಆಗಿ ನೀವು ಈ ರೀತಿ ಮಾಡಿದರೆ ಕಾರ್ಯಕ್ರಮ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರೂ ಅಭಿಮಾನಿಗಳು ಕೇಳಿಲ್ಲ. ಕೊನೆಗೂ ನಟ ಸುದೀಪ್ ಕಾರ್ಯಕ್ರಮಕ್ಕೆ ಬಂದಿಲ್ಲ.

ಇದರ ನಡುವೆ ರಾತ್ರಿ ಟ್ವೀಟ್ ಮಾಡಿರುವ ನಟ ಸುದೀಪ್ ನನಗೆ ಕಾರ್ಯಕ್ರಮದ ಕುರಿತು ಆಹ್ವಾನ ಬಂದಿಲ್ಲ. ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಅತೀವ ಆಸೆ. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ ಶಾಂತ ರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ ಎಂದು ಬರೆದು ತಾವು ಬರದೆ ಇರುವುದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಇದೀಗ ಸ್ವಾಮೀಜಿಗಳು ಸುದೀಪ್ ಅವರ ತಂದೆಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ ಅನ್ನೋ ಮಾಹಿತಿ ಹಾಗೂ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೀಗಿದ್ದರೂ ನಟ ಸುದೀಪ್ ಗೆ ಹೇಗೆ ಮಾಹಿತಿ ಹೋಗಿಲ್ಲ ಅನ್ನೋ ಪ್ರಶ್ನೆ ಮೂಡಿದೆ. ಅದೇನೆ ಇರಲಿ, ಕೆಲವು ಸಾರಿ ಅನಿವಾರ್ಯ ಕಾರಣಗಳಿಗೆ ಒಪ್ಪಿಕೊಂಡ ಕಾರ್ಯಕ್ರಮಗಳಿಗೆ ಹೋಗಲು ಆಗುವುದಿಲ್ಲ. ಹಾಗಂತ ಸಿನಿಮಾ ತಾರೆಯರ ಅಭಿಮಾನಿಗಳು ಈ ರೀತಿ ನಡೆದುಕೊಳ್ಳುವುದು ಒಳ್ಳೆಯದಲ್ಲ. ಇದು ಆಯೋಜಕರಿಗೆ, ಅವರ ನೆಚ್ಚಿನ ತಾರೆಯರಿಗೆ ಮಾಡುವ ಅವಮಾನ. ಇದರಿಂದ ಸಮಾಜಕ್ಕೆ ನಾವು ಸಂದೇಶ ನೀಡುತ್ತೇವೆ ಅನ್ನೋ ಸಣ್ಣ ತಿಳುವಳಿಕೆ ಇರುವವರು ಇಂತಹ ಕೆಲಸ ಮಾಡಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ.




Leave a Reply

Your email address will not be published. Required fields are marked *

error: Content is protected !!