ಅಹಿಂದ ಜವರಪ್ಪಗೆ ಒಲಿದ ‘ಕರುನಾಡ ಸೇವಾ ರತ್ನ’ ಪ್ರಶಸ್ತಿ

178

ಪ್ರಜಾಸ್ತ್ರ ಸುದ್ದಿ

ಮೈಸೂರು: ಶೋಷಿತ ಸಮುದಾಯದ ನಾಯಕ ಅಹಿಂದ ಜವರಪ್ಪನವರಿಗೆ 2022ನೇ ಸಾಲಿನ ಕರುನಾಡ ಸೇವಾ ರತ್ನ ಪ್ರಶಸ್ತಿ ಒಲಿದಿದೆ. ನಗರದ ತನುಮನ ಸಂಸ್ಥೆ ನೀಡುವ ಪ್ರಶಸ್ತಿಗೆ ಅಹಿಂದ ಜವರಪ್ಪನವರು ಆಯ್ಕೆ ಆಗಿದ್ದಾರೆ ಎಂದು ಖ್ಯಾತ ಗಾಯಕ ಲಕ್ಷ್ಮಿರಾಮ್ ತಿಳಿಸಿದ್ದಾರೆ.

ನವೆಂಬರ್ 30ರಂದು ನಗರದ ಧ್ವನ್ಯಾಲೋಕದ ಸಭಾಂಗಣದಲ್ಲಿ ಸಂಜೆ 4.30ಕ್ಕೆ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕವಿ ಕಾವ್ಯ ಗಾನಯಾನ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬುಗತಗಳ್ಳಿ ಎಂಬ ಕುಗ್ಗ್ರಾಮವೊಂದರ ಬಡತನದ ಕುಟುಂಬವೊಂದರಲ್ಲಿ ಜನಿಸಿದ ಜವರಪ್ಪನವರು ದಸಂಸ ಹಿರಿಯ ನಾಯಕರಾದ ದೇವನೂರು ಮಹಾದೇವ ಅವರನ್ನೊಳಗೊಂಡಂತೆ ಅನೇಕರೊಂದಿಗೆ ಒಡನಾಟ ಹೊಂದಿದ್ದಾರೆ. ವಿದ್ಯಾರ್ಥಿ ದಿನಗಳಿಂದ ಸಾಮಾಜಿಕ ಚಳವಳಿಯಲ್ಲಿ ಭಾಗವಹಿಸಿಕೊಂಡವರು. ಸರ್ಕಾರಿ ಕೆಲಸದ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದವರು.

ಮುಂದೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ತಿಯಾಗಿ ಸಮಾಜಸೇವೆಗೆ ನಿಂತವರು. ಮೈಸೂರು ಎಪಿಎಂಸಿ ಚುನಾವಣೆಗೆ ಸ್ಪರ್ಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಹಲವು ಸುಧಾರಣೆಗಳನ್ನು ತಂದರು. ರೈತರು, ಕಾರ್ಮಿಕರು, ದಿನಗೂಲಿ ಕೆಲಸಗಾರರು, ಶೋಷಿತರು ಸೇರಿದಂತೆ ಯಾರಿಗೆ ಅನ್ಯಾಯವಾದರೂ ಅವರೊಂದಿಗೆ ನಿಂತು ನ್ಯಾಯ ಕೊಡಿಸುತ್ತಾ ಬಂದಿದ್ದಾರೆ. ಇಂತಹ ಅಹಿಂದ ಜವರಪ್ಪನವರಿಗೆ ಈ ಬಾರಿಯ ಕರುನಾಡ ಸೇವಾ ರತ್ನ ಪ್ರಶಸ್ತಿ ಒಲಿದಿದೆ.




Leave a Reply

Your email address will not be published. Required fields are marked *

error: Content is protected !!