ಕೃಷಿ ವಿಧೇಯಕಗಳು: ಸರ್ಕಾರ ರೈತರಿಗೆ ಬರೆ ಎಳೆದಿದ್ದು ಎಲ್ಲಿ ಗೊತ್ತಾ?

457

ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿ ಮಸೂದೆಯನ್ನ ತರಾತುರಿಯಲ್ಲಿ ಸರ್ಕಾರ ತಂದಿದೆ. ಸುಗ್ರೀವಾಜ್ಞೆ ಅನ್ನೋ ಅಸ್ತ್ರದ ಮೂಲಕ ಅನುಮೋದನೆಗೊಂಡಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಆಡಳಿತ ಅಧಿಕಾರಿ ಎಸ್.ಎಲ್ ಶ್ರೀಧರಮೂರ್ತಿ ಅವರ ಲೇಖನ ಇಲ್ಲಿದೆ…

ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ)-ಸುಗ್ರೀವಾಜ್ಞೆ-2020 ಮತ್ತು ರೈತರ ಬೆಲೆ ಖಾತರಿ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಸುಗ್ರೀವಾಜ್ಞೆ-2020 ವಿಧೇಯಕಗಳಿಗೆ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ ಈ ಎರಡು ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳಿಗೆ ಸಂಸತ್ತಿನಲ್ಲಿ ಪ್ರತಿ ಪಕ್ಷಗಳ ಭಾರಿ ದಾಂಧಲೆಯ ನಡುವೆ ಅನುಮೋದನೆಗೊಂಡಿದೆ. ಪ್ರತಿಪಕ್ಷಗಳ ಗಲಭೆ ಯಾವ ಮಟ್ಟಕ್ಕೆ ಇತ್ತೆಂದರೆ, ಈ ವಿಧೇಯಕವನ್ನು ಸೋಲಿಸುವ ಮೂಲಕ ಸರ್ಕಾರಕ್ಕೆ ಮುಖಭಂಗ ಮಾಡುವ ಸಲುವಾಗಿ ಮತವಿಭಜನೆ (ಎಲೆಕ್ಟ್ರಾನಿಕ್ ಮತದಾನ)ಕ್ಕೆ ಒತ್ತಾಯಿಸಿದವು. ಆದರೆ ಸರ್ಕಾರವು ತರಾತುರಿಯಲ್ಲಿ ‘ಧ್ವನಿ ಮತದಿಂದ’ ವಿಧೇಯಕ ಅಂಗೀಕರಿಸಿತು. ಇದರ ಫಲವಾಗಿ ಪ್ರತಿಪಕ್ಷಗಳು ಉಪಸಭಾಪತಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿತು. ಸರ್ಕಾರ ಸಹ ಗದ್ದಲ ಎಬ್ಬಿಸಿದವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಿತು. ಈಗ ಉಳಿದಿರೋದು ಈ ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿಗಳ ಅಂಕಿತ ಹಾಕುವುದು ಮಾತ್ರ.

ಪ್ರತಿಪಕ್ಷಗಳ ವಿರೋಧ, ಬೆಂಬಲ ಇದಕ್ಕೆ ಇದ್ದೆ ಇದೆ. ಇನ್ನು ಕೇಂದ್ರ ಸರ್ಕಾರ ಮಾಡಿದ ಈ ಎರಡು ವಿಧೇಯಕಗಳ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಆಗುಹೋಗುಗಳನ್ನು ಪರಿಶೀಲಿಸಿದಾಗ:- ರೈತರಿಗೆ ಆದಾಯವನ್ನು ಹೆಚ್ಚಿಸುವುದೇ ಈ ವಿಧೆಯಕದ ಮೂಲ ಉದ್ದೇಶವೆಂದು ಹೇಳಿದ ಈ ವಿಧೇಯಕದಲ್ಲಿ, ಇವರಿಗೆ ಬೆಂಬಲ ಬೆಲೆ ಸಿಗುತ್ತದೆ ಎನ್ನುವ ಗ್ಯಾರಂಟಿಯನ್ನು ನೀಡದಿರುವುದು ಪ್ರಧಾನ ಲೋಪವಾಗಿದೆ.

ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವಾಗ ಬೆಂಬಲ ಬೆಲೆಯನ್ನು ಸೂಕ್ತವಾಗಿ ಒದಗಿಸಲಾಗುವುದು ಎನ್ನುವ ಕುರಿತಂತೆ ಏತಕ್ಕಾಗಿ ಭರವಸೆ ನೀಡಲಿಲ್ಲ, ಈ ಬಗ್ಗೆ ಚರ್ಚೆಯನ್ನ ಮಾಡದೇ, ಇದಕ್ಕೆ ಪ್ರಾಮುಖ್ಯ ನೀಡದೆ ಏಕೆ ಈ ರೀತಿ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಈಗ ಎಲ್ಲೆಡೆ ಚರ್ಚನೀಯಾಂಶವಾಗಿದೆ.

ಕೇಂದ್ರ ಸರ್ಕಾರ ಈಗ ತಂದಿರುವ ಈ ಸುಗ್ರೀವಾಜ್ಞೆಯ ನಿಯಮಗಳಂಥಹ ಸ್ವೇಚ್ಛಾ ವ್ಯವಸಾಯ ವಾಣಿಜ್ಯ ನಿಯಮಗಳು ಬಿಹಾರನಂತಹ ರಾಜ್ಯಗಳಲ್ಲಿ ಎಂದಿನಿಂದಲೋ ಜಾರಿಯಲ್ಲಿವೆ. ಇಲ್ಲಿಯೂ ಸಹ ರೈತರು ಬೆಳೆದು ಮಾರಾಟ ಮಾಡುವ ಬೆಳೆಗಳಿಗೆ ಸರಿಯಾದ ದರ ಸಿಗುತ್ತಿಲ್ಲವೆಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ರೈತರು ಗಲಾಟೆ ಮಾಡುತ್ತಲೇ ಇದ್ದಾರೆ. ಅಂದರೆ, ಈಗ ಕೇಂದ್ರ ಸರ್ಕಾರದ ಈ ಸುಗ್ರೀವಾಜ್ಞೆಯ ವಿಧೇಯಕ ಜಾರಿಗೊಂಡರೆ, ಬಿಹಾರ ಪರಿಸ್ಥಿತಿ ದೇಶದ ಎಲ್ಲ ರಾಜ್ಯಗಳಲ್ಲಿ ಮುಂದುವರೆಯದು ಎನ್ನುವ ಗ್ಯಾರಂಟಿ ಇಲ್ಲ.

ಈ ನಿಯಮಗಳಿಂದಾಗಿ ರೈತರು ದೇಶದಲ್ಲಿ ಎಲ್ಲಿಯಾದರೂ ಅವರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದು. ನಮ್ಮ ದೇಶದಲ್ಲಿ ಬಡ ರೈತರ ಸಂಖ್ಯೆ ಹೆಚ್ಚಾಗಿದೆ, ಇವರು ಅವರ ಬೆಳೆಯನ್ನು ದೂರದ ಪ್ರದೇಶಗಳಿಗೆ, ಅಥವಾ ದೇಶದಲ್ಲಿ ಎಲ್ಲಿಯಾದರೂ ತೆಗೆದುಕೊಂಡು ಹೋಗಿ ಮಾರಲು ಶಕ್ತರಾಗಿರುವರೇ? ದೂರವಿರುವ ಆ ಪ್ರದೇಶಗಳಿಗೆ ರವಾನೆ ಹೇಗೆ, ರವಾನೆಗೆ ತಗಲುವ ವೆಚ್ಚ ಎನು? ಒಂದು ವೇಳೆ ಸದರಿ ಸ್ಥಳಕ್ಕೆ ಕಷ್ಟಪಟ್ಟು ಹೋಗಿ ಮಾರುವಾಗ ರೈತರಿಗೆ ಸರಿಯಾದ ಬೆಲೆ ಸಿಗದೇ ಇದ್ದರೆ ಹೇಗೆ? ಕನಿಷ್ಟ ಪಕ್ಷ ಹೋಗಿ ಬರುವ ಖರ್ಚಾದರೂ ಸಿಕ್ಕು ಸಂಸಾರ ನಡೆಸಲು ಆಗುವುದೆ? ಸರಿಯಾದ ಬೆಲೆ ಸಿಗದೆ, ಟೊಮ್ಯಾಟೊ, ಈರುಳ್ಳಿ ರಸ್ತೆಗೆ ಬಿಸಾಡಿರುವ ದಿನಗಳು ನಾವು ನೋಡಿಲ್ಲವೆ?

ಇನ್ನು ರೈತರಿಗೆ ಬೆಂಬಲ ಬೆಲೆ ಸಿಗಬೇಕಾದರೆ ಸೂಕ್ತ ಬೆಲೆ ತರುವ ಬೆಳೆ ಬೆಳೆಯುವುದು, ಇದನ್ನು ಕಾಪಾಡಲು ಬೇಕಾದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಶುದ್ಧಿಗೊಳಿಸುವ ಯಂತ್ರಗಳು ಬೇಕಾಗುತ್ತದೆ. ಬೆಂಬಲ ಬೆಲೆ ಸಿಗಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಇದೇ ವಿದೇಶಗಳಲ್ಲಿ ಕೃಷಿಯಲ್ಲಿ ಯಶಸ್ಸಿನ ರಹಸ್ಯವಾಗಿದೆ ಬೆಳೆಯನ್ನು ಖರೀದಿಸುವ ಜವಾಬ್ದಾರಿಯು ಹೊಸ ನಿಯಮಾನುಸಾರ ಖಾಸಗಿ ಸಂಸ್ಥೆಗಳದ್ದೇ ಎನ್ನುವ ಹಾಗೆ ಕೇಂದ್ರವು ಅನುಮತಿ ನೀಡಿದೆ. ಆದರೆ ಲಾಭಾಂಶಕ್ಕೆ ಒದ್ದಾಡುವ ಸಂಸ್ಥೆಗಳು ಬಡ ರೈತರಿಗೆ ಬೆಂಬಲ ದರ ನೀಡುವಂತೆ ಮಾಡುವ ಜವಾಬ್ದಾರಿಯನ್ನು ಸಹ ಸರ್ಕಾರ ತೆಗೆದುಕೊಳ್ಳಬೇಕಲ್ಲದೆ, ಸರ್ಕಾರ ಹಲವು ಬೆಳೆಯನ್ನು ರೈತರಿಂದ ಖರೀದಿಸುವ ಏರ್ಪಾಡು ಮಾಡಬೇಕು. ಆಗ ವ್ಯಾಪಾಸ್ಥರಿಗೆ ಸ್ಪರ್ಧೆ ಏರ್ಪಟ್ಟು, ಬೆಳೆದ ಬೆಳೆಯ ಬೆಲೆ ಜಾಸ್ತಿಯಾಗುವುದು, ರೈತರಿಗೆ ಲಾಭವಾಗುವುದು. ದೇಶ ಸುಭೀಕ್ಷೆಯಿಂದಿರುವುದು. ಆ ಒಳ್ಳೆಯ ದಿನಗಳಿಗಾಗಿ ಕಾಯೋಣ.




Leave a Reply

Your email address will not be published. Required fields are marked *

error: Content is protected !!