ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದಲಿತ ಮಹಿಳೆಯ ಆತ್ಮಕಥೆ…

625

13ನೇ ಆವೃತ್ತಿಯಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಮಾರ್ಚ್ 3ರಿಂದ 10ರ ತನಕ ನಡೆಯಲಿದೆ. ಚಲನ ಚಿತ್ರೋತ್ಸವಕ್ಕೆ ಕನ್ನಡದ ಮೊದಲ ದಲಿತ ಮಹಿಳಾ ಆತ್ಮಕಥೆ ಆಧರಿತ ಚಿತ್ರ ‘ಮಾತಂಗಿ ದೀವಟಿಗೆ’ ಆಯ್ಕೆಯಾಗಿದೆ. ಈ ಕುರಿತು ನಿರ್ದೇಶಕ ಮಂಜು ಪಾಂಡವಪುರ ಅವರೊಂದಿಗೆ ನಾಗೇಶ ತಳವಾರ ನಡೆಸಿದ ಸಂದರ್ಶನ ಇಲ್ಲಿದೆ..

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ನಿಮ್ಮ ಚಿತ್ರ ಆಯ್ಕೆ ಆಗಿರುವ ಖುಷಿ ಹೇಗಿದೆ?

ತುಂಬಾ ಖುಷಿಯಾಗುತ್ತಿದೆ. ಸ್ನೇಹಿತರು, ಪರಿಚಯಸ್ಥರು ಫೋನ್ ಮಾಡಿ ಶುಭ ಕೋರುತ್ತಿದ್ದಾರೆ. ನಾನು ಮಾಡಿರುವ ನಾಲ್ಕು ಚಿತ್ರಗಳಲ್ಲಿ ಎರಡನೇ ಬಾರಿಗೆ ನನ್ನ ಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. 2018ರಲ್ಲಿ ಸ್ಮಶಾನ ಮೌನ ಚಿತ್ರ ಆಯ್ಕೆ ಆಗಿತ್ತು. ಈ ಬಾರಿ ಮಾತಂಗಿ ದೀವಟಿಗೆ ಆಯ್ಕೆ ಆಗಿದೆ. ಕಲಾತ್ಮಕ ಚಿತ್ರಗಳಿಗೆ ವೇದಿಕೆಗಳೆ ಈ ರೀತಿಯ ಚಲನ ಚಿತ್ರೋತ್ಸವಗಳು. ಕಮರ್ಷಿಯಲ್ ಚಿತ್ರಗಳಿಗೆ ಥಿಯೇಟರ್, ಟಿವಿ ರೈಟ್ಸ್ ಇರುತ್ತೆ. ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ವಲಯದವರು ಒಂದು ಚೌಕಟ್ಟಿನಲ್ಲಿ ಸಿನಿಮಾ ಮಾಡಿದಾಗ ವೇದಿಕೆ ಬೇಕಾಗುತ್ತೆ. ಅಂತಹ ವೇದಿಕೆ ಈ ರೀತಿಯ ಫೆಸ್ಟಿವಲ್ ಗಳಲ್ಲಿ ಸಿಗುತ್ತೆ.

ನಿರ್ದೇಶಕ ಮಂಜು ಪಾಂಡವಪುರ

ಕನ್ನಡದ ಪ್ರಥಮ ದಲಿತ ಮಹಿಳಾ ಆತ್ಮಕಥೆಯಾಧರಿತ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ?

ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದೆ. ಆಗ ಸಮತಾ ದೇಶಮಾನೆಯವರ ಮಾತಂಗಿ ದೇವಟಿಗೆ ಪುಸ್ತಕ ಸಹ ಓದಿದೆ. ಹಿಂದುಳಿದ ಬಡಕುಟುಂಬ ತೋರಿದ ಸಾಧನೆಯ ಕಥೆಯಿದೆ. ಇದನ್ನು ಓದಿದ ಮೇಲೆ ಸಿನಿಮಾ ಮಾಡಬೇಕು ಎಂದುಕೊಂಡೆ. ಲೇಖಕರೊಂದಿಗೆ ಮಾತನಾಡಿದೆ. ಜಿ.ವೈ ಪದ್ಮಾ ಮೇಡಂ ನಿರ್ಮಾಣ ಮಾಡಿದರು. ಐದು ತಿಂಗಳೊಳಗೆ ಚಿತ್ರ ಫೆಸ್ಟಿವಲ್ ತನಕ ಬಂದಿದೆ. ಬಾಂಬೆ, ಕೇರಳ, ಬೆಂಗಳೂರು ರೀತಿಯ ಫೆಸ್ಟಿವಲ್ ಗಳು ನಮಗೆ ಅವಕಾಶಗಳನ್ನು ಕೊಡುತ್ತವೆ.

ಉತ್ತರ ಕರ್ನಾಟಕ ಭಾಗದಲ್ಲಿ ಶೂಟಿಂಗ್ ನಡೆಸಿದ ಅನುಭವ..

ಈ ಚಿತ್ರವನ್ನು ಗುಲ್ಬರ್ಗಾ(ಕಲಬುರಗಿ) ಹಾಗೂ ಸುತ್ತಲಿನ ಪ್ರದೇಶದಲ್ಲಿ ಶೂಟಿಂಗ್ ಮಾಡಿದ್ದೇವೆ. ಒಂದು ದಿನ ಬೆಂಗಳೂರಿನಲ್ಲಿ ಶೂಟಿಂಗ್ ಆಗಿದೆ. ಲೇಖಕರ ಮನೆ, ಅಲ್ಲಿನ ಪರಿಸರ, ವಾತಾವರಣದ ಪರಿಕಲ್ಪನೆಗೆ ನಾವು ಒಪ್ಪಿಕೊಳ್ಳಬೇಕಿತ್ತು. ಹೀಗಾಗಿ ನಾವು ಗುಲ್ಬರ್ಗಾದಲ್ಲಿ ಶೂಟಿಂಗ್ ಮಾಡಿದ್ವಿ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ಗಂಟೆಯ ತನಕ ಶೂಟಿಂಗ್ ನಡಿತಿತ್ತು. ಒಳ್ಳೆಯ ಕಲಾವಿದರು ಸಿಕ್ಕರು. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಸ್ಪರ್ಧಿಸುವ ಕಲಾತ್ಮಕ ಚಿತ್ರಗಳಿಗೆ ಇಂಟರ್ ವಲ್ ಇರೋದಿಲ್ಲ. ಇಂತಿಷ್ಟೆ ಅನ್ನೋ ಅವಧಿಯ ಮಾನದಂಡ ಇರುತ್ತೆ. 10 ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ್ವಿ.

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಅಂದಾಗ ಚಿತ್ರಗಳ ಆಯ್ಕೆ ವಿಚಾರದಲ್ಲಿ ಒಂದಿಷ್ಟು ವಿವಾದ ಕೇಳಿ ಬರುತ್ತಲೇ ಇರುತ್ತೆ ಯಾಕೆ?

ಸಿನಿಮಾ ಕ್ಷೇತ್ರ ಮಾತ್ರವಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಪಾಸಿಟಿವ್ ನೆಗೆಟಿವ್ ಇದ್ದೇ ಇರುತ್ತೆ. ಕಥಾ ಹಂದರವನ್ನು ನೋಡಿಯೇ ಜ್ಯೂರಿಗಳು ಆಯ್ಕೆ ಮಾಡುತ್ತಾರೆ. ಆಯ್ಕೆ ಸಮಿತಿಗೆ ಅವರದೆಯಾದ ಮಾನದಂಡ ಇರುತ್ತೆ. ಅದನ್ನು ಫಾಲೋ ಮಾಡಿ ಅವರು ಆಯ್ಕೆ ಮಾಡುತ್ತಾರೆ.

ಡಾ.ವಿಜಯಲಕ್ಷ್ಮಿ ದೇಶಮಾನೆ

ಈ ಬಾರಿಗೆ ನಿಮ್ಮ ಚಿತ್ರಕ್ಕೆ ಪ್ರಶಸ್ತಿ ಬರುವ ಆಶಾಭಾವನೆ ಇದೆಯಾ?

ಪ್ರಶಸ್ತಿಗಾಗಿ ಚಿತ್ರವನ್ನು ಮಾಡಿಲ್ಲ. ನಮ್ಮ ಕೆಲಸಕ್ಕೆ ಸಿಕ್ಕರೆ ಸಿಗಲಿ. ಪ್ರಶಸ್ತಿಗೋಸ್ಕರವೇ ಸಿನಿಮಾ ಮಾಡಿದರೆ ನಮಗೆ ನಿರಾಸೆಯಾಗುತ್ತೆ. ನಮ್ಮ ಕೆಲಸಕ್ಕೆ ಸಿಕ್ಕರೆ ಮುಂದಿನ ಯೋಜನೆಗಳಿಗೆ ಶಕ್ತಿ ಬರುತ್ತೆ.

ಮಾತಂಗಿ ದೀವಟಿಗೆ ಚಿತ್ರದ ದೃಶ್ಯLeave a Reply

Your email address will not be published. Required fields are marked *

error: Content is protected !!