ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮನೆ ಬಳಿ ಆದ ಸ್ಟೋಟಕ್ಕೆ, ಮನೆಯ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ವೆಂಕಟೇಶ್ ಸಾವನ್ನಪ್ಪಿದ್ದಾನೆ. 11ನೇ ಬಿ ಕ್ರಾಸ್ ವೈಯಾಲಿಕಾವಲ್ ಬಳಿ ಇರುವ ಶಾಸಕ ಮುನಿರತ್ನ ಮನೆಯ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಫೋಟವಾಗಿದೆ. ಇದರ ತೀವ್ರತೆಗೆ ದೇಹ ಛಿದ್ರ ಛಿದ್ರವಾಗಿದೆ. ಇದರಿಂದಾಗಿ ಇದೀಗ ಬೆಂಗಳೂರು ಬೆಚ್ಚಿ ಬಿದ್ದಿದೆ.

ವೈಯಾಲಿಕಾವಲ್ ದೋಬಿಗಾಟ್ ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದ ಮೃತ ವೆಂಕಟೇಶ್, ಐದು ವರ್ಷಗಳಿಂದ ಮುನಿರತ್ನ ಕಚೇರಿ ಕೆಲಸ ಮಾಡ್ತಿದ್ದ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದ. ಈ ವೇಳೆ ಅನುಮಾನಸ್ಪದವಾದ ವಸ್ತು ಸ್ಫೋಟಗೊಂಡಿದೆ. ಇದರಿಂದಾಗಿ 45 ವರ್ಷದ ವೆಂಕಟೇಶ್ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರ ದೌಡಾಯಿಸಿದ್ದಾರೆ.
‘ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯ ಸ್ನೇಹಿತರು. ನಾವು ಕೂಡ ಜೊತೇಲೆ ಬೆಳೆದೋರು. ಅವನಿಗೆ ಹೀಗಾಗಿರೋದು ಬಹಳ ನೋವಿದೆ. ಹಾಗಾಗಿ ಏನೂ ಹೆಚ್ಚಿಗೆ ಮಾತನಾಡಲ್ಲ. ಮೊದಲನೆದಾಗಿ ನಾವೆಲ್ಲಾರೂ ಪೊಲೀಸರ ತನಿಖೆ ಏನ್ ಹೇಳುತ್ತೆ ಅದನ್ನು ಪಾಲನೆ ಮಾಡ್ಬೇಕು. ಸಂಪೂರ್ಣ ತನಿಖೆ ಆಗೋವರೆಗು ಕಾಯೋಣ. ರಾಜಕಾರಣಿ ಮನೆ ಬಳಿ ಆಗಿದೆ ಅನ್ನೋ ಊಹಾಪೋಹ ಬೇಡ’.
ಮುನಿರತ್ನ, ಶಾಸಕ, ರಾಜರಾಜೇಶ್ವರಿ ನಗರ
ಭೂಮಿಯೊಳಗಿಂದ ಕ್ರೇಟ್ ಮಾದರಿಯ ವಸ್ತು ಬ್ಲ್ಯಾಸ್ಟ್ ಆಗಿರೋದು ಮೇಲ್ನೋಟಕ್ಕೆ ಕಂಡುಬರ್ತಿದೆ. ಎಫ್ ಎಸ್ ಎಲ್ ತಂಡ ಪರಿಶೀಲನೆ ನಡೆಸಿದ ನಂತ್ರ ನಿಜವಾದ ಸಂಗತಿ ಗೊತ್ತಾಗಲಿದೆ ಎನ್ನಲಾಗ್ತಿದೆ. ಎನ್ ಐ ಎ ಸೇರಿದಂತೆ ಎಲ್ಲಾ ತನಿಖಾ ತಂಡಗಳಿಗೂ ವಿಚಾರ ಮುಟ್ಟಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಎಫ್.ಎಸ್.ಐ.ಎಲ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.