ಎಲ್ಲ ಸಾಹಿತ್ಯಕ್ಕೂ ಜಾನಪದ ಮೂಲ ಬೇರು: ಹ.ಮ ಪೂಜಾರ

325

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಜಾನಪದ ಸಾಹಿತ್ಯ ಮೂಲ ಬೇರು ಆಗಿದೆ. ಹಂತಿಪದ, ಲಾಲಿಪದ, ಸೋಬಾನೆ ಪದ ಹೀಗೆ ಜಾನಪದದಲ್ಲಿ ಈ ನೆಲದ ಸಂಸ್ಕೃತಿ ಹೊತ್ತ ಪರಂಪರೆ ಇದೆ. ಅದು ಮುಂದೆ ನವ್ಯ, ನವೋದಯ ಸೇರಿ ಬೇರೆ ಬೇರೆ ಸ್ವರೂಪ ಪಡೆಯಿತು ಎಂದು ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸಂಜೆ ಡಾ.ಚನ್ನಪ್ಪ ಕಟ್ಟಿ ಅವರ ಸಿತಾಳ ಬಿಂದಿಗೆ ಕೃತಿ ಲೋಕರ್ಪಣೆಯ ವೇಳೆ ನಡೆದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಉಚಿತ ಉಚಿತವಲ್ಲ ಎನ್ನುವ ರಾಜಕೀಯ ವಿಡಂಬನಾತ್ಮಕ ಕವಿತೆ ಓದಿ ಕವಿಗೋಷ್ಠಿಗೆ ಚಾಲನೆ ನೀಡಿದರು.

ಸಿಪಿಐ ಹುಲಗಪ್ಪ.ಡಿ ಪುಸ್ತಕ ಬಿಡುಗಡೆ ಮಾಡಿದರು. ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಶಿವಪ್ಪಣ್ಣ ಗವಸಾನೆ, ಲೇಖಕ ಡಾ.ಚನ್ನಪ್ಪ ಕಟ್ಟಿ ಮಾತನಾಡಿದರು. ಕೃತಿ ಪರಿಚಯ ಮಾಡಿದ ಇಂಡಿ ಲೇಖಕ ಚಿದಂಬರ ಬಂಡಗರ, ಸಿತಾಳ ಬಿಂದಿಗೆ ಕೃತಿಯಲ್ಲಿ 14 ಲೇಖನಗಳಿವೆ. ಹಾಲುಮತದ ದೈವಗಳು, ಕ್ಷೇತ್ರಗಳು, ಸಾಂಪ್ರದಾಯಿಕ ಆಚರಣೆಗಳು ಎಂದು ಮೂರು ವಿಂಗಡಣೆ ಮಾಡಿ ನೋಡಬಹುದಾಗಿದೆ. ಅಮೋಘಸಿದ್ಧ, ರೇವಣಸಿದ್ದರ ಪರಂಪರೆಯ ಕುರಿತಾದ ಸಂಶೋಧನಾತ್ಮಕ ಲೇಖನಗಳು ಓದುಗರಿಗೆ ಒಂದು ದೊಡ್ಡ ಸಮುದಾಯದ ಹಿನ್ನೆಲೆಯನ್ನು ತೆರೆದಿಡುತ್ತವೆ ಎಂದರು.

ಗೀತಾ ಹರಿಹರ-ನಮ್ಮ ಕಲಬುರ್ಗಿ ಗುರುಗಳು, ಎಸ್.ಎಸ್ ಸಾತಿಹಾಳ-ಎಲ್ಲಿಗೆ ಹೋದೆ ಬಾನುಲಿ, ರಾಚು ಕೊಪ್ಪ-ಹನಿ ಬದುಕಿಗಾಗಿ, ಜ್ಯೋತಿ ನಂದಿಮಠ-ನನ್ನದೇನು ಪ್ರಮಾಧ, ಮಹಾದೇವಿ ಹಿರೇಮಠ-ಜೀವನ ಒಂದು ನಾಟಕರಂಗ, ಶ್ರೀನಿವಾಸ ಜೋಶಿ- ಈ ಶತಮಾನದ ಸಂತ, ಸಂಗನಗೌಡ ಹಚಡದ-ಭಾವಿ ಶಿಕ್ಷರು, ಎಂ.ಐ ಮಕನಾದಾರ- ಸೃಷ್ಟಿಕರ್ತನ ಲೀಲೆ,  ಶೈಲಾ ನ್ಯಾಮಣ್ಣವರ- ನಡೆದಾಡುವ ದೇವರು, ಶಿಲ್ಪಾ ಪತ್ತಾರ- ಅನಂತದೆಡೆಗೆ, ಸಾಯಿಬಣ್ಣ ಮಾದರ- ಬಂದೂಕಿನ ನಳಿಕೆ ಹಾಗೂ ನಾಗೇಶ ತಳವಾರ- ನೀರಿನ ಮೇಲೆ ಹೆಸರು ಬರೆದವನು ಅನ್ನೋ ಕವಿತೆಗಳನ್ನು ವಾಚಿಸಿದರು.

ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಬಸವೇಶ್ವರ ಸರ್ಕಲ್ ನಿಂದ ಚಿಕ್ಕಸಿಂದಗಿ ಬೈಪಾಸ್ ವರೆಗಿನ ರಸ್ತೆಗೆ ಖ್ಯಾತ ಸಂಶೋಧಕ ಎಂ.ಎಂ ಕಲಬುರ್ಗಿ ಅವರ ಹೆಸರು, ವಿವೇಕಾನಂದ ಸರ್ಕಲ್ ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಗೆ ಮಾಜಿ ಸಚಿವ ಎಂ.ಸಿ ಮನಗೂಳಿ ಮಾರ್ಗ ಎಂದು ಅವರ ಹೆಸರು ಇಡುವ ಕಾರ್ಯ ಮಾಡಿದ ಪುರಸಭೆಯ ಸರ್ವಸದಸ್ಯರ ಪರವಾಗಿ ಅಧ್ಯಕ್ಷರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಶಕುಂತಲಾ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು. ಅಮೃತ ಗುರುರಾಜ ಪಡಶೆಟ್ಟಿ ಭಾವಗೀತೆ ಪಸ್ತುತಪಡಿಸಿದರು. ಲೇಖಕ ಮನು ಪತ್ತಾರ ನಿರೂಪಿಸಿದರು. ಶಿಕ್ಷಕ ಶಶಿ ಅವಟಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!