ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತಮಿಳುನಾಡಿಗೆ 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಇದರ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಶುಕ್ರವಾರ ಇಡೀ ಕರ್ನಾಟಕದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಇಷ್ಟಾದರೂ ರಾಜ್ಯದ 28 ಲೋಕಸಭಾ ಸದಸ್ಯರು ಮೌನ ವಹಿಸಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.
ಎರಡು ರಾಜ್ಯಗಳ ನಡುವೆ ದಶಕಗಳಿಂದ ಸಮಸ್ಯೆ ಮುಂದುವರೆಯುತ್ತಲೇ ಬರುತ್ತಿದೆ. ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಹೀಗಿರುವಾಗ ರಾಜ್ಯದಿಂದ 28 ಲೋಕಸಭಾ ಸದಸ್ಯರಿಂದ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸವೇ ಆಗುತ್ತಿಲ್ಲ. ಅದರಲ್ಲೂ ಬರೋಬ್ಬರಿ 25 ಸಂಸದರು ಬಿಜೆಪಿಯವರಿದ್ದಾರೆ. ಇವರಿಗೆ ಪ್ರಧಾನಿ ಮೋದಿ ಎದುರು ನಿಂತು ಮಾತನಾಡುವ ತಾಕತ್ತಿಲ್ಲವೆಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.
ಕೇಂದ್ರದಲ್ಲಿ ಸಂಸದೀಯ ಖಾತೆ ಸಚಿವರಾಗಿ ಪ್ರಹ್ಲಾದ್ ಜೋಶಿ ಇದ್ದಾರೆ. ರಾಜ್ಯ ಕೃಷಿ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ ಇದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರಾಗಿ ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್, ಮತ್ತೋರ್ವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಚಿವರಾಗಿದ್ದಾರೆ. ಇವರ್ಯಾರು ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಚಿತ್ರರಂಗದವರು, ಸಾಹಿತಿಗಳು, ಕನ್ನಡಪರ, ರೈತ ಪರ ಹೋರಾಟಗಾರರು ಮಾತ್ರ ಪ್ರತಿಭಟನೆ ಮಾಡಬೇಕು. ಆಡಳಿತಾತ್ಮಕ ಸ್ಥಾನದಲ್ಲಿದ್ದವರೇ ಬಾಯಿಗೆ ಬೀಗ ಹಾಕಿಕೊಂಡರೆ ಎಷ್ಟೇ ಹೋರಾಟ ಮಾಡಿದರೂ ಕೆಲಸವಾಗುವುದಿಲ್ಲ. ಹೀಗಾಗಿ ರಾಜ್ಯದ ಪರ ಮೊದಲು ನಿಂತು ಕೆಲಸ ಮಾಡಬೇಕಿರುವುದು ರಾಜ್ಯದಿಂದ ಆಯ್ಕೆಯಾದ 28 ಸಂಸದರು.