ಕನ್ನಡದ ಬಾವುಟ ಕನ್ನಡಿಗರ ಅಸ್ಮಿತೆ…

1612

2019ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ ಪಡೆದ ನಾಡೋಜ ಹಿರಿಯ ಕವಿ ಚೆನ್ನವೀರ ಕಣವಿ ಅವರ ಜೊತೆ ನಾಗೇಶ ತಳವಾರ ನಡೆಸಿದ ಸಂದರ್ಶನ ಇಲ್ಲಿದೆ…

ಕನ್ನಡದ ಮೊದಲ ಕೃತಿ ರಚಿಸಿದ ನೃಪತುಂಗನ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದರ ಬಗ್ಗೆ…

ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀವಿಜಯ ರಚಿಸಿದ ಕೃತಿಯಾಗಿದ್ದು, ನೃಪತುಂಗನ ಹೆಸರು ಅದರಲ್ಲಿ ಮೊದಲು ಹೇಳಿರುವುದ್ರಿಂದ ಆತನೆ ರಚಿಸಿದ ಅಂತಾರೆ. ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡದಾ ಕನ್ನಡದೋಳ್ ಅಂತಾ ಹೇಳಲಾಗಿದೆ. ಒಂದು ಭಾಷೆಯ ಮೂಲಕ ನಾಡನ್ನ ಗುರುತಿಸಿದ್ದು ಇದೆ ಮೊದಲು. ಇದು ಕಾವೇರಿಯಿಂದ ಗುಜರಾತವರೆಗೂ ವಿಸ್ತಿರಿಸಿತ್ತು ಅಂತ. ಕಸವರಮೆಂಬುದು ನೆರೆ ಸೈರಿಸಲಾರ್ಪಡೆ ಪರವಿಚಾರಮುಮಂ, ಧರ್ಮಮುಮಂ ಅಂತಾನೆ. ಅಂದ್ರೆ, ಪರಧರ್ಮ, ಪರವಿಚಾರಗಳ ಸಯಹಿಷ್ಣುತೆ ಇರಬೇಕು ಅನ್ನೋದು ಆಗಿನ ಕಾಲಕ್ಕೆ ಹೇಳಿದ್ದಾನೆ. ಅವನ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು ಖುಷಿಯಾಗುತ್ತೆ.

ಈ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕ ಭಾಗದ ಮೂರನೇ ಸಾಹಿತಿ ನೀವು..

ಹೌದು. ಉತ್ತರ ಕರ್ನಾಟಕ ಭಾಗದಲ್ಲಿ ಈ ಮೊದ್ಲು ಚಂದ್ರಶೇಖರ ಪಾಟೀಲ ಹಾಗೂ ಎಂ.ಎಂ ಕಲಬುರಗಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. 2007ರಲ್ಲಿ ಈ ಪ್ರಶಸ್ತಿ ಶುರುವಾಯ್ತು. ಮೊದಲಿಗೆ ಡಾ.ದೇ ಜವರೇಗೌಡ ಅವರಿಗೆ ನೀಡಿದಾಗ ಸಮಾರಂಭದ ಅಧ್ಯಕ್ಷತೆಯನ್ನ ನಾನು ವಹಿಸಿಕೊಂಡಿದ್ದೆ. ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ರು. ಆಗಿನ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಒರಿಸ್ಸಾ ಮೂಲದ ಉಪೇಂದ್ರ ತ್ರಿಪಾಟಿ ಅವರು 1.5 ಕೋಟಿ ದತ್ತಿ ಇಡುವ ಮೂಲಕ ಈ ಪ್ರಶಸ್ತಿ ಶುರು ಮಾಡಿದ್ರು. ಇದನ್ನ ಕನ್ನಡದ ಜ್ಞಾನಪೀಠ ಪ್ರಶಸ್ತಿ ಎಂದು ಕರೆಯಲಾಗುತ್ತೆ. ಜ್ಞಾನಪೀಠ ಪ್ರಶಸ್ತಿಗೆ ನೀಡುವ ಮೊತ್ತದ ಮೇಲೆ 1 ರೂಪಾಯಿ ಹೆಚ್ಚಿಗೆ ನೀಡಲಾಗುತ್ತೆ.

ನೃಪತುಂಗ ಓರ್ವ ರಾಜನಾಗಿದ್ದವನು. ಸಾಹಿತ್ಯಕ್ಕೆ ಆತ ನೀಡಿದ ಕೊಡುಗೆ ಬಗ್ಗೆ..

3ನೇ ಕೃಷ್ಣನ ಮಗ ನೃಪತುಂಗನ ಆಸ್ಥಾನದಲ್ಲಿ ಅನೇಕ ಸಾಹಿತಿಗಳಿಗೆ ಆಶ್ರಯ ನೀಡಲಾಗಿತ್ತು. ನಾವು ಯಾವುದನ್ನ ಕನ್ನಡದ ಪ್ರಾಚೀನ ಕೃತಿ ಅಂತಾ ಕರಿತೀವಿ, ಅದರಲ್ಲಿ ನಾಡು, ನುಡಿ, ಸಾಹಿತ್ಯದ ಸಾರವಿದೆ. ಬಿಎಂಶ್ರೀ ಅವರ ಕನ್ನಡ ಬಾವುಟ ಕವನ ಸಂಕಲನದಲ್ಲಿ 8ನೇ ಶತಮಾನದಿಂದ ಶುರುವಾಗಿ ಶರಣರಾದಿಯಾಗಿ ನವೋದಯ ಸಾಹಿತ್ಯದ ತನಕ ಕಾವ್ಯವಿದೆ. ಅದರಲ್ಲಿ ಸ್ವತಃ ಅವರದು ಒಂದು ಕವಿತೆಯಿದೆ. ನೃಪತುಂಗನ ಕಾಲದಲ್ಲಿ ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಿದ ಕಾರಣಕ್ಕೆ ಇಂದಿಗೂ ಆತ ಪ್ರಸ್ತುತ.

ಧಾರವಾಡ ಸಾಹಿತ್ಯ ಸಂಭ್ರಮದ ಕುರಿತು…

ಮೊದಲಿನಿಂದಲೂ ಮೂರು ಸಾಂಸ್ಕೃತಿಕ ನಗರಗಳು. ಧಾರವಾಡ, ಮೈಸೂರು, ಮಂಗಳೂರು. ಧಾರವಾಡ ನೆಲದ ಜೊತೆಗೆ ಪ್ರತಿಯೊಬ್ಬ ಸಾಹಿತಿ ಒಂದಲ್ಲ ಒಂದು ರೀತಿಯ ಸಂಬಂಧ ಹೊಂದ್ಯಾನ. ಸಾಹಿತ್ಯ ಸಂಭ್ರಮ ಸಾಹಿತ್ಯ ಸಮ್ಮೇಳನದ ಪ್ರತಿಯಾಗಿ ಅಲ್ಲ. ಮೂರು ದಿನಗಳ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆ, ಸಂವಾದ, ಚರ್ಚೆ, ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದನ್ನ ಮುಂದುವರೆಸಿಕೊಂಡು ಹೋಗಬೇಕು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರಾಗಿರುವ ಸಿ.ಟಿ ರವಿ ಅವರು ಇದನ್ನ ಮುಂದುವರೆಸಿಕೊಂಡು ಹೋಗಬೇಕು. ಈ ಹಿಂದೆ ಜಯಮಲಾ ಅವರು 15 ಲಕ್ಷ ರೂಪಾಯಿ ನೀಡಿದ್ರು. ಅದೇ ರೀತಿ ಸಿ.ಟಿ ರವಿ ಅವರು ಇದನ್ನ ನಿಲ್ಲಿಸದಂತೆ ನಡೆಸಿಕೊಂಡು ಹೋಗಬೇಕು.

ಈ ಹಿಂದಿನ ಸಾಹಿತ್ಯ ಸಂಭ್ರಮದ ಕಹಿ ಘಟನೆ..

ನಾನು ಆಗ ಕಾರ್ಯಕ್ರಮದಲ್ಲಿ ಇರ್ಲಿಲ್ಲ. ಎಸ್ ಡಿಎಂನಲ್ಲಿ 15 ದಿನ ಅಡ್ಮಿಟ್ ಆಗಿದ್ದೆ.

ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಬಹುತೇಕ ಜಾರಿಗೆ ಬರುವುದಿಲ್ಲ..

ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ತುಂಬಾ ಕಡಿಮೆ ಮತ್ತು ಅವಶ್ಯಕವಾಗಿರುವವು ಇರಬೇಕು. ಯಾಕಂದ್ರೆ, ಯಾರಿಗೂ ಇವುಗಳನ್ನ ಈಡೇರಿಸುವ ಆಸಕ್ತಿಯಿಲ್ಲ. ಇದುವರೆಗೂ ಯಾವ ಶಾಸಕ, ಮಂತ್ರಿ ಕನ್ನಡಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ.

ಪ್ರತ್ಯೇಕ ಕನ್ನಡ ಬಾವುಟ ಬೇಕೋ ಬೇಡ್ವೋ..

ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು. ಇದು ಕನ್ನಡದ ಅಸ್ಮಿತೆ. ರಾಷ್ಟ್ರದ ಜೊತೆಗೆ ಕನ್ನಡ ಬಾವುಟ ಇರ್ಲಿ. ರಾಷ್ಟ್ರಗೀತೆಯ ಜೊತೆಗೆ ಕುವೆಂಪು ಅವರು ರಚಿಸಿದ ಗೀತೆಯನ್ನ ನಾಡಗೀತೆಯನ್ನಾಗಿ ಹಾಡ್ತೀವಿ. ಹಾಗೆ ಇದು. 1939ರಲ್ಲಿ ಕನ್ನಡ ಬಾವುಟ ಇರ್ಲಿಲ್ಲ. ಈ ಮೊದ್ಲು ಬಿಎಂಶ್ರೀ ಅವರು ಬರೆದ ಏರಿಸಿ ಹಾರಿಸಿ ಕನ್ನಡದ ಬಾವುಟ ಹಾಡನ್ನ ಎಲ್ಲ ಕಡೆ ಹಾಡುತ್ತಿದ್ದೀವಿ.

ಯುವ ಕವಿಗಳಿಗೆ ನಿಮ್ಮ ಸಲಹೆ…

ಅಧ್ಯಯನಶೀಲರಾಗಬೇಕು. ಅವಸರ ಮಾಡಬಾರದು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಪ, ರನ್ನ, ಬಸವಣ್ಣ, ಪುರಂದರದಾಸ ಸೇರಿದಂತೆ ಯಾರನ್ನೂ ಬಿಟ್ಟು ಮುಂದೆ ಹೋಗಲು ಸಾಧ್ಯವಿಲ್ಲ. ಒಂದು ಸಂಕಲನ ಬಂದ ತಕ್ಷಣ ಅವಸರ ಮಾಡಬಾರದು. ಬೇಂದ್ರೆ, ಮಾಸ್ತಿ, ಡಿವಿಜಿ ಅವರು ಅವಸರ ಮಾಡ್ಲಿಲ್ಲ. ಅವರು ಮಾಡಿದಷ್ಟು ಸಾಧನೆ ನಮ್ಗೆ ಮಾಡಲು ಆಗ್ಲಿಲ್ಲ. ಹೀಗಾಗಿ ಆಳವಾಗಿ ಅಧ್ಯಯನ ಮಾಡಬೇಕು.




Leave a Reply

Your email address will not be published. Required fields are marked *

error: Content is protected !!