ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರೊಂದಿಗೆ ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಪಾದಕ ನಾಗೇಶ ತಳವಾರ ಅವರು ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
ನಾಗೇಶ ತಳವಾರ: ನಾಟಕದಿಂದ ಸಿನಿಮಾದವರೆಗೂ ನಿಮ್ಮ ಜೀವನ ಸಾಗಿದೆ. ನಿಮ್ಮ ರಂಗಭೂಮಿಯ ದಿನಗಳನ್ನು ನೆನಪಿಸಿಕೊಳ್ಳುವುದಾದರೆ..
ರಾಜು ತಾಳಿಕೋಟಿ: ನಾನು ಹುಟ್ಟಿದ್ದೆ ಅಲ್ಲೇ. ಖಾಸ್ಗತೇಶ್ವರ ಮಠದಲ್ಲಿಯೇ ನಮ್ಮ ವಿದ್ಯಾಭ್ಯಾಸ ಆಗಿದೆ. ಮಠದಲ್ಲಿಯೇ ಹಾರ್ಮೋನಿಯಂ ಅಭ್ಯಾಸ ಮಾಡುತ್ತಿದ್ದೆ. ನಾಲ್ಕನೇ ತರಗತಿವರೆಗೂ ಓದಿದೆ. ಮುಂದೆ ಅರ್ಧಕ್ಕೆ ಓದು ನಿಂತಿತು. ಅಲ್ಲಿಂದ ಹೋಟೆಲ್ ಕೆಲಸ, ಲಾರಿ ಕ್ಲೀನರ್ ಕೆಲಸ ಮಾಡುತ್ತಲೇ ನಾಟಕದತ್ತ ಬಂದೆ. ಕಸ ಗುಡಿಸಿದೆ. ಗೇಟ್ ಕೀಪರ್ ಕೆಲಸ ಮಾಡಿದೆ. ಗ್ರೀನ್ ರೂಮ್ ಕೆಲಸ ಮಾಡಿದೆ. ಪರದೆ ಎಳೆಯುವುದು, ವೈರ್ ಕೆಲಸ ಮಾಡುವುದು, ಪ್ರಚಾರ ಕೆಲಸ ಮಾಡುತ್ತಾ ನಟನೆಗೆ ಬಂದೆ.
ನಿಮ್ಮ ಖಾಸ್ಗತೇಶ್ವರ ನಾಟ್ಯ ಸಂಘ ಕಟ್ಟುವ ಹೊತ್ತಿನಲ್ಲಿ ರಾಜ್ಯದಲ್ಲಿ ದೊಡ್ಡ ದೊಡ್ಡ ನಾಟಕ ಸಂಘಗಳು ಇದ್ದವು. ಅಂತಹ ಸಂದರ್ಭದಲ್ಲಿ ಎದುರಾದ ಸವಾಲುಗಳೇನು?
ಆಗ ಸಾಕಷ್ಟು ಮಾತನಾಡಿಕೊಳ್ಳುತ್ತಿದ್ದರು. ಇಂವನು ಏನು ಮಾಡುತ್ತಾನೆ ಎಂದು. ದೊಡ್ಡ ದೊಡ್ಡ ಜಮೀನ್ದಾರರು, ಪಾಳೇಗಾರರು ಉಳಿದಿಲ್ಲ. ಇಂವನೇನು ಎನ್ನುತ್ತಿದ್ದರು. ದೈವ ಹಾಗೂ ಜನರ ಆಶೀರ್ವಾದಿಂದ ಆಗಿನ ಕಾಲಕ್ಕೆ ನಾನು ಕಲಿಯುಗದ ಕುಡುಕ ಅನ್ನೋ ಕ್ಯಾಸೆಟ್ ಬಿಡುಗಡೆ ಮಾಡಿದೆ. ಅದು ಸಾಕಷ್ಟು ಜನಪ್ರಿಯತೆ ಪಡೆಯಿತು. ಬೇರೆ ಬೇರೆ ರಾಜ್ಯಗಳಲ್ಲಿಯೂ ಪ್ರಚಾರ ಪಡೆಯಿತು. ಮುಂದೆ ನಾಟಕ ಮಾಡಿದೆ. 30-40 ವರ್ಷಗಳ ಇತಿಹಾಸವಿರುವ ನಾಟಕ ಸಂಘಗಳು ಸಹ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ ಬರುತ್ತೆ ಅಂದರೆ ಹೆದರಲು ಶುರು ಮಾಡಿದರು. ಅದು ನನಗೂ ಸವಾಲಾಗಿತ್ತು. ಅವರಿಗೆ ಹೆದರಿ ನಾನು ಹೋಗುತ್ತಿದ್ದೆ. ದೈವಾನುಗ್ರಹದಿಂದ 22 ವರ್ಷಗಳಿಂದ ಸಂಸ್ಥೆ ನಡೆಯುತ್ತಿದೆ.

ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಸಿನಿಮಾ ಕ್ಷೇತ್ರದ ಪಯಣ ಶುರುವಾಗಿದ್ದು ಹೇಗೆ?
ನನ್ನ ಪಾಡಿಗೆ ನಾನು ನಾಟಕಗಳನ್ನು ಮಾಡಿಕೊಂಡು ಇದ್ದೆ. ನಾನು ಸಿನಿಮಾಗಾಗಿ ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ನನ್ನ ಕ್ಯಾಸೆಟ್ ಖ್ಯಾತಿಯಿಂದ ಮೊದಲು ಆನಂದ ಪಿ ರಾಜು ಅನ್ನೋ ನಿರ್ದೇಶಕರು ಹೆಂಡ್ತಿ ಅಂದ್ರೆ ಹೆಂಡ್ತಿ ಚಿತ್ರದಲ್ಲಿ ಅವಕಾಶ ಕೊಟ್ಟರು. ಪಂಜಾಬಿ ಹೌಸ್ ನಲ್ಲಿ ವಿ.ಆರ್ ಭಸ್ಕಾರ ಅವರು ಅವಕಾಶ ನೀಡಿದರು. ಆದ್ರೆ, ದೊಡ್ಡ ಪ್ರಮಾಣದಲ್ಲಿ ಜನರಿಗೆ ನಾನು ರಿಜಿಸ್ಟರ್ ಆಗಿರ್ಲಿಲ್ಲ. ಯೋಗರಾಜ ಭಟ್ಟರ ಮನಸಾರೆ ಚಿತ್ರದಿಂದ ನನಗೆ ಖ್ಯಾತಿ ಬಂದಿತು. ಹೆಚ್ಚು ಕಡಿಮೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ತೃಪ್ತಿ ತಂದಿದೆ. ಆದ್ರೆ, ನಾನು ಹುಡುಕಿಕೊಂಡು ಹೋಗಿ ಸಿನಿಮಾ ಮಾಡಿದವನಲ್ಲ.
ಸಿನಿಮಾದ ಬಳಿಕ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದೀರಿ..
ಹೌದು ಮೊದಲು ಬಿಗ್ ಬಾಸ್ ಗೆ ಹೋದೆ. ಅವರು ಹಾಡು ಹಾಕಿದಾಗ ಕುಣಿಬೇಕು. ಅದೆ ಮುಖಗಳು. ಅದೊಂದು ರೀತಿಯ ಜೈಲು ಇದ್ದಂತೆ. ಇರ್ಲಿ, ಅದೊಂದು ರೀತಿಯ ಪ್ರವೃತ್ತಿ. ಈಗ ರಾಜಾ ರಾಣಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದೀನಿ. ಬಿಗ್ ಬಾಸ್ ನಲ್ಲಿ ನಾವೊಬ್ಬರೆ ಇರುತ್ತೇವೆ. ಇದರಲ್ಲಿ ನಮ್ಮ ಪತ್ನಿಯ ಜೊತೆಗೆ ಭಾಗವಹಿಸಬೇಕು. ಇದೊಂದು ರೀತಿಯ ಅನುಭವ.
ರಂಗಭೂಮಿ, ಸಿನಿಮಾ, ರಿಯಾಲಿಟಿ ಶೋ ಜೊತೆ ಜೊತೆಗೆ ರಾಜಕೀಯಕ್ಕೂ ಪ್ರವೇಶ ಮಾಡುತ್ತೀರಿ..
ಜನರ ಸೇವೆ ಮಾಡುವ ಸಲುವಾಗಿ ಕಳೆದ ಬಾರಿಯ 2018ರಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಿಂದ ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸಿದ್ದೆ. ಆದ್ರೆ, ಅಲ್ಲಿನ ವ್ಯವಸ್ಥೆ ನೋಡಿ ಸಾಕಪ್ಪ ಸಾಕು ಎನಿಸಿತು. ಇದು ನನ್ನದಲ್ಲ ಎಂದು ತಿಳಿದ ಮೇಲೆ ಅದರಿಂದ ದೂರು ಉಳಿದಿದ್ದೇನೆ. ಯಾರಾದರೂ ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ.
ರಾಜು ತಾಳಿಕೋಟಿ ಅಂದರೆ ಬಹುಮುಖ ಪ್ರತಿಭೆ. ಎಲ್ಲ ಕ್ಷೇತ್ರದ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರಿ..
ಹೌದು, ಒಂದಿಷ್ಟು ಜಮೀನು ಖರೀದಿಸಿದೆ. ನಿಂಬೆ, ದ್ರಾಕ್ಷಿ ಸೇರಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತೇನೆ. ಕುರಿ ಸಾಕಾಣಿಕೆ ಮಾಡುತ್ತಿದ್ದೇನೆ. ಸಾವಯವ ಗೊಬ್ಬರದ ಮೂಲಕ ಭೂಮಿಯ ಸತ್ವವನ್ನು ಕಾಪಾಡಿಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ. ಶೂಟಿಂಗ್ ಇದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗುತ್ತೇನೆ. ಅಲ್ಲಿಂದ ಊರಿಗೆ ಬರುತ್ತೇನೆ. ಬೆಂಗಳೂರಿನಲ್ಲಿ ನಾನು ಯಾವುದೇ ರೀತಿಯ ಆಸ್ತಿ ಮಾಡಲಿಲ್ಲ. ನಾನು ಹುಟ್ಟಿ ಬೆಳೆದಿದ್ದು ತಾಳಿಕೋಟಿ. ನೆಲೆಸಿರುವುದು ಸಿಂದಗಿಯಲ್ಲಿ. ಕೃಷಿಯಲ್ಲಿಯೂ ನಾನು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇನೆ.