ಶಾಸಕರಿಲ್ಲದ ಸಿಂದಗಿಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..

918

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಾವಿನ ಸಂಖ್ಯೆ ಕೂಡಾ ಏರುಗತಿಯಲ್ಲಿದೆ. ಸರಿಸುಮಾರು ದಿನಕ್ಕೆ ಎರಡ್ಮೂರು ಜನರಾದರೂ ಕೋವಿಡ್ ಸೋಂಕಿನಿಂದ ಮೃತಪಡುತ್ತಿದ್ದಾರೆ. ಇನ್ನು ಕೆಲವರು ಜಿಲ್ಲಾ ಕೇಂದ್ರದ ವಿವಿಧ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಳ್ತಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ದಿನಕ್ಕೆ ಸುಮಾರು ಏಳೆಂಟು ಜನರು ಮೃತ ಪಡ್ತಿರುವುದು ಸಾಮಾನ್ಯವಾಗಿದೆ.

ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿಗೆ ದಾಖಲಾಗುವವರ ಸಂಖ್ಯೆ ಕೂಡಾ ಹೆಚ್ಚಿದೆ. ಆದ್ರೆ, ತುರ್ತಾಗಿ ಬೇಕಾಗಿರುವ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಇತರೆ ವೈದ್ಯಕೀಯ ಸೇವೆಗಳಿಲ್ಲದೆ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಜಿಲ್ಲಾಧಿಕಾರಿಗಳಾಗ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾಗ್ಲಿ ತಾಲೂಕಿಗೆ ಭೇಟಿ ಕೊಡದೆ ಇರುವುದಕ್ಕೆ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗ್ತಿದೆ.

”ತಾಲೂಕಿನಲ್ಲಿ ಕರೋನಾ ಸೋಂಕಿನಿಂದ ದಿನಕ್ಕೆ ಏಳೆಂಟು ಜನರು ಸಾಯುತ್ತಿದ್ದಾರೆ. ಇಲ್ಲಿ ಶಾಸಕರಿಲ್ಲ. ಹೀಗಾಗಿ ಇದರ ಹೊಣೆಯನ್ನ ಜಿಲ್ಲಾಡಳಿತ ವಹಿಸಿಕೊಳ್ಳಬೇಕು. ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನ ಸರ್ಕಾರವೇ ನೀಡಿ, ಸಂಪೂರ್ಣವಾಗಿ ಲಾಕ್ ಡೌನ್ ಮಾಡಬೇಕು.”

ಶರಣಪ್ಪ ಸುಣಗಾರ, ಮಾಜಿ ಶಾಸಕರು

ಇನ್ನು ಕ್ಷೇತ್ರದ ಶಾಸಕರಾಗಿದ್ದ ಎಂ.ಸಿ ಮನಗೂಳಿ ಅವರು ನಿಧನರಾಗಿ ಸುಮಾರು ನಾಲ್ಕು ತಿಂಗಳು ಆಗುತ್ತಿದೆ. ಇದ್ರಿಂದಾಗಿ ಕ್ಷೇತ್ರಕ್ಕೆ ಶಾಸಕರಿಲ್ಲ. ಏಪ್ರಿಲ್ 17ರಂದು ಮೂರು ಕ್ಷೇತ್ರಗಳ ಜೊತೆಗೆ ಸಿಂದಗಿ ಮತಕ್ಷೇತ್ರಕ್ಕೂ ಉಪ ಚುನಾವಣೆ ಆಗುತ್ತೆ ಎಂದುಕೊಂಡಿದ್ದ ಜನಕ್ಕೆ ನಿರಾಸೆಯಾಯ್ತು. ಈಗ ಕೋವಿಡ್ ಸಮುದಾಯಕ್ಕೆ ಹರಡಿದೆ. ಇಂಥಾ ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದು ಕಷ್ಟ. ಶಾಸಕರಿಲ್ಲದ ಕ್ಷೇತ್ರದ ಜನತೆಯ ಸಮಸ್ಯೆಯನ್ನ ಕೇಳೋದ್ಯಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.

”ತಾಲೂಕು ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರಕ್ಕೆ ನಾನು ಭೇಟಿ ನೀಡಿದ್ದೇನೆ. ಅಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ರೋಗಿಗಳಿಗೆ ಬೇಕಾದ ವೈದ್ಯಕೀಯ ಸೇವೆಯನ್ನ ಸರಿಯಾಗಿ ನೀಡಬೇಕೆಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ಅವರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ನಾನೇ ಪತ್ರಿಕಾಗೋಷ್ಠಿಯನ್ನು ಕರೆಯುತ್ತೇನೆ.”

ಅಶೋಕ ಅಲ್ಲಾಪೂರ, ಅಧ್ಯಕ್ಷರು, ನಿಂಬೆ ಅಭಿವೃದ್ಧಿ ಮಂಡಳಿ, ಇಂಡಿ

ತಾಲೂಕಿನ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದಂತೆ ಆಗಲಿ, ಇತರೆ ಕಡೆಗಳಲ್ಲಿ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದ್ಯಾ ಇಲ್ಲವೋ ಅನ್ನೋದಾಗಲಿ, ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆ ಆಗಲಿ, ತಾಲೂಕಿನ ವೈದ್ಯಕೀಯ ಸಮಸ್ಯೆಗಳು ಏನಿವೆ? ಆಕ್ಸಿಜನ್, ವೆಂಟಿಲೇಟರ್, ರೆಮ್ ಡಿಸಿವರ್ ಸೇರಿದಂತೆ ಯಾವುದೆಲ್ಲ ಕೊರತೆ ಇದ್ಯಾ ಅಥವ ಎಲ್ಲವೂ ಸಂಗ್ರಹಿಸಲಾಗಿದ್ಯಾ? ಮುಂಜಾಗ್ರತ ಕ್ರಮಗಳನ್ನ ಏನು ತೆಗೆದುಕೊಳ್ಳಲಾಗಿದೆ ಅನ್ನೋದರ ಕುರಿತು ಮಾಧ್ಯಮಗಳಿಗೂ ಹೇಳುವವರಿಲ್ಲ. ಒಟ್ಟಿನಲ್ಲಿ ಇಲ್ಲಿನ ಸಾವು ನೋವಿಗೆ ಯಾರು ಹೊಣೆ ಅನ್ನೋ ಪ್ರಶ್ನೆ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!