ಕಲಬುರ್ಗಿ ‘ಸಮಾಧಿ’ ಕಥೆ..!

429

ಖ್ಯಾತ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಅವರು, ಅಪರಿಚಿತ ಹಂತಕರಿಬ್ಬರ ಗುಂಡಿಗೆ ಬಲಿಯಾಗಿ ನಾಲ್ಕು ವರ್ಷ ಆಗುತ್ತಿದೆ. ಪ್ರಾಧ್ಯಾಪಕ, ಲೇಖಕ ಹಾಗೂ ಕುಲಪತಿಯಾಗಿ ಕಾರ್ಯನಿರ್ವಹಿಸಿದ ಕಲಬುರ್ಗಿ ಅವರು, ತಮ್ಮ ಸಂಶೋಧನೆಗಳ ಮೂಲಕ ಇಡೀ ದೇಶದಲ್ಲಿ ಅಗ್ರ ಸ್ಥಾನ ಪಡೆದವರು. ಅಪಾರ ಬೆಂಬಲಿಗರನ್ನ, ಅಭಿಮಾನಿಗಳನ್ನ, ಶಿಷ್ಯವೃಂದವನ್ನ ದೇಶ, ವಿದೇಶಗಳಲ್ಲಿ ಹೊಂದಿರುವ ಇವರು, 2015 ಆಗಷ್ಟ್ 20ರ ಬೆಳಗ್ಗೆ ಹಂತಕರಿಬ್ಬರ ಗುಂಡಿಗೆ ಬಲಿಯಾದರು.

ಕಲಬುರ್ಗಿ ಅವರ ಅಂತ್ಯಕ್ರಿಯೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಲಾಯ್ತು. ಅವರ ಹೆಸರು ಶಾಶ್ವತವಾಗಿ ಉಳಿಯಲು ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ವರ್ಷಗಳು ಉರುಳುತ್ತಾ ಬರುತ್ತಿವೆ. ಆ ಕಡೆ ಹಂತಕರ ಪತ್ತೆ ಸಹ ಆಗ್ತಿಲ್ಲ. ಈ ಕಡೆ ಅವರ ಸಮಾಧಿ ನಿರ್ಮಿಸುವ ಕಾರ್ಯವೂ ಆಗ್ತಿಲ್ಲ. ಕವಿವಿ ಆಡಳಿತ ಮಂಡಳಿ ಸಮಾಧಿ ನಿರ್ಮಿಸಲು 10 ಚದರ ಅಡಿ ಜಾಗ ನೀಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದಾಗಿ ಆ ಕಾರ್ಯ ಇಂದಿಗೂ ಆಗಿಲ್ಲ.

ಡಾ.ಡಿ.ಸಿ ಪಾವಟೆ ಅವರ ಸಮಾಧಿ ಇರುವ ಮಂಟಪ ಬಳಿ ಅಂತ್ಯಕ್ರಿಯೆ ಮಾಡಲಾಗಿದೆ ಅನ್ನೋ ಒಂದೇ ಒಂದು ಗುರುತು ಇದೆ. ಇದರ ಹೊರತಾಗಿ ಒಂದು ಸಣ್ಣ ಹೆಸರು ಸಹ ಇಲ್ಲ. ಕುಟುಂಬಸ್ಥರು ಇಟ್ಟಿದ್ದ ಕಲ್ಲನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಸಮಾಧಿ ನಿರ್ಮಾಣ ವಿಚಾರವಾಗಿ ಕವಿವಿ ಆಡಳಿತ ಮಂಡಳಿಗೆ ಕಳೆದ ಜನವರಿಯಲ್ಲಿಯೇ ಮನೆಯವರು ಮನವಿ ಮಾಡಿದ್ದಾರೆ. ಆದರೆ, ಸಮಾಧಿಗೆ ಜಾಗ ನೀಡಲು ವಿವಿ ಕಾನೂನಿನಲ್ಲಿ ಅವಕಾಶವಿಲ್ಲ ಅಂತಾ ಹೇಳುತ್ತಿದ್ದಾರಂತೆ.

ಡಾ.ಎಂ.ಎಂ ಕಲಬುರ್ಗಿ ಅವರ ಸಮಾಧಿ

ಸಚಿವರು, ಶಾಸಕರು ಹಾಗೂ ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು. ಕವಿವಿ ಆವರಣದಲ್ಲಿ ಮಣ್ಣು ಮಾಡುವ ವಿಚಾರದ ಬಗ್ಗೆ ಮನೆಯವರ ಒಪ್ಪಿಗೆ ಸಹ ಕೇಳಿಲ್ಲವಂತೆ. ಸರ್ಕಾರ ಹಾಗೂ ಹಿರಿಯ ಸಾಹಿತಿಗಳು ಕವಿವಿ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸುವ ನಿರ್ಧಾರ ಮಾಡಿದರಂತೆ. ಆದರೆ, ಸರ್ಕಾರ ಅಂದು ನೀಡಿದ್ದ ಭರವಸೆಯನ್ನು ಮರೆತು ಬಿಟ್ಟಿದೆ. ಹೀಗಾಗಿ ಸಮಾಧಿ ನಿರ್ಮಿಸಲು 10 ಚದರ ಅಡಿ ಜಾಗ ಸಿಗ್ತಿಲ್ಲ.

ಡಾ.ಎಂ.ಎಂ ಕಲಬುರ್ಗಿ ಅವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದವರು. ತಾಯಿ ಗುರಮ್ಮ, ತಂದೆ ಮಡಿವಾಳಪ್ಪ. ತಾಯಿ ಊರಾದ ಗುಬ್ಬೇವಾಡದಲ್ಲಿ 1938 ನವೆಂಬರ್ 28ರಂದು ಮಲ್ಲೇಶಪ್ಪನ ಜನನವಾಗುತ್ತೆ. ಎಂಎ ವ್ಯಾಸಂಗ ಮುಗಿಸಿದ ಇವರು, ಧಾರವಾಡವನ್ನ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು. ಅಧ್ಯಾಪಕ, ಪ್ರಾಧ್ಯಾಪಕ, ಕುಲಪತಿಯಾಗಿಯೂ(ಹಂಪಿ ವಿವಿ) ಕಾರ್ಯನಿರ್ವಹಿಸಿದರು. ಸಂಶೋಧನೆ ಕ್ಷೇತ್ರದಲ್ಲಿ ಕಲಬುರ್ಗಿ ಅವರಿಗೆ ಬಹುದೊಡ್ಡ ಸ್ಥಾನವಿದೆ.

ನಟರ ಸಮಾಧಿ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ಆಸಕ್ತಿಯನ್ನ, ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತಿಗಳ, ಸಂಶೋಧಕರ ವಿಚಾರದಲ್ಲಿ ಯಾಕೆ ತೆಗೆದುಕೊಳ್ಳುವುದಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಡಾ. ಕಲಬುರ್ಗಿ ಅವರು ಖ್ಯಾತ ಸಂಶೋಧಕ, ಶಾಸನಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಜನಪದ, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇಂಥಾ ಹಿರಿಯ ಚೇತನಕ್ಕೆ ಸಿಗಬೇಕಾದ ಗೌರವ ಸಿಗದೇ ಇರೋದು ಕುಟುಂಬಸ್ಥರಲ್ಲಿ, ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!