ಆಸೆ ಈಡೇರುವ ಮೊದ್ಲೇ ಕಣ್ಮರೆಯಾದ ಸತಿ.. ಆಕೆ ನೆನಪಿಗೆ ಮೂರ್ತಿ ನಿರ್ಮಿಸಿದ ಪತಿ

419

ಪ್ರಜಾಸ್ತ್ರ ವಿಶೇಷ ಸುದ್ದಿ

ಕೊಪ್ಪಳ: ಪತಿ ಪತ್ನಿ ಸಂಬಂಧ ಅನ್ನೋದು ಮಧುರಭಾವನೆಯ ನಂಟು. ಪ್ರೀತಿ, ಪ್ರೇಮ, ಜಗಳ, ಕದನ, ತುಂಟಾಟ ಎಲ್ಲವೂ ಇದೆ. ಹೀಗಾಗಿ ಅದೆಷ್ಟೋ ಜೋಡಿಗಳು ಕೊನೆಯುಸಿರಿರುವ ತನಕ ಆ ಪ್ರೀತಿಯನ್ನ ಕಾಪಾಡಿಕೊಂಡು ಬರ್ತವೆ. ಇದರ ಜೊತೆಗೆ ಸಾವಿನ ಬಳಿಕವೂ ಅದನ್ನ ಕಾಪಿಟ್ಟುಕೊಳ್ಳುತ್ತಾರೆ. ಅಂತಹ ಜೋಡಿಗಳಲ್ಲಿ ಕೊಪ್ಪಳದ ಭಾಗ್ಯ ನಗರದ ಉದ್ಯಮಿ ಶ್ರೀನಿವಾಸ ಗುಪ್ತ ಹಾಗೂ ಮಾಧವಿ.

ಮಾಧವಿಗೆ ತಮ್ಮದೊಂದು ಕನಸಿನ ಮನೆ ಹೊಂದಬೇಕು ಅನ್ನೋ ಆಸೆ ಇತ್ತು. ಇದಕ್ಕಾಗಿ 2017ರಲ್ಲಿ ಭೂಮಿ ಪೂಜೆ ನೆರವೇರಿಸಿ ಕೆಲಸ ಶುರು ಮಾಡಿದ್ರು. ಆದ್ರೆ, ವಿಧಿ ಬೇರೆಯದೆ ಆಟವಾಡಿತ್ತು. 2017, ಜುಲೈ 5ರಂದು ತಿರುಪತಿಗೆ ತೆರಳಿ ವಾಪಸ್ ಬರುವಾಗ ಅಪಘಾತ ಸಂಭವಿಸಿ ಮಾಧವಿ ಮೃತಪಡುತ್ತಾರೆ. ಇದ್ರಿಂದ ತೀವ್ರ ಆಘಾತಕ್ಕೆ ಒಳಗಾದ ಪತಿ ಶ್ರೀನಿವಾಸ ಚೇತರಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಗುತ್ತೆ. ಹೀಗಾಗಿ ಮನೆ ಕೆಲಸ ನಿಂತು ಬಿಡುತ್ತೆ.

ಮುಂದೆ ಮಕ್ಕಳ ಒತ್ತಾಯದ ಮೇರೆಗೆ ಪುನಃ ಮನೆ ನಿರ್ಮಾಣ ಕೆಲಸ ಶುರು ಮಾಡಿ ಇದೀಗ ಅದನ್ನು ಪೂರ್ಣಗೊಳಿಸಿದ್ದು, ತನ್ನ ಕನಸಿನ ಮನೆಯಲ್ಲಿ ಪತ್ನಿ ಇಲ್ಲದಿರುವ ಬಗ್ಗೆ ನೊಂದುಕೊಂಡ ಶ್ರೀನಿವಾಸ, ಮಡದಿಯ ಪ್ರತಿಮೆ ನಿರ್ಮಿಸಿದ್ದಾರೆ. ಮೊದಲು ಮೇಣದ ಪ್ರತಿಮೆ ಅಂದುಕೊಂಡಿದ್ರು. ಆನಂತರ ಸಿಲಿಕಾನ್ ಪ್ರತಿಮೆಯನ್ನ ಗೊಂಬೆ ರಚನೆಕಾರ ಶ್ರೀಧರಮೂರ್ತಿ ಅವರಿಂದ ರೆಡಿ ಮಾಡಿಸಿದ್ರು.

ಕಳೆದ ಆಗಸ್ಟ್ 8ರಂದು ಗೃಹ ಪ್ರವೇಶ ಮಾಡಿದ್ದಾರೆ. ಈ ವೇಳೆ ಮಡದಿಯ ಪ್ರತಿಮೆ ತೆಗೆದುಕೊಂಡು ಬಂದು, ಅದರ ಪಕ್ಕ ಕುಳಿತ ಶ್ರೀನಿವಾಸರನ್ನ ಮಕ್ಕಳಿಬ್ಬರು ಪೂಜೆ ಮಾಡಿದ್ದಾರೆ. ಇದು ಇದೀಗ ಎಲ್ಲೆಡೆ ಸದ್ದು ಮಾಡ್ತಿದೆ. ಪತ್ನಿ ಮೇಲಿನ ಪ್ರೀತಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಅಲ್ವಾ ದಾಂಪತ್ಯ ಅನ್ನೋದು.




Leave a Reply

Your email address will not be published. Required fields are marked *

error: Content is protected !!