‘ಸ್ವಾಭಿಮಾನಿ’ ಮಹಿಳೆ ಸೃಷ್ಟಿಸಿದ ಇತಿಹಾಸವೇನು?

496

ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆದ ದಿನದಿಂದ ಹಿಡಿದು ಫಲಿತಾಂಶದ ತನಕ ಸದ್ದು ಮಾಡಿದ್ದು ಮಂಡ್ಯ. ನಿಖಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆದು, ವಿಜಯಲಕ್ಷ್ಮೀ ಸುಮಲತಾಗೆ ಅಸ್ತು ಅಂದಿದ್ದಾಳೆ. ಮಂಡ್ಯದ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಇದೆ. ಇಬ್ಬರು ಜೆಡಿಎಸ್ ಮಂತ್ರಿಗಳು, ಇಬ್ಬರು ಜೆಡಿಎಸ್ ವಿಧಾನಪರಿಷತ್ ಸದಸ್ಯರು, ಮೇಲಾಗಿ ರಾಜ್ಯದ ಮುಖ್ಯಮಂತ್ರಿ. ಹೀಗೆ ಅಷ್ಟ ದಿಕ್ಪಾಲಕರಿದ್ದರೂ ನಿಖಿಲ್ ಗೆಲ್ಲಲಿಲ್ಲ.

ಸುಮಲತಾ ಗೆಲುವು ಬರೀ ಮಂಡ್ಯ ಜನಕ್ಕೆ ಅಲ್ಲ, ಇಡೀ ರಾಜ್ಯದ ಜನತೆಗೆ ಬೇಕಾಗಿತ್ತು. ಕಾರಣ, ಜೆಡಿಎಸ್ ನಾಯಕರು ಅವರನ್ನ ಮಾಡಿದ ಅವಮಾನ. ಆ ಎಲ್ಲ ಅಪಮಾನ, ನೋವು, ಕಣ್ಣೀರು, ದ್ವೇಷದ ರಾಜಕಾರಣಕ್ಕೆ ಉತ್ತರ ಸಿಗುವ ಸಲುವಾಗಿ ಸುಮಲತಾ ಜಯ ಮುಖ್ಯವಾಗಿತ್ತು. ಈ ಗೆಲುವು ಇಡೀ ರಾಜ್ಯ ಲೋಕಸಭಾ ಇತಿಹಾಸದಲ್ಲಿಯೇ ಒಂದು ದಾಖಲೆ ನಿರ್ಮಿಸಿದೆ.

ಸುಮಲತಾ ಗೆಲುವು ಯಾಕೆ ಇತಿಹಾಸ ನಿರ್ಮಿಸಿತು ಅಂತಾ ನೋಡಿದ್ರೆ, ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡ ಬಳಿಕ, ಇದುವರೆಗೂ ಯಾವ ಪಕ್ಷೇತರ ಮಹಿಳೆ ಸಂಸದೆ ಆಗಿರ್ಲಿಲ್ಲ. ಮಂಡ್ಯದಲ್ಲಿ ಯಾವೊಬ್ಬ ಪಕ್ಷೇತರ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿಲ್ಲ. ಜೊತೆಗೆ ಐದು ದಶಕಗಳ ಬಳಿಕ ಪಕ್ಷೇತರರೊಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಎಲ್ಲ ಕಾರಣಗಳಿಗೆ ಇದೊಂದು ಐತಿಹಾಸಿಕ ಗೆಲುವು.

1952 ರಿಂದ ಹಿಡಿದು 67ರ ತನಕ ಇಲ್ಲಿ ಕಾಂಗ್ರೆಸ್ ಪಕ್ಷದ್ದೇ ಪಾರುಪತ್ಯ. 1952 ರಿಂದ 67ರ ತನಕ ಸತತವಾಗಿ ನಾಲ್ಕು ಬಾರಿ ಎಂ.ಕೆ ಶಿವನಂಜಪ್ಪ ಸಂಸದರಾಗಿದ್ದರು. 1971ರಲ್ಲಿ ಸೋಮನಹಳ್ಳಿ ಕೃಷ್ಣ ಸಂಸದರಾಗಿದ್ರು. ಮುಂದೆ ಕರ್ನಾಟಕವೆಂದು ನಾಮಕರಣಗೊಂಡ ಬಳಿಕ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಗೆಲುವು ದಾಖಲಿಸುತ್ತಾ ಬಂದಿದ್ರು.

1977ರಲ್ಲಿ ಕಾಂಗ್ರೆಸ್ ನಿಂದ ಚಿಕ್ಕಲಿಂಗಯ್ಯ, 80ರಲ್ಲಿ ಕಾಂಗ್ರೆಸ್(ಐ)ನಿಂದ ಸೋಮನಹಳ್ಳಿ ಕೃಷ್ಣ, 84ರಲ್ಲಿ ಜನತಾ ದಳದಿಂದ ಕೆ.ವಿ ಶಂಕರೇಗೌಡ, 89 ರಿಂದ 91ರ ತನಕ ಕಾಂಗ್ರೆಸ್ ನ ಜಿ ಮಾದೇಗೌಡ, 96ರಲ್ಲಿ ಜನತಾ ದಳದಿಂದ ಕೆ.ಆರ್ ಪೇಟೆ ಕೃಷ್ಣ, 98ರಲ್ಲಿ ಜನತಾ ದಳದಿಂದ ಅಂಬರೀಶ್.. ಮುಂದೆ ಕಾಂಗ್ರೆಸ್ ನಿಂದ ಎರಡು ಬಾರಿ ಅಂಬರೀಶ್ ಎಂಪಿ ಆಗಿದ್ದರು. 2009ರಲ್ಲಿ ಜೆಡಿಎಸ್ ನಿಂದ ಚೆಲುವನಾರಾಯಣಸ್ವಾಮಿ, 2013ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಮ್ಯಾ, 2014ರಲ್ಲಿ ಜೆಡಿಎಸ್ ನ ಸಿ.ಎಸ್ ಪುಟ್ಟರಾಜು, 2018ರ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಎಲ್.ಆರ್ ಶಿವರಾಮೇಗೌಡ ಆಯ್ಕೆ ಆಗಿದ್ದರು.

ಆದರೆ, ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ 1ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 1952ರಲ್ಲಿ ಆಗಿನ ಕುಷ್ಟಗಿ ಲೋಕಸಭಾ ಈಗಿನ ಕೊಪ್ಪಳದಿಂದ ಶಿವಮೂರ್ತಿ ಸ್ವಾಮಿಜಿ ಗೆದ್ದಿದ್ರೆ, 1967ರಲ್ಲಿ ಕಾರವಾರನ ಕೆನರಾ ಲೋಕಸಭೆಯಿಂದ ಸಾಹಿತಿ ದಿನಕರ ದೇಸಾಯಿ ಗೆದ್ದಿದ್ರು. ಇದೀಗ ಸುಮಲತಾ ಎಲ್ಲ ಸಮಸ್ಯೆಗಳನ್ನ ಕಲ್ಲುಬಂಡೆಯಂತೆ ಎದುರಿಸಿ ಹೊಸ ದಾಖಲೆ ಬರೆದಿದ್ದಾರೆ. ಸ್ವಾಭಿಮಾನಿ ಮಹಿಳೆಗೆ ಮಂಡ್ಯದ ಜನ ಸಿಹಿ ನೀಡಿದ್ದಾರೆ. ಇದೀಗ ಅವರ ಋಣ ತೀರಿಸುವ ಜವಾಬ್ದಾರಿ ಸುಮಲತಾ ಅಂಬರೀಶ್ ಅವರ ಮೇಲಿದೆ.




Leave a Reply

Your email address will not be published. Required fields are marked *

error: Content is protected !!