ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕೋಟ್ಯಾಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಸೆಗೆ ಆಸೀಸ್ ಆಟಗಾರ ಹೆಡ್ ಸಂಪೂರ್ಣ ತಣ್ಣೀರು ಎರೆಚಿದರು. ಮೂರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಬೇಕು ಎನ್ನುವ ಕನಸು ಕಮರಿ ಹೋಯಿತು. ಹೀಗಾಗಿ ಭಾರತೀಯರ ಹೃದಯ ಭಾರವಾಗಿದೆ. ಭಾನುವಾರ ಇಂಡಿಯನ್ ಕ್ರಿಕೆಟ್ ಪ್ರಿಯರಿಗೆ ಸಿಹಿ ನೀಡಲಿಲ್ಲ.
ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಅಜೇಯ 10 ಪಂದ್ಯಗಳನ್ನು ಗೆದ್ದು ಫೈನಲ್ ಗೆ ಬಂದಿದ್ದ ಭಾರತ ತಂಡ, ಕೊನೆಯಲ್ಲಿ ಯಡವಿತು. ಇದರ ಪರಿಣಾಮ ಆಸ್ಟ್ರೇಲಿಯಾ ಸುಲಭವಾಗಿ ಗೆದ್ದು 6ನೇ ಬಾರಿಗೆ ವಿಶ್ವ ಚಾಂಪಿಯನ್ಸ್ ಆಯಿತು. ಸ್ಲೋ ಪಿಚ್ ನಲ್ಲಿ ಸಂಪೂರ್ಣ ವಿಫಲರಾದ ಭಾರತೀಯ ಆಟಗಾರರು ಕೇವಲ 240 ರನ್ ಗಳಿಗೆ ಆಲೌಟ್ ಆಗಿ, ಸೋಲಿನ ಸುಳಿಗೆ ಸಿಲುಕಿದ್ದರು. ಕೊನೆಗೆ ಅದುವೇ ನಿಜವಾಯ್ತು.
ಪಂದ್ಯ ಮುಗಿದು ಇತಿಹಾಸ ಸೇರಿದೆ. ಆದರೆ, ಇದನ್ನು ಅರಗಿಸಿಕೊಳ್ಳಲು ಯಾರಿಗೂ ಆಗುತ್ತಿಲ್ಲ. ಮುಂದಿನ ವಿಶ್ವಕಪ್ ಬರುವ ತನಕ ನೋವು ಕಾಡುತ್ತಲೇ ಇರುತ್ತೆ. ಭಾರತೀಯ ಕ್ರೀಡಾ ಅಭಿಮಾನಿಗಳು ತಮ್ಮ ನೋವು, ದುಃಖ, ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ, 36 ವರ್ಷದ ರೋಹಿತ್ ಶರ್ಮಾ, 33 ವರ್ಷದ ಮೊಹಮ್ಮದ್ ಶೆಮಿ, 34 ವರ್ಷದ ಜಡೇಜಾ, ಈ ಟೂರ್ನಿಯಿಂದ ಹೊರಗುಳಿದ 33 ವರ್ಷದ ಚಹಲ್ ಸೇರಿ ಅನೇಕ ಸ್ಟಾರ್ ಆಟಗಾರರು 2027ರ ವಿಶ್ವಕಪ್ ನಲ್ಲಿ ಆಡುತ್ತಾರೆ ಎನ್ನುವುದೇ ಅನುಮಾನ.
ಇನ್ನು ಅನುಭವಿ ಬೌಲರ್ 37 ವರ್ಷದ ರವಿಚಂದ್ರನ್ ಅಶ್ವಿನ್ ಈ ವರ್ಷ ಅಥವ ಮುಂದಿನ ವರ್ಷದೊಳಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. 31 ವರ್ಷದ ಕನ್ನಡಿಗ ಕೆ.ಎಲ್ ರಾಹುಲ್ ಗೆ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ತೋರುವ ಸ್ಥಿರತೆ ಮೇಲೆ ನಿರ್ಧಾರವಾಗಲಿದೆ. ಇನ್ನು ಯುವ ಪಡೆಯಿದ್ದು, ಅದರಲ್ಲಿ ಎಷ್ಟು ಆಟಗಾರರಿಗೆ ಅವಕಾಶ ಸಿಗುತ್ತೆ ಎನ್ನುವುದು ಕಾಲವೇ ನಿರ್ಧರಿಸಲಿದೆ. ಹೀಗಾಗಿ ಈ ಸೋಲು ಟೀಂ ಇಂಡಿಯಾ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ವಾಸ್ತವ ಅನುಭವಿಸಲೇಬೇಕು.