ಸಕ್ಸಸ್ ಟಾಕ್ ವಿಥ್ ರಿಯಲ್ ಡಿಟೆಕ್ಟಿವ್

1172

ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಜೋಡಿಯ ‘ಬೆಲ್ ಬಾಟಮ್’ ಸಿನಿಮಾ 100 ಡೇಸ್ ಕಂಪ್ಲೀಟ್ ಮಾಡಿದೆ. ಅದರ ಸಂಭ್ರಮವನ್ನ ಆಚರಿಸಲು ರೆಡಿಯಾಗಿರುವ ನಿರ್ದೇಶಕ ಜಯತೀರ್ಥ ಅವರ ಜೊತೆ ‘ಪ್ರಜಾಸ್ತ್ರ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ…

ನಾಗೇಶ: ಬೆಲ್ ಬಾಟಮ್ ಸಿನಿಮಾ ಶತದಿನೋತ್ಸವದ ಸಂಭ್ರಮ ಹೇಗಿದೆ?

ಜಯತೀರ್ಥ: ಇದು 2019ರ ಮೊದಲನೇ 100 ಡೇಸ್ ಸಿನಿಮಾ ಅನಿಸುತ್ತೆ. ಕ್ಲಾಸಿಕ್, ಕಮರ್ಷಿಯಲ್ ಮೂವಿ ಇದು. ಪಕ್ಕಾ ಕಮರ್ಷಿಯಲ್ ಏನಲ್ಲ. ತುಂಬಾ ಆರ್ಟ್ ಸಿನಿಮಾನೂ ಅಲ್ಲ. ಅದನ್ನೇ ಟ್ರೈ ಮಾಡಿದ್ದು ನಾವು. ಕ್ಲಾಸಿಕ್ ಕಮರ್ಷಿಯಲ್ ಸಿನಿಮಾ ಅಂತ. ನಾನು, ನಮ್ಮ ನಿರ್ಮಾಪಕರು ಸೇರಿ ಚಿತ್ರ ಮಾಡಿದಾಗ ನಾವು ಅಂದ್ಕೊಂಡಿದ್ದು, ಎಫರ್ಟ್ ಗೆ ಹಾಕಿದ ದುಡ್ಡು ವಾಪಸ್ ಬಂದ್ರೆ ಸಾಕು ಅಂತ. ಆದರೆ, ಮೊದಲ ವಾರದಲ್ಲಿಯೇ ಗೆಲ್ಲಿಸಿಕೊಟ್ಟ ಪ್ರೇಕ್ಷಕ, ನೂರರ ಗಡಿ ದಾಟಿಸಿದ್ದಾನೆ. ಇದಕ್ಕಾಗಿ ದೊಡ್ಡ ಈವೆಂಟ್ ಮಾಡ್ತೀವಿ. ಕಲರ್ಸ್ ಕನ್ನಡದವರು ಆಯೋಜನೆ ಮಾಡ್ತಾರೆ. ಜನಗಳ ಮಧ್ಯೆ ಸಂಭ್ರಮಾಚರಣೆ ಮಾಡುವ ಪ್ಲಾನ್ ಇದೆ. ಅದಕ್ಕೂ ಮೊದ್ಲು ಸುದ್ದಿಗೋಷ್ಠಿ ನಡೆಸುತ್ತೇವೆ

ನಾಗೇಶ: ಸಿಂಗಲ್ ಹಾಗೂ ಮಲ್ಟಿ ಸ್ಕ್ರೀನ್ ನಲ್ಲಿ ಇವಾಗ ಸಿನಿಮಾ ಹೇಗೆ ಓಡುತ್ತಿದೆ?

ಜಯತೀರ್ಥ: ಈಗ್ಲೂ ಸಪ್ನಾದಲ್ಲಿ 4 ಶೋ, ಕಾಮಕ್ಯದಲ್ಲಿ 3 ಶೋ, ವೀರಭದ್ರೇಶ್ವರದಲ್ಲಿ ಒಂದು ಶೋ, ವೀರೇಶನಲ್ಲಿ 2 ಶೋ ಇದೆ. ಬೆಂಗಳೂರಿನಲ್ಲಿಯೇ 19 ಕಡೆ ಶೋ ಇದೆ. ಕರ್ನಾಟಕದಾದ್ಯಂತ ಲೆಕ್ಕಹಾಕಿದ್ರೆ 33-35ರ ಗಡಿ ದಾಟುತ್ತೆ. ಶತದಿನೋತ್ಸವದ ನಂತರವೂ ಸಿನಿಮಾ ಇಷ್ಟೊಂದು ಶೋ ಓಡಲು ನಮ್ಮ ವಿತರಕರು ಕಾರಣ.

ನಿರ್ದೇಶಕ ಜಯತೀರ್ಥ

ನಾಗೇಶ: ಇಡೀ ಚಿತ್ರವನ್ನ ರೆಟ್ರೋ ಸ್ಟೈಲ್ ನಲ್ಲಿ ಮಾಡಲು ಸಾಧ್ಯವಾಗಿದ್ದು ಹೇಗೆ?

ಜಯತೀರ್ಥ: ಮೊದಲನೆಯದಾಗಿ ಈ ಕಥೆಯನ್ನ ಈ ಕಾಲಘಟ್ಟದಲ್ಲಿ ಹೇಳಿದ್ರೆ ಲಾಜಿಕ್ ಲೆಸ್ ಆಗುತ್ತೆ. ಹೀಗಾಗಿ ಇಡೀ ಕಥೆಯನ್ನ ನಾನು ಅಲ್ಲಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ರೆಟ್ರೋ ಸ್ಟೈಲ್ ನಲ್ಲಿ ಹೇಳುತ್ತಾ ದಾಟಿಸಬೇಕಿತ್ತು. ರೆಟ್ರೋ ಬರ್ತಿದ್ದಂತೆ ಅಲ್ಲಿ ಒಂದಿಷ್ಟು ತಮಾಷೆ, ಹ್ಯೂಮರ್ಸ್ ತನ್ನ ತಾನೆ ಹುಟ್ಟಿಕೊಳ್ಳುತ್ತೆ. ಅವತ್ತಿನ ಕಾಲದ ನಂಬಿಕೆ, ಸ್ಟೈಲ್, ಪಜೀತಿಗಳು ಕಂಡು ಬಂದ್ವು ನಮಗೆ. ರೆಟ್ರೋ ಸ್ಟೈಲ್ ನಲ್ಲಿ ಹೋಗೋಣ, ಸ್ವಲ್ಪ ಕಾಸ್ಟ್ಲಿ ಆಗುತ್ತೆ ಅಂತಾ ನಿರ್ಮಾಪಕರಿಗೆ ಹೇಳಿದ್ವಿ. ಅವರು ಕಂಪ್ಲೀಟ್ ಓಕೆ ಅಂದ್ರು. ಹೀಗಾಗಿ ಇದನ್ನ ಮಾಡಿದ್ವಿ. ಒಂದು ಸಿನಿಮಾ ಮಾಡಬೇಕಾದಾಗ ರಿಸರ್ಚ್ ಮಾಡಬೇಕಾಗುತ್ತೆ. ಆಗಿನ ಕಾಲದ ಉಡುಗೆ ತೊಡುಗೆ, ಮಾತುಗಳು ಹೇಗಿದ್ವು. ಇಂಗ್ಲಿಷ್ ಹೇಗೆ ಬಳಸುತ್ತಿದ್ದರು. ಜಾನಪದ ಕಲೆಗಳು ಯಾವವು. ಮನುಷ್ಯ ಭಾವುಕನಾಗುವುದು ಇವತ್ತಿಗೂ ಅವತ್ತಿಗೂ ಅದೇ. ಬದುಕುವ ರೀತಿ ಬದಲಾಗಿರುತ್ತೆ. ಡಿಜಿಟಲೈಸ್ ಆಗಿರ್ಲಿಲ್ಲ. ಸಿಸಿ ಕ್ಯಾಮೆರಾ, ಮೊಬೈಲ್ ಇರ್ಲಿಲ್ಲ. ಇಂಟರ್ ನೆಟ್, ಕಂಪ್ಯೂಟರ್ ಇರ್ಲಿಲ್ಲ. ಅಂತಹ ಸಂದರ್ಭದಲ್ಲಿ ಒಂದು ಕೇಸ್ ಹೇಗೆ ತನಿಖೆಯಾಗುತ್ತೆ. ಸೈಕಾಲಜಿಕಲ್ ಟ್ವಿಸ್ಟ್ ಹೇಗೆ ಆಗುತ್ತೆ. ಕ್ರೈಮ್ ನಡೆಯುವ ರೀತಿ. ಇನ್ವಸ್ಟಿಗೇಷನ್ ರೀತಿ. ಇದನ್ನೆಲ್ಲ ರಿಸರ್ಚ್ ಮಾಡಿ, ತೆರೆಯ ಮೇಲೆ ತರಲು ಸಿನಿಮ್ಯಾಟಿಕ್ ಸ್ಟೈಲ್ ಯೂಸ್ ಮಾಡಿದೀವಿ. ನಾವು ತೋರಿಸುವ ಕಥೆ ಅವತ್ತಿನದಾದರೂ ಇವತ್ತಿನ ಜನಕ್ಕೆ ಮುಟ್ಟಬೇಕು. ಹಳೆಯದನ್ನ ಹೊಸತನದಲ್ಲಿ ಹೇಳುವ ಎಲ್ಲ ಪ್ರಯತ್ನ ಸಕ್ಸಸ್ ಆಯ್ತು.

ನಾಗೇಶ: ಸಸ್ಪೆನ್ಸ್ ಥ್ರಿಲ್ಲರ್ ಮೂವಿಯನ್ನ ಕಾಮಿಡಿ ಜಾನರ್ ನಲ್ಲಿ ತೆಗೆದುಕೊಂಡು ಹೋಗಿದ್ದಕ್ಕೆ ಜನರಿಗೆ ಇಷ್ಟವಾಯ್ತಾ..

ಜಯತೀರ್ಥ: ಇರಬಹುದೇನೋ.. ನಾರದ ವಿಜಯ ಅನ್ನೋ ಸಿನಿಮಾವನ್ನ ಸ್ವಲ್ಪ ಅದೇ ರೀತಿ ಪ್ರಯತ್ನಪಟ್ಟಿದ್ದಾರೆ. ಅವತ್ತಿನ ಕಾಲದಲ್ಲಿ ರೆಟ್ರೋ ಸಿನಿಮಾನೇ ಅದು. ಪ್ರತಿ ಡೈಲಾಗ್ ಹೇಳಿಸುವಾಗ ಒಂದು ಸಣ್ಣ ಹ್ಯೂಮರ್ಸ್ ಕ್ಯಾರಿ ಮಾಡಬೇಕಂತ ಹೊರಟ್ವಿ. ದಿವಾಕರ ಪಜೀತಿಗೆ ಸಿಕ್ಕಿ ಹಾಕಿಕೊಳ್ಳುವುದು. ಅವನಿಗೆ ಎದುರಾಗುವ ಸಂಕಷ್ಟಗಳೇ ತಮಾಷೆಯಾಗಿ ಕಾಣಿಸಿಕೊಳ್ಳುವಾಗ, ಅವನು ಪ್ರಾಪರ್ ಡಿಟೆಕ್ಟಿವ್ ಅಲ್ಲ. ಕ್ರಿಮಿನಾಲಜಿ ಓದಿಕೊಂಡು ಬಂದವನಲ್ಲ. ಬರೀ ಸಿನಿಮಾ ನೋಡಿ, ಕಾದಂಬರಿ ಓದಿ ಇನ್ಸ್ ಪೈರ್ ಆಗಿ ಬಂದವನು ಅನ್ನೋದೆ ಹಾಸ್ಯ ವಿಷಯ. ಅಪ್ಪ ಡಿಫೆಕ್ಟಿವ್ ಅಂತಾ ಗೇಲಿ ಮಾಡ್ತಾನೆ. ದಿವಾಕರನನ್ನ ದಿಗಂಬರ ಅಂತಾ ಹೀರೋಯಿನ್ ಲೇವಡಿ ಮಾಡ್ತಾಳೆ. ಸಮರ್ಥನಲ್ಲದವನು ಒಂದು ಕೇಸ್ ನ್ನ ಹೇಗೆ ನಿಭಾಯಿಸುತ್ತಾನೆ ಅನ್ನೋದು ಹ್ಯೂಮರ್ಸ್ ಆಗಿ ಹೇಳಬೇಕಾಗಿತ್ತು. ತುಂಬಾ ಸೀರಿಯಸ್ ಆಗಿ ತೆಗೆದುಕೊಂಡು ಹೋಗಬಹುದಾಗಿತ್ತು. ಬಟ್, ಈ ಮಜಾ ಇರುತ್ತಿರಲಿಲ್ಲ.

ನಾಗೇಶ: ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಕೆಮಿಸ್ಟ್ರಿ ವರ್ಕೌಟ್ ಆಗಿದ್ದರ ಬಗ್ಗೆ..

ಜಯತೀರ್ಥ: ರಿಷಬ್ ಶೆಟ್ಟಿ, ಹರಿಪ್ರಿಯಾ ಜೊತೆಯಾಗಿ ಕೆಲಸ ಮಾಡಿದ್ರು. ಒಬ್ಬ ನಿರ್ದೇಶಕ, ಒಬ್ಬ ನಾಯಕಿಯಾಗಿ. ಹೀರೋ ಅಂತ ನಾನು ರಿಷಬ್ ಅವರನ್ನ ಆಯ್ಕೆ ಮಾಡಿದ್ದೆ. ಅವರ ಫಿಸಿಕ್ ಗೆ, ರೆಟ್ರೋ ಲುಕ್ ಗೆ ಹರಿಪ್ರಿಯಾ ಸರಿ ಅನಿಸ್ತು. ಹೀಗಾಗಿ ಕೇಳಿದೆ. ಮಾಡ್ತೀನಿ ಅಂದ್ರು. ರಿಷಬ್ ಮತ್ತು ನಿಮ್ಮ ಜೊತೆ ಸಿನಿಮಾ ಮಾಡಿದ್ದೇನೆ. ಮಜಾ ಇರುತ್ತೆ ಮಾಡ್ತೀನಿ ಅಂತಾ ಅವಳು ಒಪ್ಪಿಕೊಂಡ್ಳು. ನಮಗೆ ಎಲ್ಲರಿಗೂ ಮೊದ್ಲೇ ಪರಿಚಯ ಇರೋದ್ರಿಂದ ಅವರೆ ತಮಾಷೆ ಮಾಡಿಕೊಂಡು, ಅವರ ಕೆಮಿಸ್ಟ್ರಿ ವಿಚಾರ ಅವರು ನೋಡಿಕೊಳ್ತಿದ್ರು. ರಿಷಬ್ ನಿರ್ದೇಶಕನಾಗಿರುವುದ್ರಿಂದ ಅದೊಂದು ಸಪೋರ್ಟ್ ಆಯ್ತು ನನಗೆ.

ನಾಗೇಶ: ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ರಿಮೇಕ್ ಆಗ್ತಿದೆಯಂತೆ..

ಜಯತೀರ್ಥ: ಸಂತೋಷದ ವಿಷಯ ಏನು ಅಂದ್ರೆ, ಸಿನಿಮಾ ರಿಲೀಸ್ ಗೂ ಮೊದ್ಲೇ ತಮಿಳು ರೈಟ್ಸ್ ಪಡೆದ್ರು. ರಿಲೀಸ್ ಆದ 25 ದಿನಕ್ಕೆ ಹಿಂದಿ, ತೆಲುಗಿಗೆ ಖರೀದಿ ಮಾಡಿದ್ರು. ಇದೀಗ ಮಲಿಯಾಳಂ ಹಾಗೂ ಮರಾಠಿ ಮಾತುಕತೆ ನಡೆಯುತ್ತಿದೆ. ಅದೊಂದು ಆಗಿಬಿಟ್ರೆ, ಕನ್ನಡದ ಚಿತ್ರವೊಂದು ಐದು ಭಾಷೆಗಳಿಗೆ ಹೋಗಿದ್ದು ಸುದ್ದಿಯಾಗುತ್ತು.

ನಾಗೇಶ: ಇದೀಗ ಯಾವ ಸಿನಿಮಾ ತಯಾರಿಲ್ಲಿ ಇದ್ದೀರಿ.. ಯಾರು ಹೀರೋ..

ಜಯತೀರ್ಥ: ನನಗೆ ಏನು ಬೇಕು ಅನ್ನೋದ್ಕಿಂತ, ನನ್ನಿಂದ ಇಂಡಸ್ಟ್ರಿಗೆ ಏನು ಬೇಕು ಅನ್ನೋದು ಇಂಡಸ್ಟ್ರಿ ಯೋಚನೆ ಮಾಡ್ತಿದೆ. ನಾನು ಅಂದುಕೊಂಡಿದ್ದು ಒಂದು ಇದೆ. ಅದು ನಿಧಾನಕ್ಕೆ ಮಾಡ್ತೀನಿ. ಇಂಡಸ್ಟ್ರಿ ಏನು ಬೇಡುತ್ತಿದ್ದೆಯೋ ಅದಕ್ಕೆ ಪೂರಕವಾಗಿ ಕೆಲಸ ಮಾಡ್ತಿದೀನಿ. ಕೆಲವರು ನಮಗೆ ಯಾವುದಾರೂ ಸಿನಿಮಾ ಇದ್ಯಾ ಅಂತಾ ಬರ್ತಿದ್ದಾರೆ. ಹೀರೋ ಒಬ್ಬರು ನನ್ಗೆ ಏನಾದ್ರೂ ಸಿನಿಮಾ ಇದ್ಯಾ ಅಂತಾ ಕೇಳಿದಾರೆ. ನನ್ನ ಮಗನನ್ನ ಹೀರೋ ಮಾಡ್ತಿರಾ ಅಂತಾ ಕೇಳ್ತಿದ್ದಾರೆ. ಇರುವ ಆಫರ್ ಗಳ ಆಯ್ಕೆ ಬಗ್ಗೆ ಯೋಚನೆ ಮಾಡ್ತಿದ್ದೀನಿ. ಇದಾದ್ಮೇಲೆ ನನ್ನ ಆಲೋಚನೆಗಳು ತರುವುದಕ್ಕೆ ಯೋಚನೆ ಮಾಡ್ತೀನಿ.




Leave a Reply

Your email address will not be published. Required fields are marked *

error: Content is protected !!