ಸಕಲ ಜೀವಾತ್ಮರಿಗೂ ಲೇಸನೇ ಬಯಸೋಣ…

556

ಜೂನ್ 5 ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಕೊಡಂಬಲ ಮೂಲದ ಸಾಹಿತಿ ಸಂಗಮೇಶ್ ಎನ್.ಜವಾದಿ ಅವರ ಲೇಖನ ಇಲ್ಲಿದೆ…

ಜೂನ್ 5 ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿವಸ. ಅಂದಹಾಗೆ ನಾವೆಲ್ಲರೂ ಈ ಪರಿಸರದ ಶಿಶುಗಳು. ಪರಿಸರವಿಲ್ಲದೆ ನಮ್ಮ  ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆ ಇಲ್ಲ. ನಮ್ಮ ಸುತ್ತಮುತ್ತ ವೈವಿದ್ಯಮಯ ನಿಸರ್ಗದ ಸೊಬಗಿದೆ. ಹಲವಾರು ಮರಗಿಡಗಳು, ಪ್ರಾಣಿಪಕ್ಷಿಗಳಿವೆ. ಕೀಟ ಪ್ರಪಂಚವಿದೆ. ಅನೇಕ ಸೂಕ್ಷ್ಮ ಜೀವಿಗಳಿವೆ. ಚಿಕ್ಕ, ದೊಡ್ಡ ನದಿ, ಸಾಗರ ಸರೋವರಗಳಿವೆ. ಸಣ್ಣಪುಟ್ಟ ಗುಡ್ಡ ಬೆಟ್ಟಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ. ಗಾಳಿ, ಬೆಳಕು ಹಾಗು ಅಪರಿಮಿತ ಖನಿಜ ಸಂಪತ್ತಿದೆ.

ಈ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹೆಸರುಗಳ ಸೋಗಿನಲ್ಲಿ ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತಿದೆ. ನಮ್ಮ ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದರೂ ನಾವು ಅದನ್ನು ನಗಣ್ಯ ಎಂಬಂತೆ ವರ್ತಿಸುತ್ತಿದ್ದೇವೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಉದ್ದೇಶದಿಂದಲೇ 1972ನೇ ಇಸವಿಯಿಂದ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆ ಆಚರಿಸುತ್ತ ಬರಲಾಗುತ್ತಿದೆ. ಆದರೆ ಒಂದು ದಿನ ಮಟ್ಟಿಗೆ ಪರಿಸರ ಸಂರಕ್ಷಣೆ ಆಚರಣೆ ಮಾಡಿ, ಇದರ ಬಗ್ಗೆ ಮಾತನಾಡಿದರೆ ಸಾಲದು, ಪ್ರತಿದಿನ ಪರಿಸರ ರಕ್ಷಣೆ ಮಾಡಿದರೆ ಮಾತ್ರ ಪರಿಸರ ಉಳಿಸಿ, ಬೆಳೆಸಲು ಸಾಧ್ಯವಿದೆ. ಇತ್ತಿಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ಚತುಷ್ಪಥ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿದೆಸೆಯುತ್ತಿರುವ ವೃಕ್ಷ ಸಂಪತ್ತಿನಿಂದಾಗಿ ಹಾಗೂ ನದಿಗಳಿಗೆ ಅಡ್ಡಲಾಗಿ ಕಟ್ಟುತ್ತಿರುವ ಜಲಾಶಯಗಳು ಇತ್ಯಾದಿಗಳಿಂದಾಗಿ ಪರಿಸರ ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಹವಾಮಾನ ವೈಪರೀತ್ಯಗಳು ಸಹ ಉಂಟಾಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸಮುಚ್ಚಯಗಳು, ವಾಹನಗಳ ಸಂದಣಿ, ಪ್ಲಾಸ್ಟಿಕ್ ಸಾಮ್ರಾಜ್ಯ ಇತ್ಯಾದಿ ಗಳಿಂದಾಗಿ ನಮ್ಮ ಪರಿಸರ ಸಂಪೂರ್ಣ ಹಾಳಾಗುತ್ತಿದೆ.

ಸಂಗಮೇಶ್ ಎನ್.ಜವಾದಿ

ಪರಿಸರ ಎಂಬ ಈ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವ ಬೀರುತ್ತವೆ. ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನೂ ನಿಕಟಗೊಳಿಸಿ ಈ  ಜೀವಜಾಲವನ್ನಾಗಿಸಿದೆ. ಅಂಥ ಈ ಜೀವಜಾಲದ ಸರಪಳಿಯನ್ನು ನಾವು ನಿರಂತರವಾಗಿ ಉಳಿಸಬೇಕಾಗಿದೆ. ಗಿಡಮರಗಳನ್ನು ಕಡಿಯುವಾಗ ಒಂದಕ್ಕೆರಡು ಮರಗಳನ್ನು ನೆಡಬೇಕು. ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳಾದ ಪ್ಲಾಸ್ಟಿಕ್ ಇತ್ಯಾದಿಗಳ ಅನಧಿಕೃತ ಮಾರಾಟ ತಡೆಗಟ್ಟಬೇಕು ಹಾಗೂ ಪರಿಸರಕ್ಕೆ ಹಾನಿಯಾಗದ ಅಗ್ಗದ ಇಂಧನಮೂಲಗಳ ಅನ್ವೇಷಣೆ ಮಾಡಿ ಬಳಸಬೇಕು.

ಭೂ ಸಂಪನ್ಮೂಲಗಳಾದ ಅರಣ್ಯ, ಮಣ್ಣು, ಉಸುಕು, ಕಲ್ಲುಬೆಟ್ಟಗಳನ್ನು  ಸಂರಕ್ಷಿಸುವುದು. ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ  ಮಹತ್ವವನ್ನು  ಸಾಮಾನ್ಯ ನಾಗರಿಕರಿಗೂ ತಿಳಿಸುವ ಕೆಲಸ ಪರಿಸರ ಇಲಾಖೆ ಸಮರ್ಪಕವಾಗಿ ಮಾಡಬೇಕು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೂ ಶಾಲೆಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಿಸಬೇಕು.  ಪರಿಸರ ರಕ್ಷಣಾ ಕಾರ್ಯದಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿ. ಪ್ರತಿಯೊಬ್ಬ ನಾಗರಿಕರಲ್ಲೂ ಪರಿಸರದ ಬಗ್ಗೆ ಈ ಜಾಗೃತಿ ಮೂಡಬೇಕು. ಪ್ರತಿಯೊಬ್ಬ ಪ್ರಜೆಯೂ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯವಾಕ್ಯದಂತೆ ನಡೆದುಕೊಳ್ಳೋಣ. ಸಕಲ ಜೀವಾತ್ಮರಿಗೂ ಲೇಸನೇ ಬಯಸೋಣ.
Leave a Reply

Your email address will not be published. Required fields are marked *

error: Content is protected !!