ಜೀವನಕ್ಕೆ ಅರ್ಥ ಬರಬೇಕಾದರೆ ಆದರ್ಶ ಮುಖ್ಯ: ಡಿಸಿ ಮಹಾಂತೇಶ ಬೀಳಗಿ

303

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜೀವನಕ್ಕೆ ಒಂದು ಅರ್ಥ ಬರಬೇಕಾದರೆ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯು, ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ ‘‌ದರ್ಪಣ- 2022’ ಕವಿವಿ ಕೌಸಾಳಿ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಮರ್ಪಕವಾಗಿ ಯೋಚಿಸಿ ಕೈಗೊಳ್ಳಬೇಕು. ಸಾಧನೆಗೆ ನಮ್ಮ ದೈಹಿಕ ಮಾನಸಿಕ ಆರೋಗ್ಯ ಹೆಚ್ಚು ಮಹತ್ವ ನೀಡಬೇಕು. ಒಳ್ಳೆಯ ಸ್ನೇಹಿತರು ನಮ್ಮ ಸುತ್ತ ಇರುವಂತೆ ನೋಡಿಕೊಳ್ಳುವದರ ಜೊತೆಗೆ, ಪರಿಸರದ ಜೊತೆಗೆ ಭಾಂದವ್ಯ ಹೊಂದಿರುಬೇಕು. ಗುರುಗಳನ್ನು ಸ್ಮರಿಸುವಂತಹ ಆದರ್ಶಗಳು ಸಾಧನೆಗೆ ಉತ್ತೇಜನ ದೊರಕುತ್ತವೆ ಎಂದರು.

ಬಳ್ಳಾರಿ ಶ್ರೀಕೃಷ್ಣ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ಮಾತನಾಡಿ, ವಿಶ್ವವಿದ್ಯಾಲಯಗಳು ಹಳೆಯ ವಿದ್ಯಾರ್ಥಿ ಸಂಘಗಳನ್ನು ಶೈಕ್ಷಣಿಕ ಬೆಳವಣಿಗೆಗೆ ಪರಿಣಾಮಕಾರಿಯಾಗಿ  ಬಳಸಿಕೊಳ್ಳಬೇಕು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಶಿಕ್ಷಣ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕೇಂದ್ರಗಳ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲಾ ವಿಭಾಗ ಮತ್ತು ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕವಿವಿ‌ ಕೌಸಾಳಿ ಅಧ್ಯಯನ ಸಂಸ್ಥೆಗೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡುವದಾಗಿ ಭರವಸೆ ನೀಡಿದರು.

ಕೌಸಾಳಿ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.  ಕಿಮ್ಸ್ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೌಸಾಳಿ ಅಧ್ಯಯನ ಸಂಸ್ಥೆಯ ಡೀನ್ ಡಾ.ರಮೇಶ್ ಕುಲಕರ್ಣಿ, ಕೌಸಾಳಿ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರೇಶ್ ಶಾ, ಕೌಸಾಳಿ ಅಧ್ಯಯನದ ನಿರ್ದೇಶಕ ಡಾ.ಎ.ಎಮ್. ಕಡಕೋಳ, ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಪ್ಪ, ಡಾ.ಉತ್ತಮ ಕಿನಂಗೆ, ಡಾ.ರಾಮಾಂಜನಯಲು, ಡಾ.ಪುಷ್ಪಾ ಹೊಂಗಲ್, ಅಖಿಲ್ ಜೋಶಿ ಸೇರಿದಂತೆ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!