ಲಾಕ್ ಡೌನ್ ಮುಂದುವರಿಕೆ: ಇವರ ಜೀವನ ಹೇಗೆ ಸಿಎಂ ಸಾಹೇಬ್ರೆ…

397

ಬೆಂಗಳೂರು: ಕರೋನಾ ಲಾಕ್ ಡೌನ್ ಹಂತ ಹಂತವಾಗಿ ಮುಂದುವರೆಯುತ್ತಲೇ ಇದೆ. ಮೊದಲ ಹಂತದ ಲಾಕ್ ಡೌನ್ ಏಪ್ರಿಲ್ 14ರ ವರೆಗೆ ಆಯ್ತು. ಅದಕ್ಕೂ ಮೊದ್ಲೇ ಪಿಎಂ ಮತ್ತೆ ಮೇ 3ರ ತನಕ ಲಾಕ್ ಡೌನ್ ಅಂದ್ರು. ಇದಾದ್ಮೇಲೆ ಕೇಂದ್ರ ಗೃಹ ಸಚಿವಾಲಯ ಮೇ 17ರ ತನಕ ಮುಂದುವರೆಸಲಾಗ್ತಿದೆ ಎಂದು ಆದೇಶಿಸಿತು.

ಹೀಗೆ ಹಂತ ಹಂತವಾಗಿ ಲಾಕ್ ಡೌನ್ ಮುಂದುವರೆಯುತ್ತಲೇ ಇದೆ ವಿನಃ ಸಡಿಲಿಕೆ ಪ್ರಮಾಣ ಹೆಚ್ಚಾಗ್ತಿಲ್ಲ. ರೆಡ್, ಆರೆಂಜ್, ಗ್ರೀನ್ ಝೋನ್ ಘೋಷಣೆ ಮಾಡಲಾಗಿದೆ. ಇದರ ಆಧಾರದ ಮೇಲೆ ಕೆಲವೊಂದು ವಿನಾಯಿತಿ ನೀಡಲಾಗಿದೆ. ಹೀಗಾಗಿ ದಿನಸಿ ಅಂಗಡಿಗಳು, ಬೇಕರಿ, ಹಾಲು ಮಾರಾಟಗಾರರು, ತರಕಾರಿ, ಹಣ್ಣು ಮಾರುವವರು ಸೇರಿ ಕೆಲ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ, ಉಳಿದ ಸಣ್ಣಪುಟ್ಟ ವ್ಯಾಪಾರಿಗಳ ಕಥೆ ಏನು ಅಂತಿದ್ದಾರೆ.

ಕರೋನಾ ಸೋಂಕು ಪ್ರಕರಣಗಳಿಲ್ಲದ ತಾಲೂಕು, ಪಟ್ಟಣ, ಹೋಬಳಿ, ಗ್ರಾಮಗಳಲ್ಲಿನ ಸಣ್ಣಪುಟ್ಟ ಹೋಟೆಲ್, ಟೀ ಸ್ಟಾಲ್, ಗ್ಯಾರೇಜ್, ಹೇರ್ ಸಲೂನ್ ಸೇರಿ ಇತರೆ ವ್ಯಾಪಾರಿಗಳು ಏನು ಮಾಡಬೇಕು. ಲಾಕ್ ಡೌನ್ ಮುಂದುವರೆಯುತ್ತಲೇ ಹೋದ್ರೆ ಹೋಟೆಲ್, ಟೀ ಸ್ಟಾಲ್ ವ್ಯಾಪಾರಿಗಳ ಜೀವನ ನಡೆಯುವುದು ಹೇಗೆ? ಈಗಾಗ್ಲೇ ಕಳೆದ ಒಂದೂವರೆ ತಿಂಗಳಿಂದ ಅಂಗಡಿಗಳನ್ನ ಬಂದ್ ಮಾಡಿ ಆರ್ಥಿಕ ಸಂಕಷ್ಟ ಎದುರಿಸ್ತಿದ್ದಾರೆ. ಈಗ ಮತ್ತೆ ಮುಂದುವರೆಕೆ ಅಂದ್ರೆ ಅವರ ಗೋಳು ಕೇಳದ್ಯಾರು?

ಬಾರ್ ಆ್ಯಂಡ್ ರೆಸ್ಟೋರೆಂಟ್, ಮಾಲ್ ಗಳ ಸಮಾನವಾಗಿ ಸಣ್ಣಪುಟ್ಟ ಹೋಟೆಲ್, ಟೀ ಸ್ಟಾಲ್ ಗಳನ್ನ ನೋಡಲು ಸಾಧ್ಯವಿಲ್ಲ. ಇವತ್ತು ಬಾರ್ ಬಂದ್ ಮಾಡಲಾಗಿದ್ರೂ ಎಲ್ಲೆಡೆ ಅಕ್ರಮ ಮಾರಾಟ ಮಾಡಲಾಗುತ್ತಲೇ ಇದೆ. ಡಬಲ್, ತ್ರಿಬಲ್ ರೇಟಿಗೆ ಮಾರಾಟವಾಗ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದೂ ಸೈಲೆಂಟ್ ಆಗಿದ್ದಾರೆ ಅನ್ನೋದು ರಹಸ್ಯವಾಗಿಯೇನು ಉಳಿದಿಲ್ಲ. ಆದ್ರೆ, ಹೊಟ್ಟೆ ತುಂಬಿಸುವ ಸಣ್ಣಪುಟ್ಟ ಹೋಟೆಲ್ ಗಳು ಮಾತ್ರ ಬಂದ್. ಗ್ರೀನ್, ಆರೆಂಜ್ ಝೋನ್ ಗಳಲ್ಲಾದ್ರೂ ಇವುಗಳಿಗೆ ಅನುಮತಿ ನೀಡಬೇಕಿದೆ.

ರಾಜ್ಯ ಸರ್ಕಾರ ಕೂಡಲೆ ನಾನ್ ಎಸಿ ಹೊಂದಿರುವ ಸಣ್ಣಪುಟ್ಟ ಹೋಟೆಲ್, ಟೀ ಸ್ಟಾಲ್, ಊಟದ ಹೋಟೆಲ್, ಹೇರ್ ಸಲೂನ್, ಗ್ಯಾರೇಜ್ ಸೇರಿ ಇನ್ನು ಕೆಲವು ಅಂಗಡಿಗಳಿಗೆ ವಿನಾಯಿತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈಗಾಗ್ಲೇ ಅರ್ಧ ಸೋತು ಹೋಗಿರುವ ಇವರು, ಮೇ 17ರ ತನಕ ಕಾಯುವುದಾಗ್ಲಿ, ಮತ್ತೆ ಲಾಕ್ ಡಾನ್ ಮುಂದುವರೆಸಲಾಗುತ್ತೆ ಅಂದಾಗ ಕಾಯುವಂತೆ ಮಾಡಿದ್ರೆ ಪೂರ್ತಿ ಸೋತು ಅಕ್ಷರಶಃ ಬೀದಿಗೆ ಬರುವ ಪರಿಸ್ಥಿತಿ ಬರುತ್ತೆ. ಹೀಗಾಗಿ ರಾಜ್ಯ ಸರ್ಕಾರ ಇವರ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದು ರಾಜ್ಯದ ಆರ್ಥಿಕತೆಗೆ ಸಹಕಾರಿಯಾಗಲಿದೆ ಅನ್ನೋದು ಸತ್ಯ.





Leave a Reply

Your email address will not be published. Required fields are marked *

error: Content is protected !!