ಮರಳಿ ಬಾ ಮನಸೇ ಧ್ವನಿಸುರುಳಿ ಬಿಡುಗಡೆ

91

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ದೇಸಿ ಕವಿ ಎಸ್.ಶಿಶಿರಂಜನ್ (ಶಿಶಿರ) ಅವರ ರಚನೆಯಲ್ಲಿ ಮೂಡಿಬಂದಿರುವ “ಮರಳಿ ಬಾ ಮನಸೇ” ಅನ್ನೋ ಧ್ವನಿಸುರುಳಿಯನ್ನು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಬಿಡುಗಡೆಗೊಳಿಸಿದರು. ನಗರದಲ್ಲಿ ಏಪ್ರಿಲ್ 23ರಂದು ನಡೆದ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಲೋಕಾರ್ಪಣೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ಭಾವಗೀತೆಗಳ ಪರಂಪರೆ ಕಾಣೆಯಾಗಿರುವ ಕಾಲಘಟ್ಟದಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕೆ ಈ ಧ್ವನಿಮುದ್ರಿಕೆಯ ಮೂಲಕ ಹೊಸ ಚೈತನ್ಯ ತುಂಬುವ ಕೆಲಸವನ್ನು ಶಿಶಿರ ಮತ್ತು ತಂಡ ಮಾಡಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಧ್ವನಿಮುದ್ರಿಕೆ ಪರಿಚಯ ಮಾಡಿ ಮಾತನಾಡಿದ ಡಾ.ಎಚ್.ಎಸ್.ಸತ್ಯನಾರಾಯಣ, ಕನ್ನಡದಲ್ಲಿರುವಷ್ಟು ಸಮೃದ್ದವಾದ ಸುಗಮ ಸಂಗೀತ ಜಗತ್ತಿನ ಬೇರೆ ಯಾವುದೇ ಭಾಷೆಯಲ್ಲೂ ಇಲ್ಲ. ಕುವೆಂಪು, ಬೇಂದ್ರೆ, ನಿಸಾರ್ ಅಹ್ಮದ್, ಕೆಎಸ್ಎನ್, ಜಿಎಸ್ಎಸ್, ಲಕ್ಷ್ಮೀನಾರಾಯಣ ಭಟ್ಟ, ಎಚ್ಎಸ್ವಿ, ಬಿ.ಆರ್ ಲಕ್ಷ್ಮಣರಾವ್  ಮುಂತಾದ ಕವಿಗಳಿಂದ ಶ್ರೀಮಂತಗೊಂಡ ಭಾವಪಯಣವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತ ಶಿಶಿರ ಈ  ಹಾಡುಗಳ ಮೂಲಕ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ರಾಮಾ ರಾಮಾ ರೇ ಚಿತ್ರದ ಖ್ಯಾತಿಯ ನಟ ನಟರಾಜ್ ಮಾತನಾಡಿ, ಈಗಿನ ಮಕ್ಕಳಿಗೆ ಭಾವಗೀತೆಗಳ ಬಗ್ಗೆ ಅರಿವೇ ಇಲ್ಲ. ನನ್ನ ವೃತ್ತಿಜೀವನದಲ್ಲಿ ನಾನು ಭಾಗವಹಿಸುತ್ತಿರುವ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ಇದು. ಅವಕಾಶಕ್ಕಾಗಿ  ಧನ್ಯವಾದ ತಿಳಿಸಿದರು. ಈ ವೇಳೆ ಸುಮನ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷೆ ಸುವರ್ಣ ಹಾಗೂ ಗೀತ ರಚನೆಕಾರರಾರ ಎಸ್.ಶಿಶಿರಂಜನ್ ಸೇರಿ ಇತರರು ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!