ನಾವು ಭಾರತೀಯರು

543

ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಮಹಾಂತ ಸತ್ಯಂಪೇಟೆ ಅವರು ಬರೆದ ಕವಿತೆ…

ರಂಗುರಂಗಿನ ಕನಸಹೊತ್ತು,

ಬಣ್ಣಬಣ್ಣದ ಲೋಕವ ಕಪ್ಪು ಕಂಬಳಿಯ ತೂತಿನಿಂದ

ಇಣುಕಿ ನೋಡುವ ನಾವು ಭಾರತೀಯರು.

ಕೋಟಿ ತಾರೆ ನಾಚುವಷ್ಟು,

ಮುಕ್ಕೋಟಿ ದೇವಾನುದೇವತೆಗಳ ನೆರಳಲ್ಲಿರುವ ನಮಗೆ

ತುತ್ತು ಅನ್ನಕ್ಕೂ ಕೈಚಾಚುವ ಶತಕೋಟಿ ಕೈಗಳ ಕಾಣದಿರುವ

ಕುರುಡು ಭಾರತೀಯರು ನಾವು.

ಸ್ವಾತಂತ್ರ್ಯ ಸಿಕ್ಕ ಹಮ್ಮುಬಿಮ್ಮಿನಲಿ,

ಚರ್ಚ್, ಮಸೀದ್, ವಿಹಾರ, ದೇಗುಲಗಳಿಗೆ ಬೆಂಕಿಹಚ್ಚಿ

ಧರ್ಮ ಪ್ರಜ್ಞೆ ಮೆರೆಯುವ ಹೆಮ್ಮೆಯ ಭಾರತೀಯರು ನಾವು.

ಸಾಂತ್ವನ ಹೇಳುವ ನೆಪದಲ್ಲಿ,

ಬಾಯಿಲ್ಲದವರ ಬಾಯಿಮುಚ್ಚಿ

ಅವರೆಂದು ಸೊಲ್ಲೆತ್ತದಂತೆ ನೋಡಿಕೊಳ್ಳುವ ಶಿಷ್ಟಾಚಾರಿ ಭಾರತೀಯರು ನಾವು.

ಆತ್ಮ ಪ್ರಜ್ಞೆಯ ಮರೆತು, ಜಾತಿ ಪ್ರಜ್ಞೆಗಂಟಿಕೊಂಡು,

ಅಸ್ಮಿತೆಯನುಡುಕುತ ಹೊರಟ ಸಂಚಾರಿಗಳು,

ಎದೆಯದನಿಯ ಹಿಸುಕಿ, ಧರ್ಮಪಾಲಕರಾದ ನಾವು,

ಉಗ್ರ ಭಾರತೀಯರು.

ಬುದ್ಧ, ಬಸವ, ಅಂಬೇಡ್ಕರ್ ತತ್ವ ಮುರಿದು,

ದಮನಿತರ ದನಿಗೆ ದನಿಯಾಗಬೇಕಿದ್ದ ಕೈಗಳಲ್ಲೀಗ

ಖಡ್ಗವಿಡಿದು ಕೂಸು, ಕುನ್ನಿ, ಬಡವ, ಹೆಣ್ಣು, ಗಂಡು ಎಂಬ

ಯಾವ ಭೇದಭಾವವಿಲ್ಲದೆ ಎಲ್ಲರನು ಹೊಸಕಿಹಾಕಿ

ತಣ್ಣನೆ ರಕ್ತದಲಿ ಕೈತೊಳೆದುಕೊಳುವ

ನಾವು ವೀರ ಭಾರತೀಯರು.

ಮಹಾಂತ ಸಂತ್ಯಂಪೇಟೆ



Leave a Reply

Your email address will not be published. Required fields are marked *

error: Content is protected !!