ಎನ್ಎಸ್ಎಸ್ ನಿಂದ ಕೌಶಲ್ಯ ಪಾಠ: ಕವಿವಿ ಕುಲಪತಿ ಪ್ರೊ.ಕೆ.ಬಿ ಗುಡಸಿ

311

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕ್ಲಾಸ್ ರೂಮ್ ನಲ್ಲಿ ಕಲಿಯುವುದರ ಜೊತೆಗೆ ಜೀವನದ ಕೌಶಲ್ಯ ಪಾಠವನ್ನು ಎನ್.ಎಸ್.ಎಸ್.ನಂತಹ ಯೋಜನೆ ಮೂಲಕ ಕಲಿಯಲು ಸಾಧ್ಯ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್.ಕೋಶ ಹಾಗೂ ಕವಿವಿಯ ಸ್ನಾತಕೋತ್ತರ ಎನ್.ಎಸ್ ಎಸ್ ಘಟಕ, ಕವಿವಿಯ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಹಾಗೂ ಕವಿವಿ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕವಿವಿಯ ಸೆನೆಟ್ ಸಭಾಂಗಣದಲ್ಲಿ  2021-22ನೇ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನೊಬ್ಬರಿಗೆ ಸ್ಪಂದಿಸುವ ಗುಣ ಎನ್.ಎಸ್.ಎಸ್. ಕಲಿಸುವದರ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಎನ್.ಎಸ್.ಎಸ್ ಪಾತ್ರ ಬಹಳ ಇದ್ದು, ಗ್ರಾಮಗಳ ಸ್ವಚ್ಛತೆ, ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಎನ್.ಎಸ್.ಎಸ್.ಪೂರಕವಾದ ಯೋಜನೆ ಆಗಿದ್ದು, ಸಾಮಾನ್ಯ ಜನರಿಗೆ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಜಾಗೃತಿ ಮೂಡಿಸುವಲ್ಲಿ ಎನ್.ಎಸ್.ಎಸ್. ಸ್ವಯಂ ಸೇವಕರ ಪಾತ್ರ ಶ್ಲಾಘನೀಯ ಎಂದ ಅವರು, ನಾಯಕತ್ವದ ಗುಣಗಳನ್ನು ಎನ್.ಎಸ್.ಎಸ್ ಕಲಿಸುತ್ತದೆ ಎಂದರು.

ಕುಲಸಚಿವರಾದ ಯಶಪಾಲ್ ಕ್ಷೀರಸಾಗರ ಮಾತನಾಡಿ, ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಅಂತರ ವ್ಯಕ್ತಿ ಸಂಬಂಧ ಬೆಳಸುವಲ್ಲಿ ಪಾತ್ರ ವಹಿಸುತ್ತದೆ. ವಿಶೇಷ ಶಿಬಿರಗಳಲ್ಲಿ ಮಹಿಳಾ ‌ಎನ್.ಎಸ್.ಎಸ್ ಸ್ವಯಂ ಸೇವಕರು ಹೆಚ್ಚು ಪ್ರಭಾವ ಬೀರುತ್ತಾರೆ ಎಂದರು. ಕಾನೂನು ವಿಭಾಗದ ಡೀನ್ ಪ್ರೊ.ಶತರಬಾಬು ಮಾತನಾಡಿ, ವ್ಯಕ್ತಿತ್ವ ಬೆಳವಣಿಗೆ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ‌ಭಾಗವಹಿಸಬೇಕು. ಇದರಿಂದ ಅವರಲ್ಲಿ ‌ಆತ್ಮವಿಶ್ವಾಸ ಬೆಳಸಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಎಸ್.ಕೆ.ಪವಾರ ಮಾತನಾಡಿ, ದೇಶ ಪ್ರಗತಿ ಸಾಧಿಸಲು ವಿದ್ಯಾರ್ಥಿಗಳ ಪಾತ್ರಬಹಳ ಇದೆ. ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ ಆಗಿದ್ದು ದೇಶದ ಎಲ್ಲಾ ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ಎನ್.ಎಸ್.ಎಸ್ ಜೊತೆಗೆ ಎನ್.ಸಿ.ಸಿ ಕ್ರೀಡೆಯಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತದೆ. ಎನ್.ಎಸ್.ಎಸ್ ‌ಜೀವನದ ಕೌಶಲ್ಯವನ್ನು ಶಿಸ್ತು, ಸೇವಾ ಮನೋಭಾವ ಅತ್ಯುತ್ತಮ ವಿಚಾರಗಳನ್ನು ಬೆಳೆಸುವಲ್ಲಿ ಅತ್ಯುತ್ತಮ ಯೋಜನೆ ಆಗಿದೆ ಎಂದರು.

ಈ ವೇಳೆಯಲ್ಲಿ ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ‌ಕೇಂದ್ರದ ಸಸ್ಯಶಾಸ್ತ್ರ ವಿದ್ಯಾರ್ಥಿ ಮತ್ತು ಎನ್.ಎಸ್.ಎಸ್ ಸ್ವಯಂ ಸೇವಕ ಶಿವಯೋಗಿ ಹಾವೇರಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ್ದಕ್ಕಾಗಿ ಕುಲಪತಿಗಳು ಸನ್ಮಾನಿಸದರು. ಕವಿವಿಯ ಎನ್.ಎಸ್.ಎಸ್ ಕೋಶದ ಸಂಯೋಜಕ ಡಾ.ಎಂ.ಬಿ.ದಳಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ದಿನದಂದು ಸುಮಾರು 800 ವಿವಿಧ ಬಗೆಯ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕವಿವಿ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಡಾ.ಎಸ್.ಜಿ.ಚಲುವಾದಿ, ಕವಿವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರಭಾ ಗುಡ್ಡದಾನ್ವೇರಿ, ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್ ಅಧಿಕಾರಿ ಡಾ.ಎನ್.ಎಸ್.ತಳವಾರ, ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಡಾ‌.ಶಿವಕುಮಾರ್ ಎಮ್.ಎ, ವಾಣಿಜ್ಯ ವಿಭಾಗದ ಡೀನ್ ಚಂದ್ರಮಾ ಸೇರಿದಂತೆ 150ಕ್ಕೂ ಹೆಚ್ಚು ಎನ್.ಎಸ್‌.ಎಸ್. ಸ್ವಯಂ ಸೇವಕರು ‌ಹಾಜರಿದ್ದರು.


TAG


Leave a Reply

Your email address will not be published. Required fields are marked *

error: Content is protected !!