ಸಿಎಂ ಮಾತು ಬರೀ ಹೆಡ್ ಲೈನ್ ಆಗದಿರಲಿ…

555

ಸಿಎಂ ಬಿ.ಎಸ್ ಯಡಿಯೂರಪ್ಪನವರು ಮಾಧ್ಯಮದವರ ಬಗೆಗಿನ ಕಾಳಜಿ ಮತ್ತು ಅವರಿಗೆ ಸಿಗಬೇಕಾದ ಸೌಲಭ್ಯದ ಬಗ್ಗೆ ಮಾತ್ನಾಡಿದ್ದಾರೆ. ಅವರಿಗೆ ಮೊದಲು ಧನ್ಯವಾದಗಳು. ಆದ್ರೆ, ಇದು ಬರೀ ಮಾತಿನಲ್ಲಿ, ಬಿಳಿ ಹಾಳೆಯಲ್ಲಿ ಉಳಿಯಬಾರದು. ತುರ್ತಾಗಿ ಜಾರಿಗೆ ಬರಬೇಕಾಗಿರುವ ವಿಷಯಗಳಾಗಿವೆ. ಯಾಕಂದ್ರೆ, ವೃತ್ತಿ ಭದ್ರತೆಯಿಲ್ಲದೆ ಬದುಕುವ ಪತ್ರಕರ್ತರ ಬಗ್ಗೆ ಸರ್ಕಾರ ಕೆಲ ಮಹತ್ವದ ಕೆಲಸಗಳನ್ನ ಮಾಡಬೇಕಿದೆ. ಹೆಲ್ತ್ ಕಾರ್ಡ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದು ಕಾರ್ಯರೂಪಕ್ಕೆ ತರುವ ಕೆಲಸ ಮೊದಲು ಆಗಬೇಕು.

ಸದಾ ಒತ್ತಡದಲ್ಲಿ ಕೆಲಸ ಮಾಡುವ ಮಾಧ್ಯಮದವರಿಗೆ ಸಿಗುವ ಸಂಬಳ ತುಂಬಾ ಕಡಿಮೆ. ದೊಡ್ಡ ಮೊತ್ತದ ಸಂಬಳ ಪಡೆಯುವ ಪತ್ರಕರ್ತನಾಗುವಷ್ಟರಲ್ಲಿ ಅವರ ಮೂಕ್ಕಾಲು ಆಯುಷ್ಯ ಮುಗಿದಿರುತ್ತೆ. ಅಷ್ಟರವರೆಗೂ ಫಿಲ್ಡ್ ನಲ್ಲಿ ಇದ್ರೆ ಪುಣ್ಯ. ಹೀಗಾಗಿ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ತುಂಬಾ ಅವಶ್ಯಕವಾಗಿರುವ ವಿಚಾರವಾಗಿದೆ. ಇದು ಅವನಿಗೆ ಮತ್ತು ಆತನ ಕುಟುಂಬದ ಆರ್ಥಿಕತೆಗೆ ಒಂದಿಷ್ಟು ಆಸರೆ ನೀಡಿದಂತೆ ಆಗುತ್ತೆ. ಯಾಕಂದ್ರೆ, ಈ ಬಗ್ಗೆ ಬಹುತೇಕ ಯಾವ ಸುದ್ದಿ ಸಂಸ್ಥೆಗಳು ಜವಾಬ್ದಾರಿಯನ್ನ ತೆಗೆದುಕೊಂಡಿಲ್ಲ. ಇದರ ಜೊತೆಗೆ ಕರ್ತವ್ಯದಲ್ಲಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾಗುವ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ನೀಡಿವುದು ಸಹ ಬಹಳ ಹಿಂದೆ ಆಗಬೇಕಿದ್ದ ಕೆಲಸ. ಈ ಬಗ್ಗೆ ಸಹ ಸಿಎಂ ಭರವಸೆ ನೀಡಿದ್ದಾರೆ. ಇದು ಚುನಾವಣೆ ಟೈಂನಲ್ಲಿ ನೀಡುವ ಭರವಸೆಯಂತೆ ಆಗಬಾರದು.

ಸರ್ಕಾರಿ ನೌಕರನಿಂದ ಹಿಡಿದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಯ ಕುಟುಂಬಕ್ಕೆ ಈ ಸೌಲಭ್ಯ ಸಿಗುತ್ತೆ. ಆದ್ರೆ, ಉದ್ಯಮ ಕ್ಷೇತ್ರವಾಗಿರುವ ಮಾಧ್ಯಮದಲ್ಲಿ ಮಾತ್ರ ಅಕಾಲಿಕ ಮರಣಕ್ಕೆ ತುತ್ತಾಗುವ ಪತ್ರಕರ್ತನಿಗೆ ಪರಿಹಾರ ಸಿಗುವುದಿಲ್ಲ. ಪತ್ರಕರ್ತನಾಗಿ ಏನ್ ಮಾಡ್ದಿ. ಆರಕ್ಕ ಏರಲಿಲ್ಲ. ಮೂರಕ್ಕ ಇಳಿಲಿಲ್ಲ ಅನ್ನೋ ಮಾತುಗಳು ಆತನ ಕುಟುಂಬಸ್ಥರು ಆಗಾಗ ಹೇಳ್ತಾನೆ ಇರ್ತಾರೆ. ಕಡೇ ಪಕ್ಷ ಕೆಲಸದಲ್ಲಿದ್ದಾಗ ಯಾವುದೋ ಕಾರಣಕ್ಕೆ ಸಾವನ್ನಪ್ಪಿದ್ರೆ, ಆತನ ಕುಟುಂಬಕ್ಕೆ ಒಂದಿಷ್ಟು ಪರಿಹಾರ ತಲುಪಿತು ಅಂದ್ರೆ ಒಂದಿಷ್ಟು ಆರ್ಥಿಕ ಇಂಧನವಾಗುತ್ತೆ. ಬದುಕಿನ ಬಂಡಿ ಸಾಗಿಸಲು ಶಕ್ತಿ ಬರುತ್ತೆ. ಈ ವಿಚಾರದಲ್ಲಿ ಮಾಧ್ಯಮ ಸಂಸ್ಥೆಗಳು ಮಾನವೀಯತೆಯ ದೃಷ್ಟಿಯಿಂದ ಸರ್ಕಾರ ಮತ್ತು ಪತ್ರಕರ್ತನ ಕುಟುಂಬದ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕಿದೆ.

ಇನ್ನು ಹಿಂದುಳಿದ ಪತ್ರಕರ್ತರಿಗೆ ಮನೆ ನೀಡುವುದು. ಇದು ಸಹ ಅತ್ಯಂತ ಅವಶ್ಯವಾಗಿರುವ ಅಂಶಗಳಲ್ಲೊಂದು. ಇಂದಿಗೂ ಶೇಕಡ 75ಕ್ಕೂ ಹೆಚ್ಚು ಪತ್ರಕರ್ತರು ಬಾಡಿಗೆ ಮನೆಯಲ್ಲಿ ಜೀವನ ಮಾಡ್ತಿದ್ದಾರೆ. ಅಂತವರನ್ನ ಗುರುತಿಸಿ ಅವರಿಗೆ ಸೂರು ಕಲ್ಪಿಸಿಕೊಡಬೇಕಾಗಿದೆ. ಸಾಲ ಮಾಡಿಯಾದ್ರೂ ಮನೆ ಕಟ್ಟಿಸಬೇಕು, ಜಾಗ ತೆಗೆದುಕೊಳ್ಳಬೇಕು ಅಂದ್ರೆ ಬ್ಯಾಂಕ್ ಗಳು ಸಾಲ ಕೊಡಲು ಹಿಂದುಮುಂದೆ ನೋಡುತ್ತವೆ. ಒಂದು ವೇಳೆ ಸಿಕ್ರೂ ಶೇಕಡ 18ರಷ್ಟು ಬಡ್ಡಿ ಕಾಮನ್ ಆಗಿದೆ. ಬರುವ ಸಂಬಳದಲ್ಲಿ ತಿಂಗಳಿಗೆ ಅಷ್ಟೊಂದು ಬಡ್ಡಿ ಕಟ್ಟಿ ಜೀವನ ನಡೆಸೋದು ಎಷ್ಟು ಕಷ್ಟ ಅನ್ನೋದು ಅನುಭವಸ್ತಿರುವ ಪ್ರತಿಯೊಬ್ಬ ಪತ್ರಕರ್ತನಿಗೂ ಗೊತ್ತಿದೆ. ಅದರಲ್ಲೂ ಬೆಂಗಳೂರು ಅನ್ನೋ ದುಬಾರಿ ನಗರದಲ್ಲಿ ಬದುಕುತ್ತಿರುವ ಮೀಡಿಯಾ ಮಂದಿ ಪಾಡು ಯಾವನಿಗೂ ಬೇಡ. ಹೀಗಾಗಿ ವಸತಿ ಯೋಜನೆ ಅಡಿ ನಿಜವಾದ ಪತ್ರಕರ್ತರಿಗೆ ಮನೆ ನೀಡುವ ಕೆಲಸ ಆಗಬೇಕು.

ಇನ್ನು ಪತ್ರಕರ್ತರಿಗೆ ಬಸ್ ಪಾಸ್ ನೀಡುವುದು. ಜಿಲ್ಲೆ, ತಾಲೂಕುಗಳಲ್ಲಿ ಕೆಲಸ ಮಾಡ್ತಿರುವ ಪತ್ರಕರ್ತರಿಗೆ ಇದರ ಅವಶ್ಯಕತೆಯಿದೆ. ಸುದ್ದಿಗಾಗಿ ಜಿಲ್ಲೆಯ ಅನೇಕ ಭಾಗದ ಕಡೆ ಸುತ್ತಾಡಬೇಕಾಗುತ್ತೆ. ಕೆಲವು ತುರ್ತು ಸಂದರ್ಭಗಳಲ್ಲಿ ಇತರೆ ಜಿಲ್ಲೆಗಳಿಗೂ ಹೋಗಿ ಕೆಲಸ ಮಾಡಬೇಕಾಗುತ್ತೆ. ಇನ್ನು ಕೆಲವು ಸಾರಿ ವರ್ಗಾವಣೆಯಾಗಬೇಕಾಗುತ್ತೆ. ಹೀಗಾಗಿ ಜಿಲ್ಲೆ, ತಾಲೂಕುಗಳಲ್ಲಿ ಕಾರ್ಯನಿರ್ವಹಿಸ್ತಿರುವ ಪತ್ರಕರ್ತರಿಗೆ ಬಸ್ ಪಾಸ್ ನೀಡುವುದು ಉತ್ತಮ ಕೆಲಸ. ಇದನ್ನ ವಿತರಣೆ ಮಾಡುವ ಸಲುವಾಗಿ ಜಿಲ್ಲಾ ವರ್ತಾ ಇಲಾಖೆ, ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಸಂಸ್ಥೆಗಳ ಸಹಕಾರದೊಂದಿಗೆ ತಲುಪಬೇಕಾದ ಪತ್ರಕರ್ತರಿಗೆ ಬಸ್ ಪಾಸ್ ಸಿಗುವಂತಾಗಲಿ. ಆಗ ಪ್ರತಿಯೊಬ್ಬ ವರದಿಗಾರರಿಗೆ ಸಾಕಷ್ಟು ರೀತಿಯಿಂದ ಅನುಕೂಲವಾಗಲಿದೆ.

ಇನ್ನು ತುಂಬಾ ಮಹತ್ವದ ವಿಚಾರಗಳಲ್ಲಿ ಜಾಹೀರಾತು ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ವಾರ್ತಾ ಇಲಾಖೆ ಮತ್ತು ಸರ್ಕಾರಿ ಜಾಹೀರಾತು ಸಂಸ್ಥೆಯ ಮೂಲಕ ನೀಡಬೇಕು ಅಂತಾ ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಸಂಧಾನ ಮಾಡಿಕೊಳ್ಳದೆ. ಖಾಸಗಿ ಸಂಸ್ಥೆಗಳ ಹಸ್ತಕ್ಷೇಪವಿಲ್ಲದೆ ಸಣ್ಣ, ಮಧ್ಯಮ ಗಾತ್ರದ ಮಾಧ್ಯಮ ಸಂಸ್ಥೆಗಳಿಗೆ ಜಾಹೀರಾತು ಹೆಚ್ಚೆಚ್ಚು ಸಿಗುವಂತಾಗಬೇಕು. ಆಗ, ಸಣ್ಣಪುಟ್ಟ ಪತ್ರಿಕೆಗಳು ಉಳಿಯಲು ಸಾಧ್ಯ. ಇದರ ಜೊತೆಗೆ ವಾರ ಪತ್ರಿಕೆ ಸೇರಿದಂತೆ ನಿಯತಕಾಲಿಕ ಪತ್ರಿಕೆಗಳಿಗೂ ಸರ್ಕಾರಿ ಜಾಹೀರಾತು ಸಿಗುವಂತಾಗಬೇಕು. ಇವುಗಳಿಗೆ ಸರ್ಕಾರಿ ಜಾಹೀರಾತು ಸಿಗ್ತಿಲ್ಲ. ಇವುಗಳಿಗೂ ವಾರ್ತಾ ಇಲಾಖೆಗೂ ಸಂಪರ್ಕವಿಲ್ಲ. ಹೀಗಾಗಿ ಈ ಬಗ್ಗೆ ಚಿಂತನೆ ನಡೆಸಿ ಒಂದೊಳ್ಳೆ ನಿರ್ಧಾರಕ್ಕೆ ಬರಬೇಕಾಗಿದೆ. ಆಗ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಅರ್ಧಕ್ಕೆ ನಿಂತು ಹೋಗುವುದು ತಪ್ಪಿಸಬಹುದು.

ಹೀಗೆ ಹತ್ತು ಹಲವು ಮಹತ್ವದ ವಿಚಾರಗಳ ಬಗ್ಗೆ ಸೂಚಿಸಲಾಗಿದೆ. ಆದ್ರೆ, ಇದನ್ನ ಸರಿಯಾದ ರೀತಿಯಲ್ಲಿ ಜಾರಿಗೆ ತರಬೇಕು. ಸಕಾಲಕ್ಕೆ ನಿಜವಾದ ಪತ್ರಕರ್ತರಿಗೆ ಸಿಗುವಂತಾಗಬೇಕು. ಇಲ್ದೇ ಹೋದ್ರೆ ಇದರಲ್ಲಿಯೂ ಗೋಲ್ ಮಾಲ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ನಮ್ಮಲ್ಲಿಯೂ ಮಹಾನ್ ಪತ್ರಕರ್ತರಿದ್ದಾರೆ. ಹೀಗಾಗಿ ಅನೇಕ ಸಾರಿ ನಿಜವಾದ ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗ್ತಿಲ್ಲ. ಇದೀಗ ಸಿಎಂ ಅವರು ಪತ್ರಕರ್ತರಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಅಂತಾ ಹೇಳಿದ್ದಾರೆ. ಈ ಮಾತನ್ನ ಪ್ರತಿ ಸರ್ಕಾರ ಹೇಳುತ್ತೆ. ಆದ್ರೆ, ಕೆಲಸ ಮಾತ್ರ ಸರಿಯಾಗಿ ಆಗುವುದಿಲ್ಲ. ಈ ಸಾರಿ ಹಾಗೇ ಆಗದೇ, ಚರ್ಚೆಯಾದ ವಿಷಯಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಅನ್ನೋದು ಪ್ರತಿ ಪತ್ರಕರ್ತನ ಆಶಯ.

ನಿಮ್ಮ ಅಭಿಪ್ರಾಯ ತಿಳಿಸಲು: prajaastra18@gmail.com




Leave a Reply

Your email address will not be published. Required fields are marked *

error: Content is protected !!