ಮುದ್ರಣ ಮಾಧ್ಯಮದ ಈ ಮೂವರಿಗೆ ಹೊಸ ಸವಾಲು…

608

ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಬದಲಾವಣೆಗಳು ಆಗ್ತಿವೆ. ಹೀಗಾಗಿ ಪತ್ರಕರ್ತರು ಹೊಸ ಪ್ರಯೋಗಗಳಿಗೆ ಸಿದ್ಧವಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕ್ಷಣ ಕ್ಷಣದ ಸುದ್ದಿಯ ಧಾವಂತದಲ್ಲಿರುವ ಮೀಡಿಯಾ ಜಗತ್ತು, ಕೆಲವು ಸಾರಿ ಮಾಧ್ಯಮ ಸಂಸ್ಥೆಗಳು ಮಾಡುವ ವಿನೂತನ ಪ್ರಯೋಗಕ್ಕೆ(ಬದಲಾವಣೆಗೆ) ಪತ್ರಕರ್ತರು ಒಗ್ಗಿಕೊಳ್ಳುವುದು ಕಷ್ಟಕರವಾಗುತ್ತದೆ. ಕನ್ನಡ ಪ್ರಿಂಟ್ ಮೀಡಿಯಾದಲ್ಲಿ ನೂತನ ಪ್ರಯೋಗ ಶುರುವಾಗಿದ್ದು, ಹಿರಿ-ಕಿರಿಯ ಪತ್ರಕರ್ತರನ್ನು ಗೊಂದಲಕ್ಕೆ ತಳ್ಳಿರುವುದು ಸುಳ್ಳಲ್ಲ.

ಪತ್ರಿಕಾ ಮಾಧ್ಯಮದಲ್ಲಿ ವರದಿಗಾರಿಕೆ, ಉಪ ಸಂಪಾದಕ ಹಾಗೂ ಪುಟ ವಿನ್ಯಾಸಗಾರರು ಸೇರಿದಂತೆ ವಿವಿಧ ವಿಭಾಗಗಳಿದ್ದು, ಆಯಾ ವಿಭಾಗದವರು ತಮ್ಮ ಕೆಲಸದಲ್ಲಿ ವೃತ್ತಿ ನೈಪುಣ್ಯತೆ ಹೊಂದಿರುತ್ತಾರೆ. ಆದ್ರೆ, ಇದೀಗ ಈ ಮೂರು ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೊಸ ಜವಾಬ್ದಾರಿ ನೀಡಲಾಗ್ತಿದೆ. ಇವರು ಆಲ್ ರೌಂಡರ್ ರೀತಿ ಕೆಲಸ ಮಾಡಬೇಕಾಗಿದೆ. ಇಲ್ದೇ ಹೋದ್ರೆ ಅವರ ವೃತ್ತಿ ಬದುಕಿಗೆ ತೊಡಕಾಗುವ ಸಾಧ್ಯತೆಯಿದೆ. ಹಾಗಾದ್ರೆ ವರದಿಗಾರ, ಉಪ ಸಂಪಾದಕ ಹಾಗೂ ಪುಟ ವಿನ್ಯಾಸಗಾರರಿಗೆ ಏನು ಸವಾಲುಗಳಿವೆ ಗೊತ್ತಾ?

ಈ ಮೂವರು ಈ ಮೂರು ವಿಭಾಗದಲ್ಲಿ ಕೆಲಸ ಮಾಡುವ ಕೌಶಲ್ಯ ಕಲಿಯಬೇಕಾಗಿದೆ. ರಿಪೋರ್ಟರ್ ವರದಿಗಾರಿಕೆ ಜೊತೆಗೆ ಸಬ್ ಎಡಿಟಿಂಗ್ ಹಾಗೂ ಪೇಜ್ ಮಾಡುವುದನ್ನ ಕಲಿಯಬೇಕು. ಅದೇ ರೀತಿ ಉಪ ಸಂಪಾದಕ ವರದಿಗಾರಿಕೆ ಮತ್ತು ಪುಟವಿನ್ಯಾಸ ಮಾಡಬೇಕು. ಪೇಜಿನೇಟರ್ಗಳು ಸಹ ನ್ಯೂಸ್ ಎಡಿಟಿಂಗ್ ಮಾಡುವುದನ್ನ ಕಡ್ಡಾಯವಾಗಿ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಕೆಲ ಕನ್ನಡ ಪತ್ರಿಕಾ ಸಂಸ್ಥೆಗಳಲ್ಲಿ ನೌಕರರಿಗೆ ಸೂಚನೆ ಸಹ ನೀಡಲಾಗಿದೆ. ಹೀಗಾಗಿ ಇನ್ಮುಂದೆ ಇವರು ಒಂದೇ ಕಾರ್ಯಕ್ಷೇತ್ರಕ್ಕೆ ಸಿಮೀತವಾಗುವ ಹಾಗಿಲ್ಲ. ಸಂಸ್ಥೆ ಯಾವ ಟೈಂನಲ್ಲಿ ಏನ್ ಕೆಲಸ ಹೇಳುತ್ತೋ ಅದನ್ನ ಮಾಡಲು ರೆಡಿ ಇರಬೇಕು. ಇಲ್ದೇ ಹೋದ್ರೆ ವೃತ್ತಿ ಸಮಸ್ಯೆಯಾಗುತ್ತೆ ಅಂತಾ ಸಂಪಾದಕರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಸಂಸ್ಥೆಯ ಈ ಮೂವರಿಗೆ ಇದು ಹೊಸ ಸವಾಲಾಗಿದೆ. ಇದರ ಜೊತೆಗೆ ಇದರಲ್ಲಿ ಒಂದಿಷ್ಟು ಸಮಸ್ಯೆಗಳಿವೆ. ಹೀಗಾಗಿ ಈ ರೀತಿಯ ಬದಲಾವಣೆ ಸಕ್ಸಸ್ ಗಿಂತ ಫೇಲ್ ಆಗುವ ಸಾಧ್ಯತೆಗಳು ಹೆಚ್ಚು. ಯಾರೇ ಆಗಲಿ ತಾವು ಮಾಡುವ ಕೆಲಸದ್ಮೇಲೆ ಪ್ರೀತಿ, ಆಸಕ್ತಿ ಇಲ್ಲದೆ ಹೋದ್ರೆ ಅದನ್ನ ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಆಗ ಅದರ ಔಟ್ ಪುಟ್ ಮೊದಲಿದ್ದ ರೀತಿಯಲ್ಲಿ ಇರುವುದಿಲ್ಲ. ಈ ಬದಲಾವಣೆಯಿಂದ ಆಗುವ ಸಮಸ್ಯೆಗಳೇನು ಅನ್ನುವುದಾದರೆ..

ಹೊಸ ಕಾರ್ಯಕ್ಕೆ ಹಿರಿಯರು ಒಗ್ಗಿಕೊಳ್ಳುವುದು ಕಷ್ಟ!

ವರದಿಗಾರಿಕೆ, ಉಪ ಸಂಪಾದಕ ಹಾಗೂ ಪುಟ ವಿನ್ಯಾಸ ಮಾಡುವ ವಿಭಾಗದಲ್ಲಿ ಹಿರಿಯರು ಇರುತ್ತಾರೆ. ಇಷ್ಟು ವರ್ಷಗಳ ಕಾಲ ಒಂದು ಕಾರ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿರ್ತಾರೆ. ಅದರಲ್ಲಿ ಅವರಿಗೆ ಅನುಭವ ಇರುತ್ತೆ. ನಿಗಿದಿತ ಸಮಯಕ್ಕೆ ತಮ್ಮ ಕೆಲಸ ಮಾಡ್ತಾರೆ. ಹೀಗಿರುವಾಗ ಹಿರಿಯ ವರದಿಗಾರರಿಗೆ ಎಡಿಟಿಂಗ್ ಮಾಡಿ, ಪೇಜ್ ಡಿಸೈನ್ ಮಾಡಿ ಅಂದ್ರೆ ಟೆಕ್ನಾಲಜಿ ಜೊತೆ ಫೈಟ್ ಮಾಡಬೇಕು. ಇದಕ್ಕೆ ಹೊಂದಿಕೊಳ್ಳುವುದು ಕಷ್ಟ. ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಅವರ ಕೆಲಸದ್ಮೇಲೆ ಅವರಿಗೆ ಅಗೌರವ ಮೂಡುವ ಸಾಧ್ಯತೆ ಇರುತ್ತೆ.

ಕಿರಿಯರ ಮೇಲೆ ಹೆಚ್ಚಿನ ಜವಾಬ್ದಾರಿ

ಹಿರಿಯರ ಜೊತೆ ಕಿರಿಯ ಸಹದ್ಯೋಗಿಗಳು ಸಹ ಇರ್ತಾರೆ. ಇವರು ಕಲಿಯುವುದು ಸಾಕಷ್ಟು ಇರುತ್ತೆ. ಒಂದು ಕಾರ್ಯಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದಾಗ ಉತ್ತಮ ಕೆಲಸ ಮಾಡಲು ಸಾಧ್ಯ. ಹೀಗಿರುವಾಗ ಸುದ್ದಿ ಸಂಪಾದನೆ ಜೊತೆಗೆ ವರದಿಗಾರಿಕೆ ಮಾಡುವುದು, ಪೇಜ್ ಮಾಡುವುದು. ಪೇಜ್ ಡಿಸೈನ್ ಮಾಡುವವರು ವರದಿಗಾರಿಕೆ ಮಾಡುವುದು. ಸಬ್ ಎಡಿಟರ್ ಪೇಜ್ ಮಾಡುವುದು ಅಂದಾಗ, ಒಂದು ಕ್ಷೇತ್ರದಲ್ಲಿ ಪೂರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಆಗ ಅವರಿಂದ ಉತ್ತಮವಾದ ಕೆಲಸ ನಿರೀಕ್ಷೆ ಮಾಡುವುದು ಕಷ್ಟ.

ಸಮಯ, ಸಂವಹನ ಮತ್ತು ನೈಜತೆ ಕೊರತೆ

ಈಗಾಗ್ಲೇ ಅವರದೆಯಾದ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವವರಿಗೆ ಇತರೆ ಕೆಲಸದಲ್ಲಿಯೂ ತೊಡಗಿಸಿಕೊಳ್ಳಬೇಕು ಅಂದಾಗ ಮೇಲಿನ ಈ ಮೂರು ಪ್ರಮುಖ ಕೊರತೆ ಕಾಡುತ್ತೆ. ನಿತ್ಯ ವರದಿ ಮಾಡುವ ರಿಪೋರ್ಟರ್ ಗೆ ಸ್ಟೋರಿ ನೆಟ್ ವರ್ಕ್ ಚೆನ್ನಾಗಿ ತಿಳಿದಿರುತ್ತೆ. ಅಧಿಕಾರಿಗಳಿಂದ ಹಿಡಿದು ಪ್ರತಿಯೊಂದು ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿರುತ್ತಾರೆ. ಹೀಗಿರುವಾಗ ದಿಢೀರ್ ಎಂದು ಸಬ್ ಎಡಿಟರ್ ಗೆ ವರದಿಗಾರಿಕೆಗೆ ಕಳಿಸಿದ್ರೆ ಅವರು ಸಮಯಕ್ಕೆ ಸರಿಯಾಗಿ ಸುದ್ದಿ ಕೊಡಲು ಆಗುವುದಿಲ್ಲ. ಯಾರೊಂದಿಗೆ ಸಂವಹನ ಮಾಡಬೇಕು ಅನ್ನೋದರ ಸ್ಪಷ್ಟತೆ ಇರುವುದಿಲ್ಲ ಮತ್ತು ನೀಡಿದ ವರದಿಯಲ್ಲಿ ನೈಜತೆಯ ಕೊರತೆ ಕಂಡು ಬರುತ್ತೆ. ವರದಿಗಾರ, ಪೇಜಿನೇಟರ್ ಹಾಗೂ ಸಬ್ ಎಡಿಟರ್ ಅವರು ತಮ್ಮ ಕಾರ್ಯಕ್ಷೇತ್ರ ಬಿಟ್ಟು ಪದೆಪದೆ ಬದಲಾವಣೆಯಾಗ್ತಿದ್ರೆ ಇವುಗಳನ್ನ ಫೇಸ್ ಮಾಡಬೇಕಾಗುತ್ತೆ.

ಪದೆಪದೆ ಕೆಲಸ ಬದಲಾವಣೆ ಒಳ್ಳೆಯದಲ್ಲ

ಒಂದು ವಾರ ವರದಿ ಮಾಡುವುದು. ಮತ್ತೊಂದು ವಾರ ಉಪ ಸಂಪಾದಕ ಕೆಲಸ ಮಾಡುವುದು. ಮತ್ತೊಂದು ವಾರ ಪೇಜ್ ಡಿಸೈನ್ ಮಾಡುವುದು. ಹೀಗೆ ವೃತ್ತಿಯಲ್ಲಿ ಪದೆಪದೆ ಕೆಲಸದ ಬದಲಾವಣೆಯಾದ್ರೆ ಸಿಬ್ಬಂದಿ ಮತ್ತು ಸಂಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ನೌಕರ ಮತ್ತು ಸಂಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಇದರ ಮತ್ತೊಂದು ಎಫೆಕ್ಟ್ ಓದುಗರ ಮೇಲಾಗುತ್ತೆ.

ಯಾವುದರಲ್ಲಿಯೂ ಪರಿಪೂರ್ಣತೆ ಇರುವುದಿಲ್ಲ

ಒಬ್ಬ ಪತ್ರಕರ್ತ ತಾನು ಮಾಡ್ತಿರುವ ಕೆಲಸದಲ್ಲಿ ಪೂರಿಪೂರ್ಣತೆ ಹೊಂದಬೇಕು ಅಂದ್ರೆ ಒಂದಿಷ್ಟು ವರ್ಷಗಳು ಬೇಕು. ಅಂದಾಗ ಆಯಾ ಕ್ಷೇತ್ರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ. ಇಲ್ಲದೇ ಹೋದ್ರೆ, ಯಾವುದರಲ್ಲಿಯೂ ಅವರು ಸರಿಯಾದ ಜ್ಞಾನ, ಪಾಂಡಿತ್ಯ, ಅನುಭವದ ಪರಿಪೂರ್ಣತೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಪತ್ರಕರ್ತನ ಕೆಲಸದ ಮೇಲಿನ ಅಭಿರುಚಿ ಕಡಿಮೆಯಾಗಿ ಅವರಲ್ಲಿರುವ ಪ್ರತಿಭೆ ನಿಂತ ನೀರಾಗುತ್ತೆ. ಇದ್ರಿಂದ ಸಂಸ್ಥೆ ಮತ್ತು ನೌಕರ ಇಬ್ಬರಿಗೂ ನಷ್ಟ.

ನಿಮ್ಮ ಅಭಿಪ್ರಾಯಗಳಿಗೆ: prajaastra18@gmail.com




Leave a Reply

Your email address will not be published. Required fields are marked *

error: Content is protected !!