ಚಿಮಣಿ ಬುಡುಕಿನ ಕತ್ತಲಂತೆ ಮಾಧ್ಯಮದೊಳಗಿನ ಸಮಸ್ಯೆಗಳು…

476

ಓದುಗ ಮನಸ್ಸುಗಳಿಗೆ ಮೊದಲು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಳೆದ ಆರು ತಿಂಗಳ ಕಾಲ ಈ ಒಂದು ಅಂಕಣದ ಮೂಲಕ, ಮಾಧ್ಯಮದೊಳಗಿನ ಹತ್ತು ಹಲವು ಸಮಸ್ಯೆಗಳ ಕುರಿತು ಬರೆಯುವ ಪ್ರಯತ್ನ ಮಾಡಿದ್ದೇನೆ. ನನ್ಗೆ ದಕ್ಕಿದ್ದು, ನಿಲುಕಿದ್ದನ್ನ ಪ್ರಮಾಣಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಜಗದ ನೋವಿಗೆ ಮಿಡಿಯುವ ಮೀಡಿಯಾ ಮನಸ್ಸುಗಳ ಅಂತರಾಳದಲ್ಲಿ ಅಡಗಿರುವ ನೋವನ್ನ ನಿಮ್ಮೆದರು ಹೊರ ಹಾಕುವ ಕೆಲಸ ಮಾಡಿದೆ.

ಮಾಧ್ಯಮ ಅನ್ನೋದು ಅವಸರದ ಸಾಹಿತ್ಯ. ಇಲ್ಲಿ ಪಾದರಸದಂತೆ ಕೆಲಸ ಮಾಡುವವನು ಬದುಕಲು ಸಾಧ್ಯ. ಸೋಮಾರಿಗಳಿಗೆ ಇಲ್ಲಿ ಜಾಗವಿಲ್ಲ. ಇಂಥಾ ಕ್ರಿಯಾಶೀಲ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನ ಎದುರಿಸಿ ತಾನು ಏನೆಂದು ತೋರಿಸಲು ರೆಡಿಯಿರುವ ಪತ್ರಕರ್ತ ಮಾತ್ರ ಹೆಜ್ಜೆ ಗುರುತು ಮೂಡಿಸಲು ಸಾಧ್ಯ. ಸಮಸ್ಯೆಯಿದೆ ಎಂದು ದೂರ ಸರಿದು ನಿಲ್ಲುವ ಬದಲು, ಪರಿಹಾರ ಹುಡುಕುವ ತಲೆಗಳು ಬೇಕು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದ್ರೆ, ಸಾಧನೆಯ ತುದಿಯಲ್ಲಿ ಕುಳಿತವರು, ನಡೆದು ಬಂದ ಹಾದಿಯನ್ನ ಮರೆತು ಹೋದಾಗ ಮಾತ್ರ ಸಮಸ್ಯೆಗಳಿಗೆ ಮತ್ತೆ ಜೀವ ಬರುತ್ತವೆ.

ಇದು ಕಚ್ಚಾ ರಸ್ತೆ. ಹೈಫೈ ಲೈಫ್ ನಡೆಸಲು ಆಗವುದಿಲ್ಲವೆಂದು ಗೊತ್ತಿದ್ದೂ, ಮಾಧ್ಯಮದ ನನ್ನ ಸಂಗಾತಿಗಳು ನಿಯತ್ತಾಗಿ ಕೆಲಸ ಮಾಡ್ತಿದ್ದಾರೆ. ನಾನು ‘ಆಫ್ ದಿ ಸ್ಕ್ರೀನ್’ ಅಂಕಣದಲ್ಲಿ ಸಾಕಷ್ಟು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದೇನೆ. ಸ್ವಅನುಭವದ ಜೊತೆಗೆ ಸಹದ್ಯೋಗಿಗಳ ಅನುಭವಗಳ ಆಧಾರದ ಮೇಲೆ, ಮೀಡಿಯಾವನ್ನ ಜನರ ನೋಡುವ ದೃಷ್ಟಿಕೋನದಲ್ಲಿ, ಹೊರ ಪ್ರಪಂಚಕ್ಕೆ ಸುಂದರವಾಗಿ ಕಾಣುವ ಮಾಧ್ಯಮಲೋಕ ಒಳಗೆ ಯಾವುದರ ಜೊತೆ ಫೈಟ್ ಮಾಡ್ತಿದೆ ಅನ್ನೋ ವಿಷ್ಯ ಸೇರಿದಂತೆ ತನ್ನನ್ನು ತಾನು ಮಾರಿಕೊಂಡು ಬದುಕುವ ಕೆಲ ಪತ್ರಕರ್ತರ ವಿಷ್ಯ ಇಲ್ಲಿ ಬಂದು ಹೋಗಿವೆ.

ಅನೇಕ ಜನ ಸ್ನೇಹಿತರು ಈ ವಿಚಾರದ ಮೇಲೆ ಬರಿ. ಆ ವಿಷ್ಯ ತುಂಬಾ ಮುಖ್ಯವಾಗಿದೆ. ಅದನ್ನ ಫೋಕಸ್ ಮಾಡು. ನಿನ್ನ ಲೇಖನ ತುಂಬಾ ಸರಳವಾಗಿದೆ. ಇನ್ನು ಸ್ಟ್ರಾಂಗ್ ಆಗಿರಬೇಕು. ಹೀಗೆ ಹತ್ತು ಹಲವು ಸಲಹೆ ರೂಪದ ಎಚ್ಚರಿಕೆ ನೀಡಿದ್ರು. ಹೀಗಾಗಿ ನಮ್ಮ ಕ್ಷೇತ್ರದೊಳಗಿನ ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದೆ. ಇದ್ರಿಂದ ಮಾಧ್ಯಮದಲ್ಲಿ ದಿಢೀರ್ ಬದಲಾವಣೆಯಾಗುತ್ತೆ ಅನ್ನೋ ಭ್ರಮೆಯಿಲ್ಲ. ಮುಂದೊಂದು ದಿನ ಬದಲಾವಣೆ ಕಾಣಬಹುದು ಅನ್ನೋ ಭರವಸೆಯಿದೆ. ಇದು ನಿಜವಾದ್ರೆ ಮೊದಲು ಖುಷಿಯಾಗುವುದು ನನಗೆ. ಈ ಹಿಂದೆ ನಾನೊಂದು ಅಂಕಣದಲ್ಲಿ ಹೇಳಿದ್ದೆ, ಕೆಲಸಕ್ಕಾಗಿ ಊರು ಬಿಟ್ಟು ಬಂದವನಿಗೆ ಸಂಸ್ಥೆ ಬಿಡುವುದು ದೊಡ್ಡದಲ್ಲವೆಂದು. ಕಾರಣವಿಷ್ಟೇ, ಸ್ವಾಭಿಮಾನಕ್ಕೆ ಬೆಲೆ ಇಲ್ಲದ ಜಾಗದಲ್ಲಿ ಜಾಂಢಾ ಊರುವ ಬದ್ಲು ಹೆಜ್ಜೆ ಕಿತ್ತಿ ಬಿಡಬೇಕು ಅನ್ನೋದು.

ಯಾರದೋ ಹೋರಾಟಕ್ಕೆ, ಪ್ರತಿಭಟನೆಗೆ, ಯಾರದೋ ಚಳವಳಿಗೆ ದುಡಿಯುವ ನಾವು, ನಮ್ಮಲ್ಲಿನ ಅನ್ಯಾಯಗಳನ್ನ ಗಟ್ಟಿ ದನಿಯಲ್ಲಿ ವಿರೋಧಿಸುವ ಗುಣ ಬೆಳಸಿಕೊಳ್ಳಬೇಕು . ಇದು ಮಾಡದೆ ಸಂಸ್ಥೆ, ಸಂಸ್ಥೆಯ ಮುಖ್ಯಸ್ಥರ ಬಗ್ಗೆ ಹಿಂದೆ ಮಾತ್ನಾಡುವುದ್ರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ವೃತ್ತಿ ಅಭದ್ರತೆ ಇರುವುದು ಗೊತ್ತಿದ್ದೂ ಈ ಫಿಲ್ಡ್ ಗೆ ಬರುವ ನಾವುಗಳು, ಎಲ್ಲದಕ್ಕೂ ಸಿದ್ಧವಿರಬೇಕು. ಬೇರೆ ಕಡೆ ಕೆಲಸ ಸಿಗುವುದು ಸ್ವಲ್ಪ ಕಷ್ಟವಾಗಬಹುದು, ಸ್ವಲ್ಪ ಕಡಿಮೆ ಸಂಬಳಕ್ಕೆ ಸಿಗಬಹುದು(ಹೆಚ್ಚಿನ ಸಂಬಳ ಸಿಗುವ ಸಾಧ್ಯತೆ ಹೆಚ್ಚು), ಕೆಲವೊಮ್ಮೆ ಕೆಲಸ ಸಿಗದೇ ಇರಬಹುದು. ಇದಕ್ಕೆ ಹೆದರಿಕೊಂಡು ಆಧುನಿಕ ಜೀತ ಪದ್ಧತಿಗೆ ಜೋತು ಬೀಳಬಾರದು.

ನಿಮ್ಮ ಪ್ರತಿಭೆಗೆ, ಕೆಲಸಕ್ಕೆ ಎಲ್ಲಿ ಮನ್ನಣೆ ಸಿಗುತ್ತೋ ಅಲ್ಲಿಗೆ ಎದ್ದು ಹೊರಟು ಬಿಡಿ. ಯಾವತ್ತೂ ಯಾರ ಮೂಲಾಜಿಗೂ ಒಳಗಾಗಬೇಡಿ. ಯಾವುದಕ್ಕೂ ಭಯ ಪಡಬೇಡಿ. ಕೆಲ ವರ್ಷಗಳಿಂದ ಒಂದು ಕೆಲಸಕ್ಕೆ ಹೊಂದಿಕೊಂಡವರಿಗೆ, ಮತ್ತೊಂದು ಕೆಲಸ ಅಂದ್ರೆ ಕಷ್ಟ ಅನ್ನೋ ಮಾತು ಬರುತ್ತೆ. ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡಬಹುದು. ಆ ಧೈರ್ಯ ನಮ್ಮಲ್ಲಿರಬೇಕು. ನಿಮ್ಗೆ ಸಲಹೆ ಕೊಡುವಷ್ಟು ಜ್ಞಾನಿಯಲ್ಲ. ನನ್ನ ಅಭಿಪ್ರಾಯ ಷೇರ್ ಮಾಡ್ತಿದ್ದೇನೆ ಅಷ್ಟೇ. Impossible ಬಿಟ್ಟು ‘I’m Possible ಅಂತಾ ಹೇಳಿ..

(ಅಂಕಣ ಮುಕ್ತಾಯ)




2 thoughts on “ಚಿಮಣಿ ಬುಡುಕಿನ ಕತ್ತಲಂತೆ ಮಾಧ್ಯಮದೊಳಗಿನ ಸಮಸ್ಯೆಗಳು…

    1. admin Post author

      ತುಂಬಾ ತಡವಾಗಿ ಪ್ರತಿಕ್ರಿಯೆ ನೀಡ್ತಿರುವುದಕ್ಕೆ ಕ್ಷಮೆ ಇರ್ಲಿ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಸಹಕಾರ ಹೀಗೆ ಇರ್ಲಿ. ನಮಸ್ಕಾರ್..

      Reply

Leave a Reply

Your email address will not be published. Required fields are marked *

error: Content is protected !!