ಡಾ.ಪಾವಟೆ ಅನ್ನೋ ಶಿಕ್ಷಣ ಕ್ಷೇತ್ರದ ಪರ್ವತ

891

ಶಿಕ್ಷಣ ತಜ್ಞ, ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ ಅವರ ಜನ್ಮ ದಿನಾಚರಣೆಯ(02-08-2021) ನಿಮಿತ್ತ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಭಾರ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಅವರು ಬರೆದ ಕಿರು ಲೇಖನ.

ಒಂದು ಕ್ಷೇತ್ರದಲ್ಲಿ ಸಾಧಿಸಬೇಕಾದುದೆಲ್ಲವನ್ನೂ ಸಾಧಿಸಿ, ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಲ್ಲಿ ದಕ್ಷತೆಯನ್ನು ತೋರಿ, ಯಶಸ್ಸುಗಳಿಸಿದ ಕೆಲವೇ ಮಹತ್ವದ ವ್ಯಕ್ತಿಗಳಲ್ಲಿ ಪದ್ಮಭೂಷಣ ಡಾ.ಡಿ.ಸಿಪಾವಟೆ ಅವರು ಒಬ್ಬರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಎಂಬ ಗ್ರಾಮದಲ್ಲಿ ಆಗಸ್ಟ್ 2, 1899ರಂದು ಚಿಂತಪ್ಪ ಮತ್ತು ಶಾಂತವೀರಮ್ಮ ಎಂಬ ಆದರ್ಶ ದಂಪತಿಗಳ ಉದರದಲ್ಲಿ ಜನಿಸಿದ ಡಾ.ಡಿ.ಸಿ.ಪಾವಟೆ ಅವರು, ಒಂದುವರೆ ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪಾಲನೆ-ಪೋಷಣೆಯಲ್ಲಿಯೇ ಬೆಳೆದು ದೊಡ್ಡವರಾದರು. ಮಮದಾಪುರ, ಗೋಕಾಕ ಮತ್ತು ರಬಕವಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು, ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಉಚ್ಛ ಶಿಕ್ಷಣವನ್ನು ಪೂರೈಸಿದರು. ಮುಂದೆ 1924-25ರ ಅವಧಿಯಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಕೈಗೊಂಡು, ಗಣಿತಶಾಸ್ತ್ರದಲ್ಲಿನ ಸಾಧನೆಗಾಗಿ ರ‍್ಯಾಂಗ್ಲರ್ ಪದವಿ ಪಡೆದು ನಾಡಿಗೆ ಕೀರ್ತಿ ತಂದರು. ಸತತ ಪ್ರಯತ್ನ, ಶ್ರದ್ಧೆ ಮತ್ತು ಜಾಣ್ಮೆಯಿಂದ ಅಧ್ಯಯನ ಮಾಡಿದರೆ ಎಂಥ ಪದವಿಯನ್ನಾದರೂ ಪಡೆಯಬಹುದು ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಪಾವಟೆ ಅವರು ಅನೇಕ ಮಿತ್ರರನ್ನು ಸಂಪಾದಿಸಿಕೊಂಡರಲ್ಲದೆ, ಛಲಬಿಡದ ತ್ರಿವಿಕ್ರಮನಂತೆ ಫ್ರಾನ್ಸ್ ದೇಶಕ್ಕೆ ಹೋಗಿ ಫ್ರೆಂಚ್ ಭಾಷೆಯನ್ನು ಕಲಿತು ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಂಡರು.

ರ‍್ಯಾಂಗ್ಲರ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೇಲೆ 15ನೇ ಜುಲೈ 1928ರಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಪ್ರೊಫೆಸರಾಗಿ ಸೇವೆ ಪ್ರಾರಂಭಿಸಿ, ಅಲ್ಲಿದ್ದ ಒಂದುವರೆ ವರ್ಷದ ಅವಧಿಯಲ್ಲಿಯೇ ‘ವ್ಯವಹಾರ ಜ್ಞಾನವುಳ್ಳ ಗಣಿತ ಪ್ರಾಧ್ಯಾಪಕ ಪಾವಟೆ ಎಂಬ ಖ್ಯಾತಿ ಪಡೆದರು. ಮುಂದೆ ಶಿಕ್ಷಣಾಧಿಕಾರಿಯಾಗಿ, ಡೆಪ್ಯೂಟಿ ಡೈರೆಕ್ಟರಾಗಿ, ಮುಂಬೈ ಪ್ರಾಂತದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆಸಲ್ಲಿಸಿದರು. ಈ ಅವಧಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಅನೇಕ ಯೋಜನೆಗಳನ್ನು ಕೈಕೊಂಡು ಅವು ಕಾರ್ಯರೂಪಕ್ಕೆ ಬರುವಲ್ಲಿ ಹಗಲಿರುಳು ಶ್ರಮಿಸಿದರು. ಹಿಂದುಳಿದ ಪ್ರದೇಶ ಮತ್ತು ಜನಾಂಗಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ ಡಾ.ಪಾವಟೆಯವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಜಾರಿಯಲ್ಲಿ ತಂದು, ಉತ್ತಮ ಚಟುವಟಿಕೆಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಲು ಕಾರಣರಾದರು. ಕಾಲೇಜು ಶಿಕ್ಷಣದಲ್ಲಿ ಅಧ್ಯಯನ ಅಧ್ಯಾಪನದೊಂದಿಗೆ ಸಂಶೋಧನೆಗೂ ಮಹತ್ವ ಕಲ್ಪಿಸಿದರು. ಶಿಕ್ಷಕರಿಗೆ ಬಡ್ತಿ ನೀಡುವಾಗ ಕೇವಲ ಅವರ ಸೇವೆಯನ್ನಷ್ಟೇ ಪರಿಗಣಿಸದೆ, ಅವರ ಕಾರ್ಯಚಟುವಟಿಕೆ, ಗ್ರಂಥ ರಚನೆ, ಸಂಶೋಧನ ಬರಹ, ಲೇಖನಗಳನ್ನು ಗಮನಿಸಬೇಕೆಂದು ಸಲಹೆ ನೀಡಿದರು. ಎಂದಿಗೂ ಯಾರೊಂದಿಗೂ ರಾಜಿಮಾಡಿಕೊಳ್ಳದ ಸ್ವಭಾವದವರಾಗಿದ್ದ ಡಾ.ಪಾವಟೆ ಅವರು ‘ಮನುಷ್ಯನಿಗೆ ಅನುಕೂಲತೆಗಿಂತ ಆತ್ಮಗೌರವ ಹೆಚ್ಚೆಂದು ಪರಿಭಾವಿಸಿದ್ದರು.

18ನೇ ಆಗಸ್ಟ್ 1954ರಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಅಲಂಕರಿಸಿ, 1967ರ ವರೆಗೆ ಅಂದರೆ ಸುಮಾರು ಹದಿಮೂರು ವರ್ಷ ವಿಶ್ವವಿದ್ಯಾಲಯವನ್ನು ಮುನ್ನಡೆಸಿದರು. ತಮ್ಮ ದೂರದೃಷ್ಟಿ, ಪರಿಶ್ರಮ, ಸಮರ್ಥ ಆಡಳಿತ ನಿರ್ವಹಣೆ ಇವೆಲ್ಲ ಗುಣಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭವ್ಯವಾದ, ವಿಶಾಲವಾದ, ಸುಂದರವಾದ ಕಟ್ಟಡವನ್ನು ನಿರ್ಮಿಸಿದರು. ಜೊತೆಗೆ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞರನ್ನು, ವಿಜ್ಞಾನಿಗಳನ್ನು ಕವಿ, ಸಾಹಿತಿಗಳನ್ನು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಆಯ್ಕೆ ಮಾಡುವುದರ ಮೂಲಕ ಶೈಕ್ಷಣಿಕ ದೃಢತೆಯನ್ನು ತಂದುಕೊಟ್ಟರು.

ಡಾ.ಪಾವಟೆ ಅವರಿಗೆ 60 ವರ್ಷ ತುಂಬಿದಾಗ, ಅವರ ಹುಟ್ಟು ಹಬ್ಬ ಆಚರಿಸಲು ನಾಡಿನ ವಿವಿಧ ಪ್ರದೇಶಗಳಿಂದ ಜನರು ಆಗಮಿಸಿ ಶುಭಕೋರಿದರಲ್ಲದೆ, ರಾಷ್ಟ್ರಿಯ-ಅಂತರಾಷ್ಟ್ರಗಳಿಂದ ಅಭಿನಂದನೆಯ ಮಹಾಪೂರ ಹರಿದು ಬಂತು. ಕುಲಪತಿಗಳ ಅವಧಿ ಇನ್ನೂ ಎರಡು ವರ್ಷ ಇರುವಾಗಲೇ 1967ರಲ್ಲಿ ಪಂಜಾಬ್ ರಾಜ್ಯಪಾಲರಾಗಲು ಆಹ್ವಾನಬಂತು. ಬಂದ ಆಹ್ವಾನವನ್ನು ಬೇಗ ಒಪ್ಪಿಕೊಳ್ಳದೆ, ಪೂರ್ವಾಪರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಂಡು ಅಧಿಕಾರ ಸ್ವೀಕರಿಸಿ ರಾಜ್ಯದ ಆಡಳಿತವನ್ನು ಅನೇಕ ಸಮಸ್ಯೆಗಳ ನಡುವೆಯೂ ಸುಸೂತ್ರವಾಗಿ ನಡೆಯಿಸಿಕೊಂಡು ಹೋದರು. ಮುಂದೆ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿ, ಅನೇಕ ರಾಷ್ಟ್ರಿಯ ಮಟ್ಟದ ಸಂಸ್ಥೆಗಳಲ್ಲಿ ಸಹ ಶ್ರದ್ಧೆಯಿಂದ ದುಡಿದರು. ತಮ್ಮ ಇಡೀ ಬದುಕಿನ ಅನುಭವದ ಸಾರವನ್ನೆಲ್ಲ ಎರಡು ಪ್ರತ್ಯೇಕ ಸಂಪುಟಗಳಲ್ಲಿ ಹೊರತಂದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಲ್ಲಿ ಅನೇಕ ಉಪನ್ಯಾಸ ನೀಡಿ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಧ್ವನಿ ಎತ್ತಿದರು.

ಮಾನವೀಯ ಸ್ವಭಾವದ ಡಾ.ಪಾವಟೆಯವರು ‘ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ’ ಎಂದೇ ಹೆಸರಾಗಿ, ಈ ಸಂಸ್ಥೆಯ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ಪಡೆಯಲು ಕಾರಣರಾದರು. ಈ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಹೆಸರಿನ ಜೊತೆಗೆ ಡಾ.ಪಾವಟೆಯವರ ಹೆಸರು ಚಿರಸ್ಥಾಯಿ. ರಾಷ್ಟ್ರಿಯ ಹಾಗೂ ಅಂತರಾಷ್ಟ್ರಿಯ ಸನ್ಮಾನಗಳನ್ನು ಪಡೆದು, ಶ್ರೇಷ್ಠ ಶಿಕ್ಷಣ ತಜ್ಞರೆಂದು ಕರೆಯಿಸಿಕೊಂಡು ಖ್ಯಾತನಾಮರಾದರು. ಇವರ ಅಪೂರ್ವ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ 1967ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ವಿದ್ವತ್ತು ಹಾಗೂ ಶ್ರೇಷ್ಠ ಗುಣಗಳ ಸಂಗಮವೆನಿಸಿದ್ದ ಡಾ.ಪಾವಟೆ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೀರ್ತಿ, ನೆನಪು, ಆದರ್ಶಗಳು ನಮ್ಮೆದುರಿವೆ. ಅವುಗಳನ್ನು ಸ್ಮರಿಸಿ ಅವರು ತೋರಿದ ದಾರಿಯಲ್ಲಿ ಮುನ್ನಡೆಯುವುದೇ ಅವರಿಗೆ ತೋರುವ ಗೌರವವಾಗಿದೆ.




Leave a Reply

Your email address will not be published. Required fields are marked *

error: Content is protected !!