ಮಠಗಳಿಗೆ ಕೋಟ್ಯಾಂತರ ರೂಪಾಯಿ: ಹೋದ ವರ್ಷ ಬಿದ್ದ ಮನೆಗಳಿಗಿಲ್ಲ ನಯಾಪೈಸೆ!

761

ಪ್ರಜಾಸ್ತ್ರ ವಿಶೇಷ ಸ್ಟೋರಿ

ಧಾರವಾಡ: ರಾಜ್ಯದಲ್ಲಿ ಕರೋನಾ ಲಾಕ್ ಡೌನ್ ನಿಂದ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನಲಾಗ್ತಿದೆ. ಹೀಗಾಗಿ ಅದೆಷ್ಟೋ ಅನುದಾನಗಳನ್ನ ಕಡಿತ ಮಾಡಲಾಗಿದೆ. ಇತ್ತೀಚೆಗಷ್ಟೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಗರಾಭಿವೃದ್ಧಿಗಾಗಿ ಹೆಚ್ಡಿಕೆ ಸಿಎಂ ಆಗಿದ್ದಾಗ ಕೊಟ್ಟ ಅನುದಾನವನ್ನ ಸಿಎಂ ಬಿಎಸ್ವೈ ವಾಪಸ್ ಪಡೆದಿದ್ದಾರೆ ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.

ಕಳೆದ ವರ್ಷ ಪ್ರವಾಹದಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ರು. ಅದರಲ್ಲೂ ಉತ್ತರ ಕರ್ನಾಟಕ ಜನರ ಬವಣೆ ಹೇಳತೀರದು. ಮನೆ ಬಿದ್ದವರಿಗೆ, ಜಮೀನು ಹಾಳಾದವರಿಗೆ ಸರ್ವೇ ಮಾಡಿ ಸೂಕ್ತ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತು. ಇದೀಗ ಮತ್ತೆ ನೆರೆ ಆತಂಕ ಎದುರಾಗಿದೆ. ಆದ್ರೆ, ಇಂದಿಗೂ ಮನೆ ಕಳೆದುಕೊಂಡ ಅದೆಷ್ಟೋ ಕುಟುಂಬಗಳಿಗೆ ಪರಿಹಾರವನ್ನೇ ತಲುಪಿಸಿಲ್ಲ. ಹೀಗಿರುವಾಗ ಮುಜರಾಯಿ ಇಲಾಖೆ ಸಚಿವರು 39 ಮಠಗಳಿಗೆ ತಲಾ 1 ಕೋಟಿಯಂತೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದು, ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಪಿಎಂ ಕಚೇರಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಡಿಸಿ ಕಚೇರಿಯ ಪತ್ರ

ಇಲ್ನೋಡಿ ಕಳೆದ ಪ್ರವಾಹದಲ್ಲಿ ಧಾರವಾಡ ಜಿಲ್ಲೆ ಯಾದವಾಡ ಗ್ರಾಮದ ಪಾರ್ವತೆವ್ವ ಪಿ ದಿಂಡಲಕೊಪ್ಪ ಎಂಬುವರ ಮನೆ ಪರಿಸ್ಥಿತಿ. ಇವರು ಸಲ್ಲಿಸಿದ ಅರ್ಜಿಯಲ್ಲಿ ಶೇಕಡ 16ರಷ್ಟು ಮನೆ ಹಾಳಾಗಿದೆ ಎಂದು ಹೇಳಲಾಗಿದೆ. ಆದ್ರೆ, ಇದುವರೆಗೂ ಪರಿಹಾರ ಬಂದಿಲ್ಲ. ಗ್ರಾಮ ಪಂಚಾಯ್ತಿಯಿಂದ ಹಿಡಿದು ಪಿಎಂ ಕಚೇರಿವರೆಗೂ ಪತ್ರ ಬರೆಯಲಾಗಿದೆ. ಆದ್ರೂ ಪರಿಹಾರ ತಲುಪಿಲ್ಲ.

ಹೋದ ವರ್ಷ ಉಂಟಾದ ಪ್ರವಾಹದಿಂದ ನಮ್ಮ ದೊಡ್ಡಮ್ಮನ ಮನೆ ಹಾಳಾಗಿದೆ. ಈ ಬಗ್ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನ ಭೇಟಿಯಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ಪಿಎಂ ಕಚೇರಿಗೂ ಪತ್ರ ಬರೆಯಲಾಯ್ತು. ಬಳಿಕ ಡಿಸಿ ಕಚೇರಿಯಿಂದ ಪತ್ರ ಬಂದು ತಿಂಗಳು ಮೇಲಾಗಿದೆ. ಪರಿಹಾರ ಮಾತ್ರ ಸಿಕ್ಕಿಲ್ಲ.

ವೀರೇಶ ಅಡಕಿ, ಸಂತ್ರಸ್ತೆ ಪಾರ್ವತೆವ್ವ ಸಂಬಂಧಿ

ಪ್ರವಾಹದಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಕರೋನಾ ಹಾವಳಿ, ಲಾಕ್ ಡೌನ್ ಸಾಮಾನ್ಯ ಜನರ ಬದುಕು ಕಸೆದುಕೊಳ್ತು. ಇಂದಿಗೂ ಸಹ ಜನರು ಒದ್ದಾಡ್ತಿದ್ದಾರೆ. ಅವರಿಗೆ ಸರಿಯಾಗಿ ಪರಿಹಾರ ಕೊಡುವುದು ಬಿಟ್ಟು, ಇಂಥಾ ಪರಿಸ್ಥಿತಿಯಲ್ಲಿಯೂ ಮಠಗಳಿಗೆ ದುಡ್ಡು ಕೊಡಲು ಹೊರಟ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಖಜಾನೆಯಲ್ಲಿ ಹಣವಿಲ್ಲವೆಂದು ಸಿಎಂ ಕೋವಿಡ್ ಪರಿಹಾರ ನಿಧಿ ಸ್ಥಾಪಿಸಿ ದಾನಿಗಳಿಂದ ಹಣ ಪಡೆದಿದ್ದು ಮಠಗಳಿಗೆ ಕೊಡುವುದಕ್ಕಾ? ಈ ಹಿಂದಿನ ಸರ್ಕಾರ ನೀಡಿದ್ದ 60 ಕೋಟಿಯನ್ನ ಸಿಎಂ ದೇವಸ್ಥಾನಗಳಿಗೆ ಮರು ಹಂಚಿಕೆ ಮಾಡಿದ್ದಾರೆ. ಈಗ ಮತ್ತೆ ಮಠಗಳಿಗೆ 39 ಕೋಟಿಯಂತೆ. ಸರ್ಕಾರ ಕೂಡಲೇ ಇದನ್ನ ನಿಲ್ಲಿಸಿ, ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳಲ್ಲಿ ಯಾರಿಗೆಲ್ಲ ಪರಿಹಾರ ಸಿಕ್ಕಿಲ್ಲವೋ ಅವರಿಗೆಲ್ಲ ಕೂಡಲೇ ಪರಿಹಾರ ನೀಡಬೇಕು. ಈ ಬಗ್ಗೆ ವಿರೋಧ ಪಕ್ಷ ಧ್ವನಿ ಎತ್ತುವ ಮೂಲಕ ಸರ್ಕಾರದ ಕಿವಿ ಹಿಂಡಬೇಕಿದೆ.




Leave a Reply

Your email address will not be published. Required fields are marked *

error: Content is protected !!