ಅಲೆದಾಟದಲ್ಲಿ ಚದುರಿಹೋದ ಕನಸುಗಳು…

528

ಪ್ರಜಾಸ್ತ್ರ ವಿಶೇಷ ವರದಿ:

ಕವಿಯ ಕೆಲ ಸಾಲುಗಳು ಹೀಗಿವೆ..

ನನಗೆ ಅರ್ಥವಾಗದ

ನನ್ನ ಬೇಕುಗಳು,

ಕೂಡುವ ಕಳೆಯುವ

ಗುಣಿಸಿ ಎಣಿಸುವ

ಗೊತ್ತಿಲ್ಲದ ಗುರಿಯಿಲ್ಲ

ಕೊನೆ ಕಾಣದ ಅಲೆದಾಟದಲ್ಲಿ

ಕಳೆದು ಹೋಗುತಿದೆ ಬದುಕು..

ಈ ಸಾಲುಗಳು ಬಹುತೇಕರ ಬದುಕಿನ ಸಾಲುಗಳೇ ಆಗಿವೆ. ಈ ಬದುಕನ್ನ ಹಸನಾಗಿಸಲು ಪ್ರತಿಯೊಬ್ಬರು ಅಲೆದಾಟ ಮಾಡ್ತಾರೆ. ಇದೊಂದು ರೀತಿ ಕೊನೆಯಿಲ್ಲದ ಪಯಣ. ಆದ್ರೆ, ಕೆಲವರ ಜೀವನವೇ ಅಲೆದಾಟ. ಅದುವೆ ಅವರ ಹೊಟ್ಟೆಪಾಡಿನ ಕಸಬು. ನೆಲೆಯಿಲ್ಲದ, ಸೂರಿಲ್ಲದ ಜಿಂದಗಿ. ಇಂಥಾ ಅದೆಷ್ಟೋ ಅಲೆಮಾರಿ ಜನರಲ್ಲಿ ಸಿಂದಗಿ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಈ ಕುಟುಂಬಗಳು ಸಹ ಸೇರಿಕೊಂಡಿವೆ.

ಜಾಹೀರಾತು

ಪಟ್ಟಣದ ಬಸ್ ಡಿಪೋ ಹತ್ತಿರದ ಖಾಲಿ ಜಾಗದಲ್ಲಿ ಏಳೆಂಟು ಕುಟುಂಬಗಳು ಜೋಪಡಿ ಹಾಕಿಕೊಂಡಿರುವುದು ಇತ್ತ ಕಡೆ ಹೋಗಿ ಬರುವವರಿಗೆಲ್ಲ ಕಾಣಿಸುತ್ತೆ. ಇವರನ್ನ ಮಾತ್ನಾಡಿಸಿದಾಗ ಅವರ ಸಿಕ್ಕುಗಟ್ಟಿದ ಬದುಕಿನ ಎಳೆಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತೆ. ಕಣ್ತುಂಬ ಕನಸುಗಳನ್ನ ಹೊತ್ತಿಕೊಂಡಿರುವ ಇವರುಗಳು ದೂರದ ಆಂಧ್ರ, ಮಹಾರಾಷ್ಟ್ರ ಹಾಗೂ ನಮ್ಮ ಕೊಪ್ಪಳ ಮೂಲದವರು. ಇವರಲ್ಲಿ ಕೆಲವರು ಎಳೆನೀರಿನ ಗಿಡಗಳಿಗೆ ಔಷಧಿ ಹಾಗೂ ಇಂಜಿಕ್ಷನ್ ಮಾಡ್ತಾರೆ. ಕೆಲವರು ರಾಸುಗಳ ಕೊಂಬು ಕೆತ್ತುತ್ತಾರೆ. ಇನ್ನು ಕೆಲವರು ಹೆಳವ(ಕುಟುಂಬದ ತಲೆಮಾರಿನವರ ಮಾಹಿತಿ ನೀಡುವವರು) ಸಮಾಜದವರು.

ಇವರನ್ನ ಮಾತ್ನಾಡಿಸಿಕೊಂಡು ಹೋದಂತೆ ಹಲವು ವಿಚಾರಗಳು ತಿಳಿದು ಬರುತ್ತವೆ. ನಾವು ಆಂಧ್ರದವರು. ಕರ್ನಾಟಕದ ಅನೇಕ ಕಡೆ ಎಳೆನೀರಿನ ಗಿಡಗಳಿಗೆ ಔಷಧಿ ಹಾಗೂ ಇಂಜಿಕ್ಷನ್ ಮಾಡಿಕೊಂಡು ತಿರುಗುತ್ತೇವೆ. ನಮ್ಮ ಕೆಲ ಮಕ್ಕಳು ಊರಲ್ಲಿದ್ದಾರೆ. ಸಣ್ಣಪುಟ್ಟ ಮಕ್ಕಳು ನಮ್ಮ ಜೊತೆ ಇದ್ದಾರೆ. ನಮ್ಮಲ್ಲಿಯೂ ಕಲಿತವರು ಇದ್ದಾರೆ ಸರ್. ಆದ್ರೆ, ನೌಕರಿ ಕೊಡಲು ಲಕ್ಷ ಲಕ್ಷ ಕೇಳ್ತಾರೆ. ನಾವು ಎಲ್ಲಿಂದ ತಂದು ಕೊಡುವುದು ಹೇಳಿ ಅಂತಾ ತಮ್ಮ ನೋವು ಹಂಚಿಕೊಳ್ತಾರೆ ಮೆಕ್ಕಲ್ ಮೋಷಾ ಎಂಬುವರು.

ಇವರೆಲ್ಲ ತಳಸಮುದಾಯದವರು. ಇವರಲ್ಲಿಯೂ ಪದವಿವರೆಗೂ ವಿದ್ಯಾಭ್ಯಾಸ ಮುಗಿಸಿದವರಿದ್ದಾರಂತೆ. ಇನ್ನು ಕೆಲವರು ಸರಿಯಾಗಿ ಶಾಲೆಗೆ ಹೋಗಲು ಆಗದೆ, ಹೆತ್ತವರ ಜೊತೆ ಹೀಗೆ ಊರಿಂದ ಊರಿಗೆ ಅಲೆಯುತ್ತಾ ಅವರಿಗೆ ಹೆಗಲು ನೀಡ್ತಿದ್ದಾರೆ. ಒಂದೊಂದು ಜೋಪಡಿಯಲ್ಲಿ ಇಬ್ಬರು ಮೂವರು ಇರ್ತಾರೆ. ಮಳೆ, ಗಾಳಿ, ಚಳಿ ಅನ್ನೋದು ಲೆಕ್ಕಕ್ಕೆ ಬರುವುದಿಲ್ಲ. ಹೆಣ್ಮಕ್ಕಳು ಸ್ನಾನ ಮಾಡುವುದಕ್ಕೂ ಕಷ್ಟ. ಏನ್ ಮಾಡೋದು, ಎಲ್ಲವನ್ನ ಸಹಿಸಿಕೊಂಡು ಹೋಗಬೇಕು ಅಂತಾರೆ ಸಿಪಾರಾ ಅನ್ನೋ ಮಹಿಳೆ.

ಜಾಹೀರಾತು

ಹೀಗೆ ಅಲೆದಾಟದ ಜೀವನದಲ್ಲಿ ದಿನಕ್ಕೆ ಒಮ್ಮೊಮ್ಮೆ ಸಾವಿರಾರು ರೂಪಾಯಿ ವ್ಯಾಪಾರ ಮಾಡಿದ್ರೂ ಅದೆಲ್ಲವೂ ಊಟ ಉಪಚಾರ, ಬಟ್ಟೆ ಬರೆ, ಆಸ್ಪತ್ರೆ, ಸುತ್ತಾಟಕ್ಕೆ ಖರ್ಚಾಗಿ ಹೋಗುತ್ತೆ. ಹೀಗಾಗಿ ಎಲ್ಲರಂತೆ ಒಂದ್ಕಡೆ ಬದುಕು ಕಟ್ಟಿಕೊಂಡು ಬದುಕಿನ ಬಂಡಿಯನ್ನ ಸಾಗಿಸಲು ಆಗ್ತಿಲ್ಲ. ಬರೀ ಅಲೆದಾಟ. ಜೀವನಪೂರ್ತಿ ಅಲೆದಾಟ. ಈ ಅಲೆದಾಟದ ಬದುಕಿನಲ್ಲಿ ಕನಸುಗಳೆಲ್ಲವೂ ಚದುರಿಹೋಗ್ತಿವೆ. ನಮ್ಮನ್ನಾಳುವ ಸರ್ಕಾರಗಳು ಇವರ ಕನಸುಗಳನ್ನ ಒಟ್ಟುಗೂಡಿಸಿ ಹಸನಾದ ಬಾಳು ಪೋಣಿಸಬೇಕಿದೆ.
Leave a Reply

Your email address will not be published. Required fields are marked *

error: Content is protected !!