ಅದ್ಧೂರಿಯಾಗಿ ತೆರೆ ಕಂಡ ಪ್ರಜಾಸ್ತ್ರ ಬೇಸಿಗೆ ಕಲಾ ಮೇಳ

356

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪ್ರಜಾಸ್ತ್ರ ವೆಬ್ ಪತ್ರಿಕೆ ವತಿಯಿಂದ ಪಟ್ಟಣದ ಗುರುದೇವ ಆಶ್ರಮದಲ್ಲಿ ಮೇ 1ರಿಂದ 20ರ ವರೆಗೂ ಬೇಸಿಗೆ ಕಲಾ ಮೇಳ ನಡೆಸಿತು. ಈ ವೇಳೆ ಶಿಬಿರದ ಸಂಯೋಜಕ ನಾಗೇಶ ತಳವಾರ, ಸಂಚಾಲಕ ಲಕ್ಷ್ಮಿರಾಮ್, ಸಹ ಸಂಚಾಲಕ ಲಾಲ್ ಸಾಬ್ ನದಾಫ್, ಪುಟ್ಟಸ್ವಾಮಿ ಅವರು, ನಾಟಕ, ಡ್ಯಾನ್ಸ್, ಮೈಮ್, ಮಾರಿಕುಣಿತು, ರೂಪಕಗಳನ್ನು ಹೇಳಿಕೊಟ್ಟರು.

ಈ ಬೇಸಿಗೆ ಕಲಾ ಮೇಳದ ಸಮಾರೋಪ ಸಮಾರಂಭ ಮೇ 21 ಶನಿವಾರ ಸಂಜೆ ಶಾಂತೇಶ್ವರ ಮಠದಲ್ಲಿ ಅದ್ಧೂರಿಯಾಗಿ ನಡೆಯಿತು. ಮೊದಲಿಗೆ ಮಕ್ಕಳು ಮೈಸೂರು, ಚಾಮರಾಜನಗರ ಭಾಗದ ಜಾನಪದ ಕಲೆಯಾದ ಮಾರಿಕುಣಿತವನ್ನು ಪ್ರದರ್ಶನ ನೀಡಿದರು. ನಂತರ ಬಿದಿರು ಅನ್ನೋ ರೂಪಕ ಪ್ರಸ್ತುತ ಪಡಿಸಿದರು.

ಕಣ್ಣು ಹೊಡೆಯಾಕ ಅನ್ನೋ ಹಾಡಿಗೆ ಹೆಣ್ಮಕ್ಕಳು, ಪವರಿಸಂ ಅನ್ನೋ ಹಾಡಿಗೆ ಗಂಡ್ಮಕ್ಕಳು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದರು. ಇದರ ಜೊತೆಗೆ ಬಹುತ್ವ ಭಾರತ ಅನ್ನೋ ವಿಚಾರದಡಿಯಲ್ಲಿ ಮೈಮ್ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಗಣೇಶ ವಿಶ್ವಕರ್ಮ ಹಾಡು ಹೇಳುವ ಮೂಲಕ ರಂಜಿಸಿದ.

ಕೊನೆಯದಾಗಿ ಶಿಬಿರದ ಎಲ್ಲ ಮಕ್ಕಳು ಕೂಡಿಕೊಂಡು ನಟಿಸಿದ ಪುಷ್ಪೋಲಂಘನ ಅನ್ನೋ ನಾಟಕ ಮಾಡಲಾಯಿತು. ಇದರ ರಚನೆ ಹಾಗೂ ನಿರ್ದೇಶನ ರಂಗಭೂಮಿ ನಿರ್ದೇಶಕ ಲಾಲ್ ಸಾಬ್ ನಾದಫ್ ಅವರದ್ದಾಗಿದೆ. ಇದಕ್ಕೆ ಸಂಗೀತ ನೀಡಿದವರು ಖ್ಯಾತ ಗಾಯಕ ಲಕ್ಷ್ಮಿರಾಮ್ ಅವರು. ಸುಮಾರು 3-4 ಗಂಟೆಗಳ ಕಾಲ ಮಕ್ಕಳ ಪ್ರತಿಭೆ ಕಂಡು ಪೋಷಕರು, ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.

ಶ್ರಾವಣಿ ಹಿರೋಳ್ಳಿ, ಸಂಜನಾ ಬೀರಗೊಂಡ, ಸಂಪದ ಹದ್ನೂರ, ಸ್ವಾತಿ ರೆಬಿನಾಳ, ರೇಣುಕಾ ತಳವಾರ, ಸೌಮ್ಯ ಯಳಮೇಲಿ, ಸೌರವಿ ಮಲ್ಲೇದ, ಉನ್ನತಿ ಹಿರೇಮಠ, ನವ್ಯಾ ಶಿರಾಳಶೆಟ್ಟಿ, ಸಹನಾ ಬಳುಂಡಗಿ, ಸೌಜನ್ಯ ಬಳುಂಡಗಿ, ಅಚ್ಯುತ ಹೂಗಾರ, ಗಣೇಶ ವಿಶ್ವಕರ್ಮ, ಅಥರ್ವ ಜೋಶಿ, ಸಂದೀಪ ಬೀರಗೊಂಡ, ಹರ್ಷವರ್ಧನ ಮಲ್ಲೇದ, ಸನ್ನತ ಹಿರೇಕುರುಬರ, ಶಶಾಂಕ ಹಿರೋಳ್ಳಿ, ಶರಣು ಶಹಾಪೂರ, ಶಿವಾನಂದ ಸೋಮಾಪುರ ಸೇರಿದಂತೆ ಹಲವು ಮಕ್ಕಳ ವಿವಿಧ ಪ್ರದರ್ಶನ ನೀಡಿ ನೋಡುಗರ ಕಣ್ಮನ ಸೆಳೆದರು.

ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಹಾಗೂ ಶಾಂತಗಂಗಾಧರ ಮಹಾಸ್ವಾಮಿಗಳು ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. ನೂರಾರು ಜನರು ಕಾರ್ಯಕ್ರಮ ವೀಕ್ಷಿಸಿ ಸಂತಸ ಪಟ್ಟರು.




Leave a Reply

Your email address will not be published. Required fields are marked *

error: Content is protected !!