ರಾಷ್ಟ್ರಪತಿ ಹುದ್ದೆ ಮತ್ತು ರಬ್ಬರ್ ಸ್ಟ್ಯಾಂಪ್ ಕಥೆಗಳು!

289

ಪ್ರಜಾಸ್ತ್ರ ಡೆಸ್ಕ್

ರಾಷ್ಟ್ರಪತಿ ಚುನಾವಣೆಗೆ ತಯಾರಿ ಭರ್ಜರಿಯಾಗಿದೆ. ಎನ್ ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ಯುಪಿಎ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಜುಲೈ 18 ಮತದಾನ ನಡೆಯಲಿದೆ.

ರಾಷ್ಟ್ರಪತಿ ಹುದ್ದೆ ಎಂದಾಕ್ಷಣ ಬಹುತೇಕರು ಅದೊಂದು ರಬ್ಬರ್ ಸ್ಟ್ಯಾಂಪ್ ಹುದ್ದೆ ಎನ್ನುತ್ತಾರೆ. ದೇಶದ ಅತ್ಯುನ್ನತ ಸ್ಥಾನ, ದೇಶದ ಮೊದಲ ಪ್ರಜೆ ಎಂದು ಹೇಳಿದರು. ರಬ್ಬರ್ ಸ್ಟ್ಯಾಂಪ್ ಅನ್ನೋ ಮಾತು ಚಾಲ್ತಿಯಲ್ಲಿದೆ. ಆದರೆ, ಇದನ್ನು ಹಿರಿಯ ಪತ್ರಕರ್ತ ಅಲೋಕ್ ಮೆಹ್ತಾ ಒಪ್ಪುವುದಿಲ್ಲ. ಅದ್ಯಾಕೆ ಅನ್ನೋದು ಮುಂದೆ ನೋಡೋಣ. ಅದಕ್ಕೂ ಮೊದಲು ರಬ್ಬರ್ ಸ್ಟ್ಯಾಂಪ್ ವಿಷಯಕ್ಕೆ ಬರೋಣ.

ಬ್ರಿಟನ್ ರಾಜನಂತೆ ಇದ್ಯಾ ರಾಷ್ಟ್ರಪತಿ ಸ್ಥಾನ?

ಭಾರತದ ರಾಷ್ಟ್ರಪತಿ ಸ್ಥಾನ ಬ್ರಿಟನ್ ರಾಜನಂತೆ ಎಂದು ಹೇಳಲಾಗುತ್ತೆ. ಆದರೆ, ಇದು ಹಾಗಿಲ್ಲ. ಪ್ರಧಾನಿ ಸರ್ಕಾರದ ಮುಖ್ಯಸ್ಥನಾಗಿದ್ದರು, ರಾಜಮನೆತನದ ಆಳ್ವಿಕೆಯಿದೆ. ಆದರೆ, ನಮ್ಮಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯುತ್ತೆ. ಪ್ರಧಾನಿ ಭಾರತ ಸರ್ಕಾರದ ಮುಖ್ಯಸ್ಥರಾದರೆ, ರಾಷ್ಟ್ರಪತಿ ದೇಶದ ಮುಖ್ಯಸ್ಥರಾಗಿರುತ್ತಾರೆ. ಮೂರು ಸೇನಾ ಪಡೆಗಳ ಮುಖ್ಯಸ್ಥರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆದಿಯಾಗಿ ಎಲ್ಲರಕ್ಕಿಂತ ಹೆಚ್ಚಿನ ಸ್ಥಾನ ಮತ್ತು ಇದು ದೇಶದ ಕಟ್ಟಕಡೆಯ ಅತ್ಯುನ್ನತ ಸ್ಥಾನವಾಗಿದೆ. ಇಸ್ರೇಲ್ ಹಾಗೂ ಜರ್ಮನ್ ನಲ್ಲೂ ಇದೆ ಮಾದರಿಯ ಸ್ಥಾನವಿದೆ.

ರಾಜೇಂದ್ರ್ ಪ್ರಸಾದ್

ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟ್ಯಾಂಪ್ ಅನ್ನೋದ್ಯಾಕೆ?

ದೇಶದ ಮೊದಲ ಪ್ರಜೆಯಾದರೂ ರಾಷ್ಟ್ರಪತಿಗಳನ್ನು ರಬ್ಬರ್ ಸ್ಟ್ಯಾಂಪ್ ಎನ್ನಲಾಗುತ್ತೆ. ಯಾಕಂದರೆ, ಅವರು ಸರ್ಕಾರದ ಮುಖ್ಯಸ್ಥರಾಗಿರುವುದಿಲ್ಲ. ಭಾರತ ಸರ್ಕಾರ ರೂಪಿಸುವ ಕಾನೂನುಗಳಿಗೆ ಸಹಿ ಮಾಡುವುದಷ್ಟೇ ಕೆಲಸ. ಸಂಸತ್ ಹಾಗೂ ರಾಜ್ಯಸಭೆಯಲ್ಲಿ ನಿರ್ಣಯಗೊಂಡ ಕಾಯ್ದೆಗಳಿಗೆ ಸಹಿ ಮಾಡುತ್ತಾರೆ. ಅವುಗಳನ್ನು ದೇಶದಲ್ಲಿ ಜಾರಿಗೆ ಬರುವಂತೆ ನೋಡಿಕೊಳ್ಳುತ್ತಾರೆ. ಇದರ ಹೊರತು ಪಡಿಸಿ ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಕ್ಷಮಿಸುವ ಅಧಿಕಾರ ಮಾತ್ರವಿದೆ ಅನ್ನೋದು ರಬ್ಬರ್ ಸ್ಟ್ಯಾಂಪ್ ಪದ ಬಳಕಿಗೆ ಕಾರಣವಾಗಿದೆ. ಹೀಗಾಗಿ ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇರುತ್ತೋ ಆ ಪಕ್ಷದವರೆ ಬಹುತೇಕವಾಗಿ ರಾಷ್ಟ್ರಪತಿಯಾಗುವುದು.

ರಾಷ್ಟ್ರಾಧ್ಯಕ್ಷರು ಸಂಪೂರ್ಣ ರಬ್ಬರ್ ಸ್ಟ್ಯಾಂಪ್ ಅಲ್ಲ!

ಭಾರತದ ಹಿರಿಯ ಪತ್ರಕರ್ತ ಅಲೋಕ್ ಮೆಹ್ತಾ, ಲಂಡನ್ ನ ಇನ್ ಸ್ಟಿಟ್ಯೂಟ್ ಆಫ್ ಕಾಮನ್ ವೆಲ್ತ್ ಸ್ಟಡೀಸ್ ನ ಪ್ರೊ.ಜೇಮ್ಸ್ ಮ್ಯಾನರ್ ಅವರ ಪ್ರಕಾರ ಭಾರತದ ರಾಷ್ಟ್ರಾಧ್ಯಕ್ಷರ ಹುದ್ದೆ ಸಂಪೂರ್ಣ ರಬ್ಬರ್ ಸ್ಟ್ಯಾಂಪ್ ಅಲ್ಲ ಅನ್ನೋದಾಗಿದೆ. ಯಾಕಂದರೆ ಸಚಿವರ ಕಾರ್ಯಕಲಾಪವನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತಾರೆ. ಸಾರ್ವಜನಿಕ ಭಾಷಣಗಳ ಮೂಲಕ ಸರ್ಕಾರದ ತಪ್ಪುಗಳನ್ನು ವಿರೋಧಿಸಬಹುದು. ಚುನಾವಣೆ ನಂತರ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಹೋದರೆ ಸಂಸತ್ತು ವಿಸರ್ಜಿಸಲು ಸೂಚಿಸಿ ಹೊಸ ಚುನಾವಣೆಗೆ ಹೋಗಿ ಎನ್ನಬಹುದು.

ಕೆ.ಆರ್ ನಾರಾಯಣ್

ಭಾರತದ ಮೊದಲ ಪ್ರಧಾನಿ ನೆಹರು ಜೊತೆಗೆ ಮೊದಲ ರಾಷ್ಟ್ರಪತಿ ರಾಜೇಂದ್ರ್ ಪ್ರಸಾದ್ ಭಿನ್ನಾಭಿಪ್ರಾಯ ಹೊಂದಿದ್ದರು. ರಾಜೀವ್ ಗಾಂಧಿ ಜೊತೆಗೆ 7ನೇ ರಾಷ್ಟ್ರಪತಿ ಗಿಯಾನ್ ಜೈಲ್ ಸಿಂಗ್ ಆಕ್ರೋಶದ ಮನೋಭಾವ ಹೊಂದಿದ್ದರು. ದೇಶದ 10ನೇ ರಾಷ್ಟ್ರಪತಿ ಕೆ.ಆರ್ ನಾರಾಯಣ್ ಅವರು, ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಅನ್ನೋ ಪ್ರಸ್ತಾಪ ಬಂದಾಗ ಅದನ್ನು ಹಿಂದಿರುಗಿಸಿ ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ಹೇಳಿದ್ದರು. ಆದರೆ, 1975ರಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರುವ ಪತ್ರಕ್ಕೆ ಸಹಿ ಹಾಕಲು ಮಧ್ಯರಾತ್ರಿ ಫಾರ್ಖೂದ್ದಿನ್ ಅಲಿ ಅಹ್ಮದ್ ಅವರಿಗೆ ಹೇಳಿದರೆ ಸಹಿ ಹಾಕಿದ್ದರು. ಮರುದಿನ ಅವರ ಬಗ್ಗೆ ಪತ್ರಿಕೆಯಲ್ಲಿ ವ್ಯಂಗ್ಯವಾದ ಕಾರ್ಟೂನ್ ಬಂದಿತ್ತು.

ರಾಜೀವ್ ಗಾಂಧಿಗಿಯಾನಿ ಜೈಲ್ ಸಿಂಗ್

ಹೀಗಿದ್ದರೂ ಸಂಸತ್ತು ಅಂಗೀಕರಿಸಿದ ವಿವಾದಾತ್ಮಕ ಅಂಶಗಳನ್ನು ಮರುಪರಿಶೀಲನೆಗೆ ಕಳಿಸುವ ಅಧಿಕರ ಹೊಂದಿದ್ದಾರೆ. ಕಡತಗಳನ್ನು ತಿಂಗಳಾನುಗಟ್ಟಲ್ಲೇ ಅವರ ಬಳಿ ಇಟ್ಟುಕೊಳ್ಳಬಹುದು. ಯಾಕಂದರೆ, ಅವರಿಗೆ ಯಾವುದೇ ಕಾಲಮಿತಿ ಇಲ್ಲ. ಲೋಕಸಭೆ ಅವಧಿ ಮುಗಿಯುವ ಹೊತ್ತಿನಲ್ಲಿ ಸಂಸದರ ಪಿಂಚಣಿ ಹೆಚ್ಚಿಗೆ ಮಾಡುವ ಮಸೂದಿಗೆ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ನಿರಾಕರಿಸಿದರಂತೆ. 1992ರಲ್ಲಿ 9ನೇ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ, ಕಟ್ಟಾ ಕಾಂಗ್ರೆಸ್ಸಿಗರು, ಗಾಂಧಿ ಕುಟುಂಬದ ಆಪ್ತರಾಗಿದ್ದರು. ಹೀಗಿದ್ದರೂ ನರಸಿಂಹ ರಾವ್ ಸರ್ಕಾರದಲ್ಲಿ ಸೆಕ್ಯೂರಿಟಿ ಹಗರಣ ಚರ್ಚೆಗೆ ಬಂದಾಗ ಅಂದಿನ ಹಣಕಾಸು ಸಚಿವ ಡಾ.ಮನಮೋಹನ್ ಸಿಂಗ್ ಅವರ ರಾಜೀನಾಮೆ ಪಡೆಯಲು ರಾವ್ ಗೆ ಸಲಹೆ ನೀಡಿದ್ದರಂತೆ. ನೆಹರು ಕುಟುಂಬದ ಸದಸ್ಯ ಶೀಲಾ ಕೌಲ್ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ಅದಕ್ಕೂ ಪೂರ್ವದಲ್ಲಿ ಸಚಿವರಾಗಿದ್ದಾಗ ವಸತಿ ಹಂಚಿಕೆಯಲ್ಲಿ ಹಗರಣದ ಆರೋಪ ಕೇಳಿ ಬಂದಿತ್ತು. ಅದು ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಿದ್ದರಂತೆ. ಅಲ್ದೇ, 1996ರಲ್ಲಿ ಲೋಕಸಭೆ ಅವಧಿಯ ಕೊನೆಯ ಹಂತದಲ್ಲಿ ರಾವ್ ಸರ್ಕಾರ ಚುನಾವಣೆ ಪ್ರಚಾರದ ಅವಧಿಯನ್ನು 22 ದಿನಗಳ ಬದಲಿಗೆ 14 ದಿನಗಳಿಗೆ ಇಳಿಸುವ ಸಂಬಂಧ ರಾಷ್ಟ್ರಪತಿಗೆ ಶಿಫಾರಸು ಮಾಡಿತ್ತು. ಅದನ್ನು ತಿರಸ್ಕರಿಸಿ ಮುಂದಿನ ಸರ್ಕಾರಕ್ಕೆ ಅದರ ನಿರ್ಧಾರ ಬಿಡಬೇಕು ಎಂದಿದ್ದರಂತೆ.

ಆರ್.ವೆಂಕಟರಾಮನ್
ಶಂಕರ್ ದಯಾಳ್ ಶರ್ಮಾ

ಹೀಗೆ ಭಾರತೀಯ ಪ್ರಜಾಪ್ರಭುತ್ವವು ಭಿನ್ನಾಭಿಪ್ರಾಯ ಹಾಗೂ ಸಮನ್ವಯದ ಸಾಮರ್ಥ್ಯ ಹೊಂದಿದೆ. ಪ್ರಧಾನಿ, ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ, ಸೇನಾ ಮುಖ್ಯಸ್ಥರನ್ನು ನೇಮಿಸಲು, ವಜಾಗೊಳಿಸಲು ಅನಿಯಮಿತ ಅಧಿಕಾರ ರಾಷ್ಟ್ರಪತಿಗಿದೆ. ರಾಜೀವ್ ಗಾಂಧಿಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಲು ಅಂದಿನ ರಾಷ್ಟ್ರಾಧ್ಯಕ್ಷರಾದ ಗಿಯಾನಿ ಜೈಲ್ ಸಿಂಗ್ ಅವರು ತಯಾರಿ ನಡೆಸಿದ್ದರಂತೆ. ಆದರೆ, ಹಲವು ಆಕ್ಷೇಪಗಳ ಹಿನ್ನೆಲೆ ಅದನ್ನು ಅವರು ಮಾಡಲಿಲ್ಲ. ಹೀಗಿದ್ದರೂ ಅವರನ್ನು ರಬ್ಬರ್ ಸ್ಟ್ಯಾಂಪ್ ಎಂದು ಈಗಲೂ ಕರೆಯಲು ಕಾರಣ, ಅವರಿಗೆ ಅಷ್ಟೊಂದು ಅಧಿಕಾರವಿದ್ದರೂ ಅದ್ಯಾವುದನ್ನೂ ಉಪಯೋಗಿಸದೆ ಹೋಗುತ್ತಾರೆ ಅನ್ನೋ ಕಾರಣಕ್ಕೆ.




Leave a Reply

Your email address will not be published. Required fields are marked *

error: Content is protected !!