ದಾಂಡೇಲಿ ಕಾಡಿನಲ್ಲೊಂದು ಶಿವನ ಮಂದಿರ

261

ಪ್ರಜಾಸ್ತ್ರ ವಿಶೇಷ, ಮಾಂತೇಶ ಪಠಾಣಿ

ದಾಂಡೇಲಿ: ಕಾಡು ಸುತ್ತುವವರು, ಚಾರಣ ಮಾಡುವವರಿಗೆ ಈ ಜಾಗ ಇಷ್ಟವಾಗುತ್ತೆ. ದಾಂಡೇಲಿ ಅಂದರೆ ಕಾಡಿನಿಂದ ಕೂಡಿದ ಪ್ರದೇಶ. ಇಂತಹ ಕಾನನದೊಳಗೊಂದು ಐತಿಹಾಸಿಕವಾದ ಶಿವ ಮಂದಿರವಿದೆ. ಅದು ಕಾಣಿಸಿಕೊಂಡಿದ್ದು ಮತ್ತು ಇಂದು ನಿತ್ಯ ಪೂಜೆ ನಡೆಯುತ್ತಿರುವುದರ ಹಿಂದೆ ರೋಚಕವಾದ ಕಥೆಯಿದೆ.

ಕಟ್ಟಿಗೆ ತರಲು ಹೋದವನಿಗೆ ಕಂಡ ಶಿವಲಿಂಗ

ಸುಮಾರು 30 ವರ್ಷಗಳಿಂದ ಅಮೋಘಿ ರೇವಣಸಿದ್ದಪ್ಪ ಮುದರಿಕರ ಎಂಬುವರು ದಾಂಡೇಲಿಯಲ್ಲಿ ಪೇಪರ್ ಮಿಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಒಮ್ಮೆ ಅವರು ಕಟ್ಟಿಗೆ ತರಲು ಇಲ್ಲಿನ ಕಾಡಿನೊಳಗೆ ಬರುತ್ತಾರೆ. ಆಗ ಅವರಿಗೆ ಶಿವಲಿಂಗದ ದರ್ಶನವಾಗುತ್ತೆ. ಅದನ್ನು ಕಂಡು ಅಚ್ಚರಿಯಾಗುತ್ತೆ. ದೇವರೆ ನನಗೆ ಏನಾದರೂ ದಾರಿ ತೋರಿಸುತ್ತೇನೆ ಎಂದು ಶಿವಲಿಂಗವನ್ನು ಪೂಜೆ ಮಾಡುತ್ತಾ ಬರುತ್ತಾರೆ. ನಂತರ ಅವರು ಮುಗುಳಖೋಡದ ಶ್ರೀಗಳನ್ನು ಭೇಟಿಯಾಗಿ ಶಿವಲಿಂಗದ ವಿಚಾರ ಪ್ರಸ್ತಾಪಿಸುತ್ತಾರೆ. ನಿನ್ನ ಸೇವೆಯನ್ನು ಮುಂದುವರೆಸು ಒಳ್ಳೆಯದಾಗುತ್ತೆ ಅಂತಾರೆ. ಅದರಂತೆ ಪ್ರತಿ ಸೋಮವಾರ ವಿಶೇಷ ಪೂಜೆ ಮಾಡಿಕೊಂಡು ಬರುತ್ತಾರೆ.

ಭಕ್ತರ ಕೋರಿಕೆ ಈಡೇರಿಸುವ ನಂಬಿಕೆ

ಕಾಡಿನ ಮಧ್ಯದಲ್ಲಿರುವ ಪುಟ್ಟ ಶಿವಮಂದಿರದ ಸುತ್ತಮುತ್ತ ಕಲ್ಲಿನ ಕತ್ತನೆಯ ಮೂರ್ತಿಗಳು ಸೇರಿ ವಿವಿಧ ಕುರುಹುಗಳು ಕಂಡು ಬಂದಿವೆ. ವರ್ಷಗಳು ಕಳೆದಂತೆ ಜನರಿಗೆ ಇದರ ಬಗ್ಗೆ ತಿಳಿದು ಇಲ್ಲಿಗೆ ಬರಲು ಶುರು ಮಾಡುತ್ತಾರೆ. ಕರೆಂಪ್ಪಪಾಳಿ, ತಾಟಗೂರ, ಆಲೂರ, ದಾಂಡೇಲಿ ಸೇರಿದಂತೆ ಬೇರೆ ಬೇರೆ ಭಾಗದ ಜನರು ಇಲ್ಲಿರುವ ಶಿವನ ದರ್ಶನಕ್ಕೆ ಬರಲು ಪ್ರಾರಂಭಿಸಿದರು.

ಹೀಗೆ ಬರಲು ಶುರು ಮಾಡಿದ ಭಕ್ತರು ತಮ್ಮ ಬೇಡಿಕೆಗಳನ್ನು ಶಿವನ ಎದುರು ಹೇಳಿಕೊಂಡರು. ಅವುಗಳು ಈಡೇರಿದಂತೆ ಭಕ್ತರ ನಂಬಿಕೆ ಹಾಗೂ ಬರುವಿಕೆ ಹೆಚ್ಚಾಯಿತು. ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ಅನ್ನಸಂತರ್ಪಣೆ ಸೇವೆ ಸಹ ನಡೆದಿದೆ. ಶಿವರಾತ್ರಿಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತೆ.

ಇಲ್ಲಿಗೆ ಬರುವುದು ಹೇಗೆ?

ಕಾಡಿನಲ್ಲಿ ಕಾಣಿಸಿಕೊಂಡ ಶಿವಲಿಂಗವನ್ನು ಭಕ್ತರು ಕೂಡಿಕೊಂಡು ಸೋಮೇಶ್ವರ ದೇವಸ್ಥಾನವೆಂದು ಕರೆಯುತ್ತಿದ್ದಾರೆ. ದಾಂಡೇಲಿಯ ಆಲೂರ ಹತ್ತಿರ ಯಲ್ಲಾಲಿಂಗ ಮಠವಿದೆ. ಅದರ ಪಕ್ಕದಲ್ಲೊಂದು ರಸ್ತೆಯಿಂದೆ. ಈ ಮಾರ್ಗವಾಗಿ ಸುಮಾರು 3 ಕಿಲೋ ಮೀಟರ್ ದೂರವಿದೆ. ಇನ್ನು ಕರೆಂಪಪಾಳಿ, ಖ್ಯಾರವಾಡದಿಂದ ಇಲ್ಲಿಗೆ ಬರಹುದು. ಬೈಕ್ ಹಾಗೂ ಕಾರು ತರುವುದಾದರೆ ಕರೆಂಪಪಾಳಿಯಿಂದ ಬರಬೇಕು.

ಹೀಗೆ 30 ವರ್ಷಗಳ ಹಿಂದೆ ಕಟ್ಟಿಗೆ ತರಲು ಹೋದವನ ಕಣ್ಣಿಗೆ ಕಂಡ ಶಿವನ ದೇವಸ್ಥಾನ ಇಂದು ಒಂದು ಹಂತಕ್ಕೆ ಬಂದಿದೆ. ಇಲ್ಲಿ ರಸ್ತೆ ಹಾಗೂ ನೀರಿನ ಸಮಸ್ಯೆಯಿದೆ. ಜನಪ್ರತಿನಿಧಿಗಳು ಅದನ್ನು ಪರಿಹರಿಸಿದರೆ ಭಕ್ತರು ಬರಲು ಇನ್ನಷ್ಟು ಅನುಕೂಲವಾಗುತ್ತೆ ಅನ್ನೋದು ಶಿವನ ಪೂಜೆ ಮಾಡಿಕೊಂಡು ಬರುತ್ತಿರುವ ಅಮೋಘಿ ರೇವಣಸಿದ್ದಪ್ಪ ಮುದರಿಕರ ಅವರ ಮನವಿ.




Leave a Reply

Your email address will not be published. Required fields are marked *

error: Content is protected !!