ಪ್ರಧಾನಿ ಮೋದಿಗೆ 10 ಪ್ರಶ್ನೆಗಳನ್ನು ಕೇಳಿದ ಸಿದ್ದರಾಮಯ್ಯ

117

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಂಡ್ಯ ಹಾಗೂ ಧಾರವಾಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ, ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಚ್ಚುತ್ತಿಲ್ಲ ಯಾಕೆ?

ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ? ಎಂದು ಕೇಳಿದ್ದಾರೆ. ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ ? ಅಂತಾ ಕೇಳಿದ್ದಾರೆ.

ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು ‘ತುಮ್ ಖಾವೋ, ಮುಜೆ ಬಿ ಖಿಲಾವೋ’ ( ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ ಮೋದಿ ಅವರೇ?. ಅಟಲಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮೆರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಿಲ್ಲವೇ ಮೋದಿ ಜೀ?. ವಾಜಪೇಯಿ ನೇತೃತ್ವದಲ್ಲಿ ಇದ್ದಾಗ ಮುಖ್ಯಮಂತ್ರಿ ಯಾಗಿದ್ದ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲಾ? ಈಗ್ಯಾಕೆ ಹೀಗೆ ಅಂತಾ ಕೇಳಿದ್ದಾರೆ.

ಇನ್ನು ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಇದು ಯಾವ ಕಾಲ ಎನ್ನುವ ರೀತಿಯಲ್ಲಿ ಕಟುವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!