ಭಾಷಣ ಮಾಡಬೇಕಾದವನು ಬಾರದ ಲೋಕಕ್ಕೆ…!

683

ಪ್ರಜಾಸ್ತ್ರ ವಿಶೇಷ ವರದಿ

ಬದುಕು ಜಟಕಾ ಬಂಡಿ.. ವಿಧಿ ಅದರ ಸಾಹೇಬ್.. ಮದುವೆಗೋ ಮಸಣಕೋ ಎಂದು ಡಿವಿಜಿ ಅವರು ಒಂದ್ಕಡೆ ಬರೆಯುತ್ತಾರೆ. ಹೌದು, ಈ ಬದುಕಿಗೆ ವಿಧಿ ಸಾಹೇಬ್. ಅವನಾಡುವ ಆಟ ಯಾವಾಗ ಹೇಗಿರುತ್ತೆ ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಒಮ್ಮೊಮ್ಮೆ ಬಹುದೊಡ್ಡ ಹೊಡೆತ ಕೊಟ್ಟು ಬಿಡ್ತಾನೆ. ಅಂತಾ ಹೊಡೆತ ಈ ಬಡ ಕುಟುಂಬಕ್ಕೆ ಬಿದ್ದಿದೆ. ಶ್ರೀಮಂತ ಹಾಗೂ ದೇವಕ್ಕಿಯ ಏಕೈಕ ಪುತ್ರನಾಗಿರುವ ರಾಜಕುಮಾರ ತಳವಾರ ಬೆಳೆಯುವ ಮೊದ್ಲೇ ಜಲ ಸಮಾಧಿಯಾಗಿದ್ದಾನೆ! ಹೆತ್ತ ಒಡಲು ಬರಿದು ಮಾಡಿ ಬೆನ್ನು ಮಾಡಿ ಹೋಗಿದ್ದಾನೆ.

ರಾಜಕುಮಾರ ಶ್ರೀಮಂತ ತಳವಾರ

ಅಷ್ಟಕ್ಕೂ ಇಲ್ಲಿ ಏನಾಗಿದೆ ಅಂತಾ ನೋಡಿದ್ರೆ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿನಲ್ಲಿ ಮೂವರು ಸ್ನೇಹಿತರೊಂದಿಗೆ ಸಿಂದಗಿಯಿಂದ ಏಳೆಂಟು ಕಿಲೋ ಮೀಟರ್ ದೂರದಲ್ಲಿರುವ(ಬಂದಾಳ) ಕ್ಯಾನಲ್ಗೆ 7ನೇ ತರಗತಿ ಓದುವ 13 ವರ್ಷದ ಬಾಲಕ ರಾಜಕುಮಾರ ತಳವಾರ ಈಜಲು ಹೋಗಿದ್ದಾನೆ. ಸ್ನೇಹಿತರೊಂದಿಗೆ ನಗುತ್ತಾ, ತಮಾಷೆ ಮಾಡುತ್ತಾ ಬಟ್ಟೆಗಳನ್ನ ಕಳೆದು ನೀರಿಗೆ ಜಿಗಿದೇ ಬಿಟ್ಟಿದ್ದಾನೆ. ಹೀಗೆ ಜಿಗಿದ ಬಾಲಕ ರಾಜಕುಮಾರ, ಮತ್ತೆ ಮೇಲೆ ಏಳಲೇ ಇಲ್ಲ. ಜವರಾಯ ಕಾದು ಕುತ್ತವನಂತೆ ಒಳಗೆ ಎಳೆದುಕೊಂಡಿದ್ದಾನೆ. ಇತ್ತ ಮಗನ ಬರುವಿಕೆಗಾಗಿ ಹೆತ್ತವರು ಕಳೆದ ಎರಡು ದಿನಗಳಿಂದ ಕಾಯುತ್ತಲೇ ಇದ್ದಾರೆ. ಆತನ ಸುಳಿವು ಮಾತ್ರ ಪತ್ತೆಯಾಗಿಲ್ಲ!

ಮಗ ಎದ್ದು ಬಂದಾನು ಅಂತಾ ಹೆತ್ತವಳು ಸೇತುವೆ ಸುತ್ತಾ ಓಡಾಡುತ್ತಾ ಅವರಿವರ ಬಳಿ ಅಸಹಾಯಕತೆ ತೋರಿಸ್ತಿರುವ ದೃಶ್ಯ ನೋಡುಗರ ಕಣ್ತುಂಬಿ ಬರುತ್ತೆ. ಸಂಬಂಧಿಕರ ಕಣ್ನಾಲೆಗೆ ತುಂಬಿಕೊಂಡಿವೆ. ಶ್ರೀಮಂತ ತಳವಾರ ಹಾಗೂ ದೇವಕ್ಕಿಗೆ ಇರೋದು ಏಕೈಕ ಪುತ್ರ. ಮನೆಯಲ್ಲಿ ಆಡುತ್ತಾ, ಕುಣಿಯುತ್ತಾ, ಹಠ ಮಾಡುತ್ತಾ ಕಣ್ಮುಂದೆ ಇದ್ದವನು ಬಾರದ ಲೋಕಕ್ಕೆ ಹೋಗಿದ್ದಾನೆ ಅನ್ನೋದು ಅರಗಿಸಿಕೊಳ್ಳಕ್ಕೆ ಆಗ್ತಿಲ್ಲ. ಮಗನನ್ನ ಕಳೆದುಕೊಂಡ ತಂದೆಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಗಿದೆ. ಇಲ್ಲಿ ಇನ್ನೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ವಿಧಿ ಎಷ್ಟೊಂದು ಕ್ರೂರಿ ಅಂದ್ರೆ, ಜನವರಿ 26ರಂದು ಗಣರಾಜ್ಯೋತ್ಸವ ನಿಮಿತ್ತ ಬಾಲಕ ರಾಜಕುಮಾರ ಶಾಲೆಯಲ್ಲಿ ಭಾಷಣ ಮಾಡಬೇಕಿತ್ತು. ಅದರ ತಯಾರಿ ಮಾಡಿಕೊಳ್ಳುತ್ತಾ ಈಜಲು ಹೋಗಿದ್ದಾನೆ. ಹೀಗೆ ಹೇಳುವ ಸಂಬಂಧಿಕರ ಮುಖದಲ್ಲಿ ಕಾರ್ಮೋಡದ ಛಾಯೆ ತುಂಬಿಕೊಂಡಿದೆ.

ತಂದೆ ಪ್ಲಾಸ್ಟರ್ ಕೆಲಸ. ತಾಯಿ ಕೂಲಿ ಕೆಲಸ. ಈ ದಂಪತಿಗೆ ಮೂವರು ಮಕ್ಕಳು. ಮೊದಲ ಮಗುವೇ ರಾಜಕುಮಾರ. ಇಬ್ಬರು ಹೆಣ್ಮಕ್ಕಳು. ಈಗ ಮಗ ಹೆತ್ತವರಿಗೆ ಸಾಕಷ್ಟು ನೋವು ಕೊಟ್ಟು ಹೋಗಿದ್ದಾನೆ. ಈ ಕುಟುಂಬಕ್ಕೆ ಜೀವನದಲ್ಲಿ ಎಂದೂ ಮರೆಯದ ಆಘಾತವಿದು. ಪುತ್ರ ಶೋಕಂ ನಿರಂತರಂ ಅನ್ನೋದು ಸತ್ಯ. ಅದೇನೇ ಇರ್ಲಿ ಹೆತ್ತವರ ಕಣ್ಣೀರಿನ ಗೋಳು ನೋಡಿದ್ರೆ, ಹೇ ವಿಧಿಯೇ ಇಂಥಾ ಸ್ಥಿತಿ ಯಾರಿಗೂ ಕೊಡಬೇಡ.




Leave a Reply

Your email address will not be published. Required fields are marked *

error: Content is protected !!