ಶತಮಾನದ ಎಸೆತ ಎಂದರೆ ಯಾವುದು?

319

ಹೃದಯಾಘಾತದಿಂದ ನಿಧನ ಹೊಂದಿದ ಆಸ್ಟ್ರೇಲಿಯಾದ ಲೆಜೆಂಡ್ ಬೌಲರ್ ಶೇನ್ ವಾರ್ನ್ ಕುರಿತು ಯುವ ಬರಹಗಾರ ಹಾಗೂ ಪತ್ರಕರ್ತ ಸಿದ್ದು ಸತ್ಯಣ್ಣವರ ಬರೆದ ಲೇಖನ ಇಲ್ಲಿದೆ.

ಮೇಲಿನಂತೆ ಯಾರಿಗಾದರೂ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಶ್ನಿಸಿದರೆ ಅದನ್ನು ಅವರಿಗೆ ಉತ್ತರಿಸಲಾಗುವುದಿಲ್ಲ. ಆ ಬೌಲ್ ಎಸೆದ ಬೌಲರ್ ನೆನಪಾಗುತ್ತಾನೆ.

ಆತ ಶೇನ್ ವಾರ್ನ್‌…

1993ರ ಆ್ಯಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಬ್ಯಾಟರ್ ಮೈಕ್ ಗ್ಯಾಟಿಂಗ್ ನನ್ನ ಬೌಲ್ಡ್ ಮಾಡಿದ್ದ ಆ ಎಸೆತ  ಯೂಟ್ಯೂಬಲ್ಲಿ ಎಂದೋ ನೋಡಿದರೂ ಇನ್ನು ನೆನಪಿದೆ. ಆ್ಯಂಡ್ರೂ ಸ್ಟ್ರಾಸ್ ಸಹ ಒಮ್ಮೆ ವಾರ್ನ್ ಎಸೆತಕ್ಕೆ ಹೀಗೆ ಬೌಲ್ಡ್ ಆಗಿದ್ದ‌. ವಾರ್ನ್ ಎಂದರೆ ಹಾಗೇ; ಒಮ್ಮೆ ನೇರ, ಮತ್ತೊಮ್ಮೆ ಗೂಗ್ಲಿ, ಮಗದೊಮ್ಮೆ ಶತಮಾನದ ಎಸೆತ ಎನ್ನುವಷ್ಟು ಲೆಗ್ ಸ್ಟಂಪ್ ನಿಂದ ಆಚೆಗೆ ಬೌಲಿಂಗ್ ಮಾಡಿ ಆಫ್ ಸ್ಟಂಪ್ ಬೇಲ್ಸ್ ಎಗರಿಸಿದಾತ. ಆತನ ವೈಯಕ್ತಿಕ ಬದುಕೂ ಹಾಗೆಯೇ, ಎಸೆಯುತ್ತಿದ್ದ ಬೌಲಿಂಗಿನಂತೆ. ಅಲ್ಲಿ ಘಟಿಸುವವರೆಗೂ ಯಾವುದು ನಿರ್ಣಯವಾಗುತ್ತಿರಲಿಲ್ಲ. ಯಾರೋ ಆಸ್ಟ್ರೇಲಿಯಾದ ಹೋಟೆಲ್ ನೌಕರಳೊಬ್ಬಳು ಈತನ ಮೇಲೆ ಅತ್ಯಾಚಾರದ ಕೇಸ್ ಹೊರಿಸಿದ್ದಳು. ಕಾಂಡೋಮ್  ಹಿಡಿದ ವಾರ್ನ್ ಅತ್ಯಾಚಾರಕ್ಕೆ ಯತ್ನಿಸಿದ ಅಂತಲೂ ಕೇಸ್ ಆಗಿತ್ತು.

ವೈಯಕ್ತಿಕ ಬದುಕಿನ ಇಂತಹ ಹಳವಂಡಗಳಾಚೆಗೂ ಅವನ್ನು ಮೀರಿ ನಿಲ್ಲಲು ಹೋರಾಡಿದ ಮನುಷ್ಯ ವಾರ್ನ್ ಎಂದರೆ ಉತ್ಪ್ರೇಕ್ಷೆಯಾಗಲಾರದೇನೋ? ಯಾಕೆಂದರೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ವಾರ್ನ್ ಒಂದು ಅಂತರ ಕಾಯ್ದುಕೊಂಡಿದ್ದ. ಇಲ್ಲವಾದರೆ ಮೊದಲ ಐಪಿಎಲ್ ಸೀಸನ್ ನಲ್ಲಿ ಈತ ನಾಯಕನಾಗಿದ್ದ ರಾಜಸ್ತಾನ್ ರಾಯಲ್ಸ್ ಕಪ್ ಎತ್ತಿ ಹಿಡಿಯುತ್ತಿರಲಿಲ್ಲ.

ವೈಯಕ್ತಿಕ ಬದುಕಿಗೆ ನೀಡಿದ ಸಮಯವನ್ನು ವಾರ್ನ್ ಎಂದೂ ತನ್ನ ವೃತ್ತಿ ಜೀವನಕ್ಕೆ ನೀಡಲಿಲ್ಲ. ಹೀಗೆ ಕೆಲ ವರ್ಷಗಳ ಹಿಂದೆ ಅಂತರಾಷ್ಟ್ರೀಯ  ಮಾಧ್ಯಮವೊಂದರಲ್ಲಿ ಸುದ್ದಿ ಬಿತ್ತರವಾಗಿತ್ತು.  ವಾರ್ನ್ ಅದೆಲ್ಲದರಾಚೆಗೆ ಆಗ ವೃತ್ತಿಯಿಂದ ಭಾರತದ ಐಪಿಎಲ್ ತಂಡವೊಂದಕ್ಕೆ ಮೆಂಟರ್/ ಕೋಚ್ ಆಗಿದ್ದ. ಆಗ  ವಾರ್ನ್ ಉಸ್ತುವಾರಿಕೆಯಲ್ಲಿ ಇರ್ಫಾನ್ ಖಾನ್, ಸ್ವಪ್ನಿಲ್ ಅಸ್ನೋಡ್ಕರ್  ಎಂಬ ಭಾರತದ ಪ್ರತಿಭೆಗಳು ಬೆಳಕಿಗೆ ಬಂದಿದ್ದವು.

ಖಾನ್ ಶ್ರೀಲಂಕಾದ ಲಸಿತ್ ಮಾಲಿಂಗ ಶೈಲಿಯ ಎಡಗೈ ಬೌಲರ್ ಆದರೆ, ಗೋವಾದ ರಣಜಿ ಕ್ರಿಕೆಟಿಗ ಸ್ವಪ್ನಿಲ್ ಬಹಳ ಸದ್ದು ಮಾಡಿದ್ದ ಬ್ಯಾಟ್ಸಮನ್. ವಾರ್ನ್ ಬರೀ ಲೆಗ್ ಸ್ಪಿನ್ನರ್ ಅಲ್ಲ. ಶ್ರೀಲಂಕಾದ ಸನತ್ ಜಯಸೂರ್ಯನಂತೆ ಸ್ಪಿನ್ನರ್ ಆಗಿ ರಾಷ್ಟ್ರೀಯ ತಂಡ ಪ್ರವೇಶಿಸಿ, ಬ್ಯಾಟರ್ ಆಗಿಯೂ ಹೆಚ್ಚಿನ ಸಾಧನೆ ಮಾಡಬಹುದಿತ್ತು. ವಾರ್ನ್ ಟೆಸ್ಟ್ ನಲ್ಲಿ ಒಮ್ಮೊಮ್ಮೆ ಬೌಲರ್ ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ. ಏಕದಿನ ಪಂದ್ಯಗಳಲ್ಲಿ ಪಟಪಟನೇ ವಿಕೆಟ್ ಉದುರಿದಾಗ ಅಷ್ಟಿಷ್ಟು ರನ್ ಸಿಡಿಸಿ ತಂಡಕ್ಕೆ ನೆರವಾದದ್ದು ಎಷ್ಟೋ ಸಲ. ನಿವೃತ್ತನಾದರೂ ಸದಾ ಹದಿ ವಯಸ್ಸಿಗೆ ತಕ್ಕಂತಿದ್ದ ವಾರ್ನ್ ಹದಿ ವಯಸ್ಸಿಗೆ ತಕ್ಕಂತೆಯೇ ನಡೆದುಕೊಂಡಿದ್ದ. ತರಲೆಗಳಿಂದ ಹಿಂದೆ ಸರಿದಿರಲಿಲ್ಲ; ಥೇಟ್ ಒಂದು ಮಾತಿದೆಯಲ್ಲ ‘ಹಾರುವ ಹಕ್ಕಿ ಇದ್ದರಷ್ಟೇ ರೆಕ್ಕೆ. ಇಲ್ಲವಾದರೆ ಅದೊಂದು ಹಕ್ಕಿಗೆ ರೆಕ್ಕೆಗಳಿದ್ದವು ಅಷ್ಟೇ’ ಎಂಬ ಮಾತಿನಂತೆ.

ರೆಸ್ಟ್ ಇನ್ ಪೀಸ್ ಲೆಜೆಂಡ್. ಶತಮಾನದ ಎಸೆತಕ್ಕಿಂತ ಮೊದಲು ಬಲಗೈಯಲ್ಲಿ ಬೌಲ್ ಹಿಡಿಯುವ ಆ ನಿನ್ನ ತಂತ್ರ, ನಾಲ್ಕೇ ಹೆಜ್ಜೆಗಳಲ್ಲಿ ಬೌಲ್ ಮಾಡುತ್ತಿದ್ದ ಆ ನಿನ್ನ ಕೌಶಲ ಸದಾ ನೆನಪಲ್ಲಿರುತ್ತದೆ.

ಲೇಖಕ: ಸಿದ್ದು ಸತ್ಯಣ್ಣವರ



Leave a Reply

Your email address will not be published. Required fields are marked *

error: Content is protected !!