ಏಕತಾರಿ ತತ್ವಪದಕಾರರ ಗಾನಯಾನ…

1453

ಸಂದರ್ಶನ ಮತ್ತು ಲೇಖನ: ನಾಗೇಶ ತಳವಾರ ಮತ್ತು ಟೀಂ

ಈ ಪುಟ್ಟ ಗ್ರಾಮದಲ್ಲಿ ಜಾನಪದ ಪರಂಪರೆ ಮೈಚಾಚಿಕೊಂಡಿದೆ. ಈ ಗ್ರಾಮದಲ್ಲಿ ಸುಮ್ಮನೆ ಒಂದು ಸುತ್ತು ಹಾಕಿ ಬಂದರೆ, ಜಾನಪದ ಗೀತೆಗಳನ್ನ ಹಾಡುವ ಹತ್ತು ಹಲವು ಗಾಯಕರು ಸಿಗುತ್ತಾರೆ. ಗುರು ಪರಂಪರೆಯಿಂದ ಬೆಳೆದು ಬಂದ ಈ ಕಲೆಯಲ್ಲಿ ಆಧುನಿಕತೆಯ ಆಡಂಬರವಿಲ್ಲ. ತೋರಿಕೆಯ ಪದಪುಂಜವಿಲ್ಲ. ಮಣ್ಣಿನ ಗುಣಗಳಿಂದಲೇ ತುಂಬಿಕೊಂಡಿರುವ ಅಪ್ಪಟ ಜಾನಪದ ಶೈಲಿಯ ಗೀತೆಗಳು. ಯಾವ ಜಾತಿ, ಧರ್ಮ ಅನ್ನೋ ಮಡಿವಂತಿಕೆಯಿಲ್ಲದೆ ಸರ್ವರೂ ಸರ್ವೇಶನನ್ನ ಹಾಡುತ್ತಾ ಮೈಮರೆಯುತ್ತಾರೆ.

ಏಕತಾರಿ ಹಿಡಿದು ತಮ್ಮ ಮೇಳದೊಂದಿಗೆ ಸಜ್ಜಾಗಿ ಕುಳಿತುಕೊಂಡರೆ, ಒಂದೊಂದೆ ಪದಗಳು ಲೀಲಾಜಾಲವಾಗಿ ಆಚೆ ಬರುತ್ತವೆ. ನೆರದಿದ್ದವರ ಹೃದಯಂಗಳದಲ್ಲಿ ಹೊಸ ಸಂಚಲನ ಮೂಡಿಸುತ್ತವೆ. ಲೌಕಿಕ ಬದುಕಿನ ಸಿಕ್ಕುಗಳನ್ನ ಬಿಡಿಸಿ ಅಲೌಕಿಕದ ಕಡೆಗೆ ಕರೆದುಕೊಂಡು ಹೋಗಿ ಬಿಡುತ್ತವೆ. ಇಂತಾ ಪುಟ್ಟ ಗ್ರಾಮ ಬೇರೆ ಯಾವುದು ಅಲ್ಲ, ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೋರಗಿ ಗ್ರಾಮ. ಈ ಊರಿಗೆ ಮೊದಲ ಬಾರಿಗೆ ನಮ್ಮ ಟೀಂ ಹೋಗಿ, ತತ್ವಪದಕಾರರ ದಿನವನ್ನ ಗೊತ್ತು ಮಾಡಿಕೊಂಡಿತು. ಹೀಗೆ ನಿರ್ಧಾರವಾದ ದಿನಕ್ಕೆ ಹೋದ ಮೇಲೆ ಇಮಾಮಬಿ ದೊಡಮನಿ ಅವರ ಮನೆಯಲ್ಲಿ ಸೂಸಲಾ (ಚುರುಮುರಿ ಒಗ್ಗರಣೆ) ಎರಡೆರೆಡು ಬಾರಿ ಚಾ ವ್ಯವಸ್ಥೆ.

ಏಕತಾರಿ ಗಾಯಕಿ ಇಮಮಾಬಿ ಅವರ ಮನೆಗೆ ಒಬ್ಬೊಬ್ಬರಾಗಿ ಬಂದು ಕೂಡಿಕೊಂಡರು. ಒಂದಿಷ್ಟು ಲೋಕಾಭಿರಾಮದ ಮಾತುಗಳು. ಬಳಿಕ ನಮ್ಮ ಪಯಣ ಗ್ರಾಮದ ಶ್ರೀ ವಿಶ್ವರಾಧ್ಯ ಮಠಕ್ಕೆ ಸಾಗಿತು. ಇಮಾಮಬಿ ದೊಡಮನಿ, ತಾಪಣ್ಣ ಮಾಸ್ತಾರ ಹೂಗಾರ, ಮಲ್ಲಿಕಾರ್ಜುನ ನೆಲ್ಲಗಿ, ಚಿಂತಾಮಣಿ ಬಡಗೇರ, ನಿಂಗಪ್ಪ ಡಂಬಳ, ಈರಣ್ಣ ಕಾಳಿ ಹಾಗೂ ರಜನಿಕಾಂತ ಜಾಲವಾದಿ ತಂಡ ಸೇರಿಕೊಂಡು ತತ್ಪಪದಗಳನ್ನ, ಭಜನಾ ಹಾಡುಗಳನ್ನ, ದೇವರ ಸ್ತುತಿಗಳನ್ನ ಒಂದೊಂದಾಗಿ ಹಾಡುತ್ತಾ ಸಾಗಿದರು.

ಏಕತಾರಿ ಹಿಡಿದು ಒಬ್ಬರು ಹಾಡು ಶುರು ಮಾಡ್ತಿದ್ದಂತೆ ಹಿಮ್ಮೇಳ ಅದಕ್ಕೆ ದನಿಗೂಡಿಸುತಿತ್ತು. ಹಾರ್ಮೂನಿಯಂ, ಕಂಜರಾ ಮತ್ತು ಚಳಮ್ಮ ವಾದ್ಯಗಳು ಅವರ ಹಾಡಿಗೆ ಸಂಗೀತದ ಮೆರಗು ತುಂಬುತಿತ್ತು. ಕೈಯಿಂದ ಕೈಗೆ ತಂಬೂರಿ ಬದಲಾಗುತ್ತಾ ಹೋದಂತೆ ಇಲ್ಲಿರುವ ಪ್ರತಿಯೊಬ್ಬರು ಸ್ವತಂತ್ರವಾಗಿ ಹಾಡುತ್ತಾರೆ ಅನ್ನೋದು ಸ್ಪಷ್ಟವಾಯ್ತು. ಓದು ಬರಹ ಗೊತ್ತಿಲ್ಲದ ಇವರಿಗೆ ಬದುಕು ಅನ್ನೋದೇ ವಿಶ್ವವಿದ್ಯಾಲಯ. ಇಲ್ಲಿ ಕಲಿತಿರುವ ಪಾಠ ಸರಳ ಮತ್ತು ನೆಮ್ಮದಿ ಜೀವನದ ಸಾರ ತಿಳಿಸಿಕೊಟ್ಟಿದೆ. ಹೀಗಾಗಿ ಒಬ್ಬರಿಗೊಬ್ಬರು ಸ್ನೇಹ, ಪ್ರೀತಿಯಿಂದ ಅನ್ಯೂನ್ಯತೆಯ ಸಹಬಾಳ್ವೆ ಮಾಡ್ತಿದ್ದಾರೆ.

ಮಲ್ಲಿಕಾರ್ಜುನ ನೆಲ್ಲಗಿ

ಮಲ್ಲಿಕಾರ್ಜುನ ನೆಲ್ಲಗಿ 70ಕ್ಕೂ ಹೆಚ್ಚು, ಇಮಾಮಬಿ ದೊಡಮನಿ 50ಕ್ಕೂ ಹೆಚ್ಚು, ಈರಣ್ಣ ಕಾಳಿ 20ಕ್ಕೂ ಹೆಚ್ಚು ತತ್ವಪದ, ಭಜನಾ ಪದ, ಜಾನಪದ ಗೀತೆಗಳನ್ನ ಸುಶ್ರಾವ್ಯವಾಗಿ ಹಾಡುತ್ತಾರೆ. ಹೀಗಾಗಿ ಬೋರಗಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಜನ ಏಕತಾರಿ ತತ್ವಪದಕಾರರು ಸಿಗುತ್ತಾರೆ. ಇದು ನಿಜಕ್ಕೂ ಈ ಭಾಗದ ಜಾನಪದ ಶಕ್ತಿ ಎನ್ನಬಹುದು. ಹೀಗಾಗಿ ತಾಲೂಕಿನಲ್ಲಿ ಮೊದಲ ಜಾನಪದ ಸಮ್ಮೇಳನ ನಡೆದಿದೆ.

ಇಮಾಮಬಿ ದೊಡಮನಿ



One thought on “ಏಕತಾರಿ ತತ್ವಪದಕಾರರ ಗಾನಯಾನ…

  1. Raju Patil

    ನಿಜಕ್ಕೂ ಸಿಂದಗಿಯ ಪ್ರತಿಭಾವಂತ ಪತ್ರಕತ್ರರು ತಾವೂ…. ನಿಮ್ಮಲ್ಲಿ ಪ್ರತಿಭೆಯಿದೆ ಸಿಂದಗಿಯ ಉನ್ನತ ಪ್ರತಿಭೆ ನಿವೂ. ದೂರದಿಂದ ತಮ್ಮನ್ನ ಗಮನಿಸುತ್ತಿದ್ದೆನೆ. ಏನೊ ಒಂದು ಹೆಮ್ಮೆ ತಮ್ಮ ಬಗ್ಗೆ. ನಿಮ್ಮ ಸಾಧನೆ, ನಿಮ್ಮ ರೂಚಿ, ನಿಮ್ಮ ಹುಡುಕಾಟ, ನಿಮ್ಮ ಸೇವೆ ಹೀಗೆ ಮುಂದುವರೆಯಲಿ….

    Reply

Leave a Reply

Your email address will not be published. Required fields are marked *

error: Content is protected !!