‘ಕನ್ನಡ ವಿಕಾಸ ರತ್ನ’ ರಂಗಕರ್ಮಿ ಕಾತ್ಯಾಯಿನಿ

343

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ಕಳೆದ 10 ವರ್ಷಗಳಿಂದ ರಂಗಭೂಮಿಯನ್ನೇ ತಮ್ಮ ಉಸಿರನ್ನಾಗಿ ಮಾಡಿಕೊಂಡಿರುವ ಕಾತ್ಯಾಯಿನಿ ಬಿ.ಜಿ ಅವರನ್ನು ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಈ ಪ್ರಶಸ್ತಿಗೆ ಕಾತ್ಯಾಯಿನಿ ಅವರನ್ನು ಆಯ್ಕೆ ಮಾಡಿದೆ.

ಡಿಸೆಂಬರ್ 25ರಂದು ಮೈಸೂರಿನ ರಂಗ ಮಂದಿರದ ಕಿರು ರಂಗ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಯಮುನಾ ಹೆಚ್.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಭೂಮಿಯ ಬಹುಮುಖ ಪ್ರತಿಭೆ ಕಾತ್ಯಾಯಿನಿ

ರಂಗಕರ್ಮಿ ಕಾತ್ಯಾಯಿನಿ ಬಿ.ಜಿ ಮೂಲತಃ ಶ್ರೀರಂಗಪಟ್ಟಣದವರು. ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. ಸುಮಾರು 10 ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನಾಟಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.

2010 ರಿಂದ 1013ರವರೆಗೆ ಮಂಡ್ಯ ಮತ್ತು ಮೈಸೂರಿನ ಅನೇಕ ಬೀದಿ ನಾಟಕ ತಂಡಗಳಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ. ಅಲ್ದೇ ನಮಗೂ ಬದುಕಲು ಬಿಡಿ, ಅರಿವು, ಮೂಡಲಿ ಬೆಳಕು ಎಂಬ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಮುಂದೆ ಹವ್ಯಾಸಿ ರಂಗಭೂಮಿಯಲ್ಲಿ ನಟಿಯಾಗಿ, ರಂಗ ನಿರ್ದೇಶಕಿಯಾಗಿ ಮತ್ತು ಸಂಘಟಕಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು. ಅದು ಮುಂದೆ ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ಗಳಿಗೆ ದಾರಿ ಮಾಡಿತು.

ಕಾತ್ಯಾಯಿನಿ

ಇನ್ನು ಕಳೆದ 4 ವರ್ಷಗಳಿಂದ ‘ಮಹಾ ಬೆಳಕು’ ಎಂಬ ರಂಗ ತಂಡವನ್ನು ಕಟ್ಟಿ, ಅದರ ಸಂಸ್ಥಾಪನಾ ಅಧ್ಯಕ್ಷರಾಗಿ ರಂಗಭೂಮಿಯ ಕಾಯಕದಲ್ಲಿ ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಕಾತ್ಯಾಯಿನಿಗೆ ಮ್ಯಾಕ್ಸ್ ಲೈಫ್ ಹಾಗೂ ಆಕ್ಸಿಸ್ ಬ್ಯಾಂಕ್ ವತಿಯಿಂದ 2021ನೇ ಸಾಲಿನ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗ ಕನ್ನಡ ವಿಕಾಸ ರತ್ನ ಪ್ರಶಸ್ತಿ ಒಲಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!