ದಲಿತರು ಅಂಕಿ ಸಂಖ್ಯೆಯಾಗಿಯೆ ಉಳಿದರು…!

799

ಸಧ್ಯದ ರಾಜಕೀಯ ವ್ಯವಸ್ಥೆಯಲ್ಲಿ ಹಿಂದುಳಿದವರು, ದಲಿತರ ಪರಿಸ್ಥಿತಿ ಏನಾಗಿದೆ. ರಾಜಕೀಯವಾಗಿ ಏನೇ ಅಧಿಕಾರ ಕೊಟ್ಟಿದ್ದೇವೆ ಅಂತಾ ಹೇಳಿದರೂ ಅದು ಕೊಡುವುದಲ್ಲ. ಅವರು ಹಕ್ಕು ಅನ್ನೋದು ಯಾರಿಗೂ ಅರಿಯದೆ ಹೋಗುತ್ತಿದೆ. ಹೀಗಾಗಿ ‘ದಲಿತರು ಅಂಕಿ ಸಂಖ್ಯೆಯಾಗಿಯೆ ಉಳಿದರು ಸಮಾಜದಲ್ಲಿ. ಊಳಿಗರ ಮನದಾಗ ಹಿಂದುಳಿದರು’ ಎನ್ನುತ್ತಿದ್ದಾರೆ ಬಸವ ಪಾಟೀಲ ಕೊಂಡಗೂಳಿ ಅವರು.

ಸ್ವಂತಿಕೆಯನ್ನ ಕಸಿದುಕೊಂಡ ನೆಲದಲ್ಲಿ ಬೆವರ ಸುರಿಸಿ ದುಡಿದವರು. ಅಸ್ಪೃಶ್ಯತೆಯ ಅಮಾನವೀಯ ವ್ಯವಸ್ಥೆಯಲ್ಲಿಯೆ ಜೀವಿಸಿದರೂ ಕೇಡ ಬಯಸಲಿಲ್ಲ. ಸಮಾನತೆಯ ಹಾಡ ಹಾಡಿದವರ ಹಾಡಿಗೆ ಕಿವಿಯಾಗಿ, ಹಾಡಿಯಲ್ಲಿ ಮಲಗಿದರು.  ಜಂತಿ ಇಲ್ಲದ ಮನೆಯಲ್ಲಿ ಆಗಸದಲ್ಲಿನ ನಕ್ಷತ್ರ ಎಣಿಸಿತ್ತು, ಪಕ್ಕದಲ್ಲಿ ಮಲಗಿದ ಮಕ್ಕಳಲ್ಲಿ ಭವಿಷ್ಯ ಕಂಡು ನಸು ನಕ್ಕು, ಮಗ್ಗಲ ಹೊರಳಿಸಿದಾಗ ಬೆಳಕಾಗಿತ್ತು!

ನಿತ್ಯ ಹಂಗಿಸಿಕೊಂಡು, ಒಮ್ಮೆ ನಸುನಕ್ಕು, ಒಮ್ಮೆ ರೊಚ್ಚಿಗೆದ್ದು ಹಾಡಿದ ಭೀಮ ಗೀತೆ ಅಲ್ಲಲ್ಲಿ ಕ್ರಾಂತಿಭಾವ ಆದರೂ ಅಧಿಕಾರ ಸ್ಥಾಪಿಸಲಿಲ್ಲ. ಸಮಾಜಿಕ ಸಮಾನತೆಯು ಗಗನ ಕುಸುಮದಂತೆ, ಯಾವುದೊ ಪ್ರೇಮ ಕಾವ್ಯದ ಹಾಡಿನಂತೆ ಗುಣು ಗುಣಗಿಸಿದರೂ ಎದೆಯಲ್ಲಿ ಇಳಿಯಲಿಲ್ಲ. ಒಮ್ಮೊಮ್ಮೆ ಬಣ್ಣ ಬಣ್ಣದ ಛದ್ಮವೇಶದಂತೆ, ಒಮ್ಮೊಮ್ಮೆ ಢಾಂಭಿಕ ಸೋಗಿನಂತೆ ಢಾಳವಾಗಿ ಕಾಣುತ್ತಿದೆ. ಹಂಗಿಸವ ಭಾವದ, ತತ್ವದ ಸೊಕ್ಕಡಗಲೆ ಇಲ್ಲ. ಮನ್ವಂತರದ ಸುಳಿಗಾಳಿ ಸುಳಿಯಲಿಲ್ಲ. ಯಾರಿಗೆ ದೂರಲಿ ಯಾವುದಕ್ಕೆ ದೂರಲಿ, ಕುರುಹಗಳು ಬಲಾಡ್ಯವಾದಾಗ, ನನ್ನ ಕುರುಹಗಳು ನನ್ನದಲ್ಲದ ಇನ್ಯಾವುದೊ ಕುರುಹಿನಲ್ಲಿ ಸಿಕ್ಕು ನಲಗುತ್ತಿರವಾಗ?

ಬಸವ ಪಾಟೀಲ ಕೊಂಡಗೂಳಿ,
ಲೇಖಕರು, ಯುಕೆ

ದಲಿತರ ಆಹಾರ ಅಸಹ್ಯವೆನ್ನವಷ್ಟು ಮದವೇರಿದ ಸಮಾಜಕ್ಕೆ ಒಂದು ಸಲ ನೀನು ತಿನ್ನುವ ಕೂಳು ಅಸಹ್ಯ ಅಂತ ಹೇಳಲೆ? ಹೇಳಿದರೆ ಸೇಡು ತಿರಸಿಕೊಂಡಂತೆ ಆಗುತ್ತೆ. ಆದರೆ ಆಗಲಿ ಬಿಡಿ ಮದವಿಳಿದ ಮೇಲಾದರು ತಟಕ ಬುದ್ಧಿ ಬರಬಹುದು. ಇದಕ್ಕಾದರು ನನಗೆ ಅಧಿಕಾರ ಬೇಕಲ್ಲವೆ? ಇಲ್ಲ ನನ್ನ ಮೌಂಸಾಹರಿಗಳ ಪಟ್ಟಿಯಲ್ಲಿ ಹಿಡಿದಿಟ್ಟು ಬಿಡುತೀರಾ?

ನನ್ನ ದೇವರ ನಾ ಕಾಣುವ ಬಗೆ ನಿಮಗ್ಯಾಕೆ ಸಲ್ಲ? ಸತ್ಯದ ಹುಡುಕಾಟದಲ್ಲಿರುವವರಿಗೆ ಕಾಲ್ಪನಿಕ ಕಥೆಗಳ ತುಂಬಿ ನನ್ನ ಸ್ವಂತಿಕೆಯನ್ನ ಹರಣಮಾಡಿದವರಿಗೆ, ಒಮ್ಮೆ ಸತ್ಯ ತಿಳಿಹೇಳಲು, ಒಂದಿಷ್ಟು ಅಧಿಕಾರ, ಅವಕಾಶಗಳು ಬೇಡವೆ? ಇಲ್ಲ ರಕ್ತಗತ ವ್ಯವಸ್ಥೆಯ ವ್ಯಸನದಲ್ಲಿ ನನ್ನನ್ನ ದಲಿತ ಅಂತ ನಮೂದಿಸಿ ಬಿಡುತೀರಾ? ಅಲ್ಲಿಗೆ ನನ್ನ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡಿ ಮುಗಿಸುವ ಹುನ್ನಾರವಾ?

ಬಾಹುಳ್ಯ, ಬಲಾಡ್ಯ ಪ್ರಜಾಪ್ರಭತ್ವದಲ್ಲಿ ಮೇಲಗೈ ಸಾಧಿಸುವ ಪ್ರಮೇಯ ಇದ್ದರೆ, ಹಿಡಿದಿಟ್ಟ ಅಂಕಿ ಸಂಖ್ಯಗಳಲ್ಲಿ ನನ್ನ ಬಾಹುಳ್ಯ, ಭಲಾಡ್ಯ ಕಾಣಲಿಲ್ಲವೆ? ನೀವು ಬಾಹುಳ್ಯವನ್ನ ಪರಿಭಾಷಿಸುವ ಪರಿಯಾದರು ಯಾವುದು? ಒಮ್ಮೆ ನಾವೆಲ್ಲ ಒಂದು ಎನ್ನುವ ತಗಲತನವಾ? ಅಥವಾ ಸಂರಚಿತ ಜಾತೀಯ ಮನೋಭಾವವಾ?

ಆಯ್ಕೆಯಲ್ಲಿ ಭಾಗವಹಿಸುವಿಕೆ ಪ್ರಜಾತಂತ್ರ ಗಟ್ಟಿಗೊಳಿಸುವ ಪ್ರಕ್ರಿಯೆ ಅಲ್ಲವಾ? ನನ್ನ ಭಾಗವಹಿಸಿಕೆ ಮನ್ನಿಸದೆ, ಪಟ್ಟಭದ್ರರ ವಿಶ್ಲೇಷಣೆಯ ವಸ್ತು ಆಗಿಬಿಟ್ಟನಾ? ಅದಿ ರಕ್ತಗತರ ಅನುವಾಂಶಿಕ ಮಧ್ಯಮರ ನಡುವೆ, ಇವರ ಸೋಗಲಾಡಿತನದ ಬಣ್ಣ ಅಳಿಸಲು ನನಗೊಂದಿಷ್ಟು ಸ್ಥಾನ-ಮಾನ ಬೇಡವೆ? ನಮ್ಮೊಳಗೊಬ್ಬಣ್ಣ, ಅಕ್ಕ, ತಮ್ಮ ಶ್ರೀಮಂತ/ತೆ ಆದರೆ ಹೊಟ್ಟೆಕಿಚ್ಚಿನಿಂದ ನರಳುವ ನಂಜುಗಳಿಗೆ, ಸಮಾನಾತೆಯ ಮಜ್ಜಿಗೆ, ಅಂತಹುಗಳ ಹೊಟ್ಟೆಗೆ ಹೊಯ್ಯಲು ಅವಕಾಶ ಮತ್ತು ಚರ್ಚೆಯ ಭಾಗ ನಾನು ಆಗಬೇಕಲ್ಲವೆ?




Leave a Reply

Your email address will not be published. Required fields are marked *

error: Content is protected !!