ಉಲ್ಟಾ ಮಾತುಗಾರ್ತಿ ತನುಶ್ರೀ…

906

ಇಲ್ಲೊಬ್ಬಳು ಹುಡ್ಗಿ ಇದಾಳ್ರಿ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಾಕಿ. ಈಕೀ ಬರೀ ಕನ್ನಡ ಅಲ್ಲರೀ, ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಭಾಷೆನಾ ಉಲ್ಟಾ ಮಾತ್ನಾಡ್ತಾಳ್ರಿ. ಯಾರಕಿ ಅನ್ನೋದು ಇಲ್ಲಿ ಐತಿ ನೋಡ್ರಿ..

ಕೆಲವರಿಗೆ ಒಂದ್ ಭಾಷೆನೆ ನೆಟ್ಟಗ ಮಾತ್ನಾಡಕ್ಕ ಬರಲ್ಲ. ಇನಾ ಉಲ್ಟಾ ಮಾತಾಡು, ಓದು, ಹಾಡು ಅಂದ್ರೆ ನಮ್ಗೆ ಉಲ್ಟಾ ಬೈತಾರ್ರಿ. ಆದ್ರೆ, ಈ ಹುಡ್ಗಿ ಮಾತ್ರ ಹಂಚಿನ್ಯಾಗಿನ ಎಳ್ಳ ಪಟಪಟ ಹುರಿದ್ಹಂ ನಾಕೈದು ಭಾಷೆ ಉಲ್ಟಾ ಮಾತಾಡ್ತಾಳ, ಓದ್ತಾಳ. ಅಕಿ ಮತ್ಯಾರೂ ಅಲ್ಲರ್ರಿ, ನಮ್ ಹುಬ್ಬಳಿ ಹುಡ್ಗಿ ತನುಶ್ರೀ ಮಸನಿ.

ಅಂದ್ಹಾಗ ಈ ಚೆಲ್ವಿ ಇರೋದು ಹುಬ್ಬಳ್ಳಿ ಪತ್ರಕರ್ತ ನಗರದಲ್ಲಿ. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ. ಈಕಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಸೇರಿ ಹಲವು ಭಾಷೆಗಳನ್ನ ಉಲ್ಟಾ ಶೈಲಿಯಲ್ಲಿ ಮಾತಾಡೋದು, ಓದೋದು ಮಾಡ್ತಾಳ್ರಿ. ಕೇಳಿದ್ರ ಭಾಳ್ ಮಸ್ಕಿರಿ ಅನಿಸ್ತದಲ. ಆದ್ರೂ ಇದು ಖರೆ ಐತ್ರಿ. ಮೊದ ಮೊದ್ಲು ತನುಶ್ರೀ ಮಜಾಕಾಗಿ ಗೆಳತಿಯರೊಂದಿಗೆ ಉಲ್ಟಾ ಮಾತಾಡ್ತಿದ್ದಳು. ಮುಂದೆ ಅವಳಿಗೆ ಅದ ಸೀದಾ ಮಾತು ಆದಾಂಗ ಆಗೈತ್ರಿ. ಹಿಂಗಾಗಿ ನಾಲ್ಕೈದು ಭಾಷೆನ ಸೀದ ಹಾಗೂ ಉಲ್ಟಾ ಎರಡೂ ಮತ್ನಾಡ್ತಾಳ್ರಿ.

ಬರೀ ಮಾತ್ ಅಲ್ಲರೀ.. ಹಾಡಾನೂ ಉಲ್ಟಾ ಹೇಳ್ತಾಳ್ರಿ..

ತನುಶ್ರೀ ಬರೀ ಮಾತ್ ಅಷ್ಟ ಉಲ್ಟಾ ಹೇಳಲ್ಲರೀ.. ಹಾಡಾನೂ ಉಲ್ಟಾನೇ ಹಾಡ್ತಾಳ್ರಿ. ಪುನೀತ್ ಅಭಿನಯದ ರಾಜಕುಮಾರ ಸಿನಿಮಾದ ಹಾಡು ಉಲ್ಟಾ ಹೇಳ್ತಾಳ ಅವಳ ಬಾಯಿಂದ್ಲೇ ಒಂದ್ ಸಾರಿ ಕೇಳ್ರಲ..

ಈಕೀ ಬರೀ ಕನ್ನಡ ಹಾಡಲ್ಲರೀ, ಹಿಂದಿ, ತೆಲುಗು, ಇಂಗ್ಲಿಷ್ ಸಾಂಗ್ಸ್ ಕೂಡಾ ಉಲ್ಟಾ ಹಾಡ್ತಾಳ ತನುಶ್ರೀ ಮಸನಿ.

ರೇಡಿಯೋದಾಗ ಮಾತಾಡಿದ ತನುಶ್ರೀ

ಆಕಾಶವಾಣಿ, ಹುಬ್ಬಳ್ಳಿ ರೆಡ್ ಎಫ್ಎಂನಲ್ಲಿಯೂ ತನುಶ್ರೀ ಉಲ್ಟಾ ಮಾತಿನಲ್ಲಿ ಕಾರ್ಯಕ್ರಮ ನಡೆಸಿ ಸೈ ಅನಿಸಿಕೊಂಡಾಳ. ಕಾಲೇಜು ಮಟ್ಟದ ಕಾರ್ಯಕ್ರಮದಲ್ಲಿಯೂ ಹಿಂಗ ಉಲ್ಟಾ ಮಾತ್ನಾಡಿ ಏನ್ರೀ ಇವಳು ಹಿಂಗ್ ಮಾತ್ನಾಡ್ತಾಳ ಅಂತಾ ಹುಬ್ಬೇರಿಸುವಂಗ ಮಾಡ್ಯಾಳ. ಇಷ್ಟೆಲ್ಲ ಮಾಡಿದ ತನುಶ್ರೀ ಹೆಸರು ಕರ್ನಾಟಕ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಕೊಂಡೈತಿ. ಇನ್ಮುಂದ ಇರೋದು ಗಿನ್ನಿಸ್ ದಾಖಲೆ ಮಾಡೋದು.

ಆರಂಭದಲ್ಲಿ ಇದು ನನಗೆ ಕೇವಲ ಮನರಂಜನೆ ಅನಿಸಿತು. ಈಗ ಇದರಲ್ಲಿ ಪಾಂಡಿತ್ಯ ಹೊಂದಿದ್ದು, ಅವಕಾಶ ಸಿಕ್ಕರೆ ಗಿನ್ನಿಸ್ ರೆಕಾರ್ಡ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಕುಟುಂಬ ಸದಸ್ಯರು, ಉಪನ್ಯಾಸಕರು ಮತ್ತು ಸ್ನೇಹಿತರು ನನ್ನ ಈ ಕಲೆಯನ್ನು ಬೆಂಬಲಿಸುತ್ತಿದ್ದಾರೆ.

ತನುಶ್ರೀ ಮಸನಿ, ಉಲ್ಟಾ ಶೈಲಿಯ ಭಾಷಾ ಪ್ರವೀಣೆ

ಬರೀ ಮಾತ್ನಾಡುವುದು, ಹಾಡುವುದು ಅಷ್ಟೇ ಅಲ್ಲ, ಪುಸ್ತಕ, ಪತ್ರಿಕೆಗಳನ್ನ ಸಹ ಉಲ್ಟಾ ಹಿಡಿದು ಓದ್ತಾಳ. ನೀವು ಯಾವುದೇ ಪದವನ್ನ ಕೇಳಿ, ಓದಿಸಿ.. ಕ್ಷಣ ಮಾತ್ರದಲ್ಲಿಯೇ ಅದನ್ನ ಉಲ್ಟಾ ಓದ್ತಾಳ. ಈ ಉಲ್ಟಾ ಸಾಧನೆಗೆ 10 ವರ್ಷದ ಪರಿಶ್ರಮ ಐತ್ರಿ. ಇಂಥಾ ವಿಶೇಷ ಹುಡ್ಗಿಯ ಗಿನ್ನಿಸ್ ರೆಕಾರ್ಡ್ ಕನಸು ಜಲ್ದಿ ನನಸಾಗ್ಲಿ ಅಂತಾ ನಾವೆಲ್ಲ ಸೇರಿ ಹಾರೈಸೋಣ್ರಿ..


TAG


Leave a Reply

Your email address will not be published. Required fields are marked *

error: Content is protected !!