ಓಣಿಯ ಶೆಡ್ಡಗಳನ್ನ ಕಿತ್ತಿಸುವ ಸಿಂದಗಿ ಅಧಿಕಾರಿಗಳಿಗೆ ಇಲ್ಲಿ ತಾಕತ್ತು ಇಲ್ಲವೆ?

432

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ವಾರ್ಡ್ ನಂಬರ್ 2 ಹಾಗೂ 3ನೇ ವ್ಯಾಪ್ತಿಗೆ ಬರುವ, ಗೋಲಗೇರಿ ರಸ್ತೆ ಸಮೀಪದ ಕನಕದಾಸ ಸರ್ಕಲ್ ಬಳಿಯ ಶೆಡ್ಡಗಳನ್ನ ತೆರವುಗೊಳಿಸಿ ಎಂದು ಪುರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸ್ವಯಂಪ್ರೇರಿತರಾಗಿ ತೆರವುಗೊಳಿಸದೆ ಹೋದ್ರೆ ಜೆಸಿಬಿ ಮೂಲಕ ತೆರವುಗೊಳಿಸುತ್ತೇವೆ ಎನ್ನುವ ಎಚ್ಚರಿಕೆ ಮಂಗಳವಾರ ನೀಡಿದ್ದಾರೆ.

ಪುರಸಭೆ ಅಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿನ ನಿವಾಸಿಗಳು ಶೆಡ್ಡಗಳನ್ನ ತೆಗೆಯುತ್ತಿದ್ದಾರೆ. ಎರಡ್ಮೂರು ಅಂಗಡಿಗಳು ಹೊರತು ಪಡಿಸಿದ್ರೆ, ಇರೋ ಸುಮಾರು ಹತ್ತೆಂಟು ಶೆಡ್ಡಗಳು, ಸ್ಥಳೀಯರು ಕೃಷಿಗೆ ಸಂಬಂಧಿಸಿದ, ಮನೆಗೆ ಬೇಕಾದ ಕಟ್ಟಿಗೆ ಸೇರಿ ಇತರೆ ವಸ್ತುಗಳನ್ನ ಇಡಲು ಮಾಡಿಕೊಂಡಿದ್ರು. ಈಗ ಚರಂಡಿ ನಿರ್ಮಾಣವಾಗ್ತಿದ್ದು, ತೆಗೆದು ಹಾಕಿಯೆಂದು ಸೂಚಿಸಿದ್ದಕ್ಕೆ ಜನರು ತೆಗೆದು ಹಾಕ್ತಿದ್ದಾರೆ.

ವಾಣಿಜ್ಯ ಉದ್ದೇಶವಿಲ್ಲದೆ ಕೆಲ ವಸ್ತುಗಳ ರಕ್ಷಣೆಗೆ ನಿರ್ಮಿಸಿದ್ದ ಶೆಡ್ಡಗಳನ್ನ ತೆಗೆಸುವ ಅಧಿಕಾರಿಗಳಿಗೆ, ಪಟ್ಟಣದ ತುಂಬಾ ಇರೋ ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸುವ ತಾಕತ್ತು ಇಲ್ವೆ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಹೊಂದಿಕೊಂಡು ಪಟ್ಟದ ಹಲವು ಕಡೆ ಅನಧಿಕೃತವಾಗಿ ನೂರಾರು ಅಂಗಡಿಗಳು ನಿತ್ಯ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿವೆ. ಇವುಗಳನ್ನ ತೆರವುಗೊಳಿಸಲು ಅಧಿಕಾರಿಗಳು ಕುಂಟು ನೆಪ ಹೇಳ್ತಿರುವುದು ವಿಚಿತ್ರ.

ಪುರಸಭೆಗೆ ಕೇಳಿದ್ರೆ ಕೆಇಬಿ ಮೇಲೆ ಹಾಕ್ತಾರೆ. ಕೆಇಬಿಗೆ ಕೇಳಿದ್ರೆ ಪುರಸಭೆ ಮೇಲೆ ಹಾಕ್ತಾರೆ. ತಾಲೂಕು ಆಡಳಿತ ಅಧಿಕಾರಿಗಳನ್ನ ಕೇಳಿದ್ರೆ ಉಪ ವಿಭಾಗಾಧಿಕಾರಿಗಳ ಜೊತೆ ಚರ್ಚಿಸ್ತೀವಿ ಅಂತಾರೆ. ಅನಧಿಕೃತ ಜಾಗ, ವಿದ್ಯುತ್ ಸಂಪರ್ಕ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸುವವರ ಮೇಲೆ ಯಾಕಿಲ್ಲ ನಿಮ್ಮ ಅಧಿಕಾರದ ಅಸ್ತ್ರ? ಅಕ್ರಮಕ್ಕೆ ಬೆಂಬಲವಾಗಿ ನಿಲ್ಲುವವರು ಯಾರು? ಅಂತವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಧೈರ್ಯ ಅಧಿಕಾರಿಗಳಿಗೆ ಇಲ್ವಾ ಅನ್ನೋ ಅನುಮಾನ ಮೂಡಿದೆ. ಹೀಗೆ ತೆಲೆ ಎತ್ತಿರುವ ಅದೆಷ್ಟೋ ಅನಧಿಕೃತ ಅಂಗಡಿಗಳಲ್ಲಿ ಕೆಲವರು ಇತರರಿಗೆ ಬಾಡಿಗೆ ಕೊಟ್ಟು ಹಣ ಗಳಿಸ್ತಿರುವ ಆರೋಪ ಸಹ ಇದೆ.

ಓಣಿಗಳಲ್ಲಿರುವ ಅನಧಿಕೃತ ಶೆಡ್ಡಗಳನ್ನ ಹೇಗೆ ತೆರವುಗೊಳಿಸಲು ಸೂಚನೆ ನೀಡಿದ್ರೋ ಅದೆ ರೀತಿ ಪಟ್ಟಣದ ಎಲ್ಲೆಡೆ ತಲೆ ಎತ್ತಿರುವ, ಎತ್ತುತ್ತಿರುವ ಅನಧಿಕೃತ ಅಂಗಡಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಪಟ್ಟಣದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. ಇಲ್ದೇ, ಹೋದ್ರೆ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಪ್ರಶ್ನೆ ಮೂಡುತ್ತೆ. ಇದಕ್ಕೆ ಆಸ್ಪದ ಕೊಡಬಾರದು.




Leave a Reply

Your email address will not be published. Required fields are marked *

error: Content is protected !!