ಉತ್ತರ ಕರ್ನಾಟಕ “ಕಲ್ಯಾಣ’’ ಕರ್ನಾಟಕ ಆಗಲಿ

479

ಕನ್ನಡ ನಾಡಿನ ಒಂದು ಭಾಗದ ಜನಮನ ಅನ್ನ, ಅಕ್ಷರ, ಆರೋಗ್ಯ ಸೇವೆ, ಆಶ್ರಯ ಮತ್ತು ಅಭಿವೃದ್ಧಿ ವಂಚಿತರಾಗಿರುವುದು ವಾಸ್ತವಿಕ ಸತ್ಯ. ಪ್ರಾದೇಶಿಕ ಅಸಮಾನತೆ ಕುರಿತು ಯುಕೆ ನಿವಾಸಿ ಬಸವ ಪಾಟೀಲ ಕೊಂಡಗೂಳಿ ಅವರು ಬರೆದ ಲೇಖನ ಇಲ್ಲಿದೆ.

ನಮ್ಮಲ್ಲಿ ಪ್ರಾದೇಶಿಕ ಅಸಮಾನತೆ ಅನ್ನೋದು ಊಹಾಪೋಹ ಅಲ್ಲ. ಅದು ನಾವು ಅನುಸರಿಸಿಕೊಂಡ ಹೋಗತಾ ಇರುವ ವ್ಯವಸ್ಥೆಯ ಸೋಲು. ಸಂವಿಧಾನಿಕವಾಗಿ ಸ್ಥಾಪಿತ ಅನೇಕ ಸಮಿತಿಯ ವರದಿಗಳು ಘಂಟಾಘೋಷವಾಗಿ ಡಂಗರ ಹೊಡೆದರೂ ಹಿತ್ತಾಳೆ ಕಿವಿಯ ಆಳುವ ವರ್ಗ, ಅಧಿಕಾರಿಯ ವರ್ಗ ಮತ್ತು ಮಾಧ್ಯಮದವರಿಗೆ ಕೇಳಿಸುತ್ತಲೇ ಇಲ್ಲ. ತಪ್ಪು ಹೊರೆಸುವುದು ಸಹಜ. ಆದರೆ ಜಂಗಮವು (ಸಮಾಜ) ನಿಶ್ಚಲವಾಗಿದ್ದು ಆಶ್ಚರ್ಯ! ದನಿ ಇಲ್ಲದವರ ದನಿಯಾಗಬೇಕಾಗಿದ್ದ ಮಾಧ್ಯಮ, ಅದರ ಬಾಯಲ್ಲಿ ಸರಕಾರಗಳು ಕೊಡುವ ಸ್ಕಾಚು ಮತ್ತು ಜಾಹೀರಾತು ತುಂಬಿ ಹೋಗಿದೆ ಅಂತ ಅನಿಸ್ತಾಯಿದೆ. ಸರಕಾರದ್ದು ಬಿಟ್ಟರೆ ಕಾರ್ಪೊರೇಟ್ ಸಂಸ್ಥೆಗಳ ಬಣ್ಣ ಬಣ್ಣದ ಜಾಹೀರಾತಗಳಲ್ಲಿ ಪತ್ರಿಕಾರಂಗದ ರಂಗೇರಿದೆ.

ಇಂತದರಲ್ಲಿ ವಿಶ್ವಗುರು ಭಾರತ ಅಂತ ಅರಿವಿ ಹಾವು ಆಡಿಸುತ್ತ ಯುವಕರ ಶಕ್ತಿಯನ್ನ ಧರ್ಮಾಂಧತೆಯೆಡೆಗೆ ಎಳಿಯುತ್ತಿದ್ದರೆ, ಧಾರ್ಮಿಕ ಕ್ಷೇತ್ರಾಧಿಪತಿಗಳು ತಮ್ಮ ತಮ್ಮ ಪಿಆರ್ ಕ್ಯಾಂಪೇನಗೆ ಅಣಿಯಾಗಿದ್ದಾರೆ. ಇವೆಲ್ಲದರ ನಡುವೆ ಒಂದು ಸಣ್ಣ ಆಶಾಭಾವನೆ ಮೂಡಲು ಕಾರಣ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು!

ಬೆಳಗಾವಿ ವಿಧಾನ ಸೌಧ, ಭೌತಿಕವಾಗಿ ಅಂದಚೆಂದವಾಗಿ ಶೃಂಗಾರಗೊಂಡಿದೆ. ಅದರೊಳಗೆ ಯುವ ಶಾಸಕರು ಅಲ್ಪಸ್ವಲ್ಪ ತಯ್ಯಾರಿ ಮಾಡಕೊಂಡಾದರೂ ಅತ್ಯಂತ ಕಾಳಜಿಯಿಂದ ಮತ್ತು ಅಷ್ಟೆ ಕಕ್ಕಲಾತಿಯಿಂದ ಕಲ್ಯಾಣ ಕರ್ನಾಟಕದ ಜನ-ಜೀವನ ಸ್ಥಿತಿಗತಿಗಳನ್ನ ವಿಧಾನ ಸಭೆಯಲ್ಲಿ ಮಂಡಿಸ್ತಾ ಇರೋದು ನೋಡಿ ಖುಷಿ ಆಯಿತು. ನಾಡಿನ ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿನ ನಂಬಿಕೆ ಸಧೃಡವಾಯಿತು. ಅಂತಹ ಯುವ ಶಾಸಕರ ಹೆಸರಿಸುವುದು ಕೂಡಾ ಸೂಕ್ತ. ಅದಕ್ಕ ಭರತ ರೆಡ್ಡಿ, ಬಳ್ಳಾರಿ ನಗರ ಬಗ್ಗೆ ಮಾತನಾಡಿದರೆ, ಮತ್ತೊಬ್ಬ ಯುವ ಶಾಸಕ ಶರಣಗೌಡ ಪಾಟೀಲ ಸಮಗ್ರ ಯಾದಗಿರಿ ಜಿಲ್ಲೆಯ ಜನರ ಬವಣೆ ಬಗ್ಗೆ ಅಂಕಿ ಸಂಖ್ಯೆ ಸಹಿತ ಮಾತನಾಡಿದ್ದು ಸರಕಾರವನ್ನ ಎಚ್ಚರಿಸುವ ಕೆಲಸ.

ಹಿರಿಯ ರಾಜಕಾರಣಿಗಳಲ್ಲಿ ಅದರಲ್ಲೂ ವಿರೋಧ ಪಕ್ಷದ ಬಸನಗೌಡ ಪಾಟೀಲ ಯತ್ನಾಳ, ಕಲ್ಯಾಣ ಕರ್ನಾಟಕ ವಿಷಯದ ಬಗ್ಗೆ “ನಾವು ಪಕ್ಷಾತೀತರಾಗಿ ಚರ್ಚೆ ಮಾಡುವ’’ ಅಂದಿದ್ದು ಮಾರ್ಮಿಕವಾಗಿತ್ತು. ಇಂತಹ ನಡೆಗಳು ಜನಜೀವನದ ಗುಣಮಟ್ಟ ಹೆಚ್ಚಿಸುವುಲ್ಲಿ ಅತ್ಯಂತ ಪರಿಣಾಮಕಾರಿ. ಹಂಗೆ ಆಡಳಿತ ಪಕ್ಷದ ಶಾಸಕರಾದ ಲಕ್ಷ್ಮಣ ಸವದಿ ಸರಕಾರದ ಗಮನವನ್ನ ಆಡಳಿತಾತ್ಮಕ ಸುಧಾರೆಣೆಗೆ ಕರೆ ನೀಡಿದ್ದು ಆಶಾದಾಯಕ ಎನಿಸಿತು.

ಇಷ್ಟೆಲ್ಲ ಘಟನೆಗಳು ದೂರದಿಂದಲೆ ಗಮನಿಸಿದರು ಏನೊ ಒಂದು ಕೊರತೆ ಎದ್ದು ಕಾಣತಿತ್ತು. ಅದೇನು ಅಂತ ಹಲವು ಸಲ ತಲೆ ಕೆರಕೊಂಡ ಮೇಲೆ ಗೊತ್ತಾಗಿದ್ದು, ಮಾಹಿತಿಯ ಕೊರತೆ, ನಿರ್ದೇಶಾಂಕಗಳ ಕೊರತೆ, ಅಭಿವ್ಯಕ್ತಗೊಳಿಸುವ ಶೈಲಿಯ ಕೊರತೆ, ವಿಷಯ ನೈಪುಣ್ಯತೆಯ ಕೊರತೆ, ಆಯ್ಕೆಗೊಂಡ ಜನರಲ್ಲಿ ಇಷ್ಟೊಂದು ಕೊರತೆಗಳಿರಲು ಏನು ಕಾರಣ? ಇಷ್ಟೊಂದು ಕೊರತೆಗಳು ಇದ್ದರು ಜನ ಅವರನ್ನ ಯಾಕೆ ಆಯ್ಕೆ ಮಾಡಿದರು? ಆಯ್ಕೆಗೊಳ್ಳಲಿಕ್ಕೆ ಇರುವಂತಹ ಕಾರಣಗಳು ಯಾವು? ಇಂತಹ ಕೂರತೆ ನಿಗಿಸಲು ನಾವು ಎಂತಹ ಯೋಜನೆಗಳನ್ನ ನಿರೂಪಿಸಬೇಕು ಅನ್ನುವ ಚಿಂತನೆ ಅನುಭವ ಮಂಟಪದ ಕಲ್ಪನೆ ಕೊಟ್ಟ ನಾಡಿನಲ್ಲಿ ಯಾಕೆ ನಡೆಯುತ್ತಿಲ್ಲ ಎನ್ನುವ ಪ್ರಶ್ನೆಗಳು ಜನರಲ್ಲಿ  ಮೂಡೀರಬೇಕಲ್ವಾ?

ಮೂಡಿದ್ದರೆ, ಬನ್ನಿ ಕೂಡೋಣ.. ಒಂದು ಥಿಂಕ್ ಟ್ಯಾಂಕ್ (ವೈಚಾರಿಕ ಹೌದ್ಯಾ) ಕಟ್ಟೋಣ! ಮಾಹಿತಿ ಆಧಾರಿತ ಪ್ರಜಾಪ್ರಭುತ್ವಕ್ಕಾಗಿ (ಡಾಟಾ ಡ್ರೀವನ್ ಡೆಮೋಕ್ರಾಸಿ) ಯಾಕಂದರ ಈಗೀನ ಕಾಲ “ಶಾಣ್ಯಾತನ’’ (ಆರ್ಟಿಫಿಸೀಯಲ್ ಇಂಟಲಿಜೆನ್ಸ)ದ ಕಾಲ! ಅದರ ಸದ್ಬಳಕೆಯಾಗಲಿ ಅನ್ನುವ ಸದಾಭಿಪ್ರಯಾದೊಂದಿಗೆ, ಈ “ಶಾಣ್ಯಾತನಕ್ಕ’’ (AI) ‘’ಕಲ್ಯಾಣ;; ದ ಮೌಲ್ಯಗಳ ತುಂಬಿ ಉತ್ತರ ಕರ್ನಾಟಕ “ಕಲ್ಯಾಣ’’ ಕರ್ನಾಟಕವಾಗಲಿ ಎನ್ನುವ ಅಭಿಲಾಷೆಯಿಂದ.

ಬಸವ ಪಾಟೀಲ ಕೊಂಡಗೂಳಿ, ಲೇಖಕರುLeave a Reply

Your email address will not be published. Required fields are marked *

error: Content is protected !!