ವಿಷಮದ ಹಾಡು

739

ಬೆಂಗಳೂರಿನಲ್ಲಿ ಜನಿಸಿರುವ ಮುದಲ್ ವಿಜಯ ಅವರ ಮಾತೃಭಾಷೆ ತಮಿಳು. ಆದರೆ, ಇವರ ಕಾವ್ಯ ಕೃಷಿ ಮತ್ತು ಅಧ್ಯಯನ ಇರೋದು ಕನ್ನಡದಲ್ಲಿ. ಅಂತರಾಳದ ಅಳಲು, ಕಡಲಿನಾಳದ ಕವನ, ಜೋಗಿ ಜಂಗಮ ಹಾಗೂ ಜವುಗು ಅನ್ನೋ 4 ಕವನ ಸಂಕಲನಗಳನ್ನ ಬರೆದಿದ್ದಾರೆ. ನೆನಪು, ನಿರ್ವಾಣ ಅನ್ನೋ 2 ಕಾದಂಬರಿ ಬರೆದಿದ್ದಾರೆ.

ಯಾರ ರಚನೆಯ ಯಾವ ಹಾಡಿದು

ಎಂದು ಕೇಳದಿರಿ ಬಂಧುಗಳೆ

ಇದು ನನ್ನದು ನನ್ನೆದೆಯಲಿ

ಕುದಿಯುವ ರಕ್ತದ ಹಾಡು

ಬಿಡಿಸಿ ಹೇಳಲು ಪದಗಳಿಲ್ಲ

ಚಿತ್ರ ಬರೆಯಲು ಭಾವಗಳಿಲ್ಲ

ನನ್ನ ಹಾಡಿದು ಕರುಳನು ಹಿಂಡುವ

ನನ್ನೊಳಗಿನ ಹಾಡು

ರಾಗಗಳಿಲ್ಲದೆ ಉಲಿಯುವ ಹಾಡಿದು

ವಿಪಿನದಿರುಳಿನಲಿ ಮುಳಿಯುವ ಹಾಡಿದು

ಜೀವನವನ್ನು ದೂಕುವ ಹಾಡಿದು

ಕೆಸರಲಿ ಬಿದ್ದು ಹೊರಳಾಡುತ್ತದೆ ನರಳುತ್ತದೆ

ಬೆತ್ತಲೆಯಾಗು ಎನ್ನುವ ಕಂಗಳ

ಸಂತಸಗೊಳಿಸಲು ಅರಳಿ ಮುದ್ದಾಡುವ

ತಂತುಗಳರಿಯದ ಜೀವದ ಹಾಡಿದು

ಎದೆಯ ನೋವನು ತನ್ನೊಳು ನುಂಗುತ

ಚೀರುತ್ತದೆ ಯಾರೂ ಇಲ್ಲದ ಕೋಣೆಯಲಿ

ಮೇಣದ ಬೆಳಕಿನ ನೆರಳಿನಲಿ

ಅಲೆಗಳು ಮೊರೆಯುವ ತೀರದಲಿ

ಬೀಸುವ ಗಾಳಿಯ ಕೊರೆತದಲಿ

ಗುರಿ ಕನಸುಗಳರಿಯದೆ

ಸೋಲುವ ಹಾಡಿದು

ಮಾರಿಕೊಳ್ಳಲು ಅಲೆಯುತ್ತದೆ

ಹೊಲಗಳಲಿ ನಗರದಲಿ

ಹಾಡನು ಕೇಳಿ ಮಂದಿಗಳೆಸೆಯುವ

ಮೆಚ್ಚುಗೆ ಸೂಸದೆ ಚುಚ್ಚುವ ಕಾಸಿಗೆ

ಹೇಗೆ ಹುಟ್ಟಿತು ಈ ಕೊಸರುವ ಹಾಡು

ಎಲ್ಲಿಂದ ಬಂದಿತು ಯಾರನು ಕಾಣಲು

ಪ್ರಶ್ನೆಗಳನ್ನು ಕೇಳದಿರಿ

ಕೆಂಗಣ್ಣಲ್ಲಿ ಎನ್ನನು ನೋಡದಿರಿ

ಬದುಕಲು ಗುನುಗಿದ ನೋವಿನ ಹಾಡಿದು

ನನ್ನ ತಿನ್ನಲು ಹುಟ್ಟಿದ ವಿಷಮದ ಹಾಡಿದು

ಮುದಲ್ ವಿಜಯ



Leave a Reply

Your email address will not be published. Required fields are marked *

error: Content is protected !!