‘ರಾಮಾಯಣ’ ಟೀಂ ಸೋತಿದ್ದೇಗೆ?

662

ಮಹಾ‘ಭಾರತ’ದ ತೀರ್ಪು ಹೊರ ಬಿದ್ದಿದೆ. ಇದರಲ್ಲಿ ‘ರಾಮಾಯಣ’ ಟೀಂ ಸೋತು ಸುಣ್ಣವಾಗಿದೆ. ಅರೇ ಅದ್ಯಾರು ರಾಮಾಯಣ ಟೀಂ ಅಂತೀರಾ.. ರಾಹುಲ್, ಮಾಯಾವತಿ, ಮಮತಾ, ಯಚೂರಿ, ನಾಯ್ಡು.. ಈ ತಂಡದ ಸೋಲಿಗೆ ಪ್ರಮುಖ ಕಾರಣಗಳಿವೆ. ಅದೇನು ಅನ್ನೋ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

2019ರ ಲೋಕಸಭಾ ಚುನಾವಣೆಯ ರಿಸಲ್ಟ್ ಬಂದಿದೆ. ಸಮೀಕ್ಷೆಗಳನ್ನೇ ಧೂಳಿಪಟ ಮಾಡಿ ಎನ್ ಡಿಎ ದಿಗ್ವಿಜಯ ಸಾಧಿಸಿದೆ. ಈ ಮೂಲಕ 2014ರಲ್ಲಿ ಪಡೆದಿದ್ದ ಸ್ಥಾನಗಳನ್ನ ಕೇಸರಿ ಪಡೆ ಮೀರಿದೆ. ಕರ್ನಾಟಕದಲ್ಲಿಯೂ ಬಿರುಗಾಳಿಯನ್ನೇ ಬೀಸಿದೆ. ಇದಕ್ಕೆ ದೋಸ್ತಿ ಪಡೆ ಕೊಚ್ಚಿಕೊಂಡು ಹೋಗಿದೆ. ಕಳೆದ ಬಾರಿ 17 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 24 ಲೀಡ್ ಪಡೆದಿದೆ.

ಸಂಸತ್ತಿನಲ್ಲಿ ರಾಜ್ಯವನ್ನ ಪ್ರತಿನಿಧಿಸ್ತಿದ್ದ ಪ್ರಭಾವಿ ಮುತ್ಸದ್ದಿ ನಾಯಕರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ, ಹೆಚ್.ಡಿ ದೇವೇಗೌಡ, ಕೆ.ಹೆಚ್ ಮುನಿಯಪ್ಪ, ವೀರಪ್ಪ ಮೊಯ್ಲಿ ಅವರಂತ ಲೀಡರ್ ಗಳು ಸೋಲುಂಡ್ರು. ಅತ್ತ ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡುಗೆ ಸೋಲು. ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಖಾತೆ ತೆರೆಯಲು ಹೆಣಗಾಡಿವೆ. ಕಳೆದ ಬಾರಿ ಪಶ್ಚಿಮ ಬಂಗಾಳದಲ್ಲಿ 42ರಲ್ಲಿ 38 ಸ್ಥಾನ ಪಡೆದಿದ್ದ ಟಿಎಂಸಿ ಅರ್ಧಕ್ಕೆ ಅರ್ಧದಷ್ಟು ಕುಸಿದಿದೆ. ದೆಹಲಿಯಲ್ಲಿ ಆಪ್ ಮಣ್ಣು ಮುಕ್ಕಿದೆ. ಘಟಬಂಧನ್ ಗಟ್ಟಿಯಾಗ ಪರಿಣಾಮ, ಕಾಂಗ್ರೆಸ್, ಬಿಎಸ್ಪಿ, ಎಸ್ಪಿ, ಟಿಎಂಸಿ, ಟಿಡಿಪಿ, ಡಿಎಂಕೆ, ಆಪ್, ಆರ್ ಜೆಡಿ, ಜೆಡಿಯು ಪಕ್ಷಗಳಿಗೆ ಹೀನಾಯ ಸೋಲಾಗಿದೆ.

ಯುಪಿಎ ಸೋಲಿಗೆ ಕಾರಣಗಳೇನು?

ಶುರುವಿನಲ್ಲೇ ಮಹಾಘಟಬಂಧನ್ ಫೇಲ್!

2018 ಮೇ 23 ರಂದು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದಾಗ, ಯುಪಿಎ ಹಾಗೂ ಎಡರಂಗ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ವು. ವಿಧಾನಸೌಧದ ಮುಂದೆ ನಡೆದ ಪ್ರಮಾಣ ವಚನ ವೇಳೆ ಯುಪಿಎ ಹಾಗೂ ಎಡರಂಗ ನಾಯಕರು, ಮಹಾಘಟಬಂಧನ್ ಘೋಷಣೆ ಮಾಡಿದ್ದರು. ಆದರೆ, ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಬಳಿಕ, ಮನೆಯೊಂದು ಮೂರು ಬಾಗಿಲು ಆಯ್ತು. ಕಾರಣ, ಸೀಟು ಹಂಚಿಕೆ.. ಪಿಎಂ ಯಾರು ಆಗಬೇಕು ಅನ್ನೋದು.. ಮರೆಯದ ಹಿಂದಿನ ಮುನಿಸು.. ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ್ದು ಸೇರಿದಂತೆ ಸಾಕಷ್ಟು ಪ್ರಮುಖ ಕಾರಣಗಳು ಮುಳುವಾದ್ವು.

ಸ್ಥಳೀಯವಾಗಿಯೇ ಸೀಮಿತವಾದ ಬಿಗ್ ಲೀಡರ್ಸ್

ಇದು ದೇಶದ ಚುನಾವಣೆ ಅಂತಾ ಗೊತ್ತಿದ್ದರೂ ಬಿಗ್ ಲೀಡರ್ಸ್ ಯಾರೂ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡಲಿಲ್ಲ. ಕಾರಣ, ಮೊದ್ಲೇ ದೂರವಾಗಿದ್ರು. ಇದರ ನಡುವೆ ಒಂದಾದ ಪಕ್ಷಗಳ ನಾಯಕರು ಸಹ ತಮ್ಮ ಕ್ಷೇತ್ರಗಳನ್ನ ಬಿಟ್ಟು ಆಚೆ ಬರಲಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶ, ಬಿಹಾರ ಸೇರಿ ಉತ್ತರ ಭಾರತದ ಕೆಲ ರಾಜ್ಯಗಳಿಗೆ ಮಾತ್ರ ಸೀಮಿತರಾದ್ರು. ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ಯಚೂರಿ, ಚಂದ್ರಬಾಬು ನಾಯ್ದು, ಪಿನಿರಾಯನ್, ಯಾದವ್, ಕೇಜ್ರಿವಾಲ್ ದೇಶ ಸುತ್ತಲೇ ಇಲ್ಲ.

ಕೋಮುವಾದ, ಸರ್ಜಿಕಲ್ ಸ್ಟ್ರೈಕ್ ವಾಗ್ದಾಳಿ

ಬಿಜೆಪಿಯನ್ನ, ಮೋದಿಯನ್ನ, ಅಮಿತ್ ಶಾರನ್ನ ಸರಿಯಾದ ರೀತಿಯಲ್ಲಿ ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದು. ಈ ಹಿಂದೆ ಮೋದಿ ನೀಡಿದ್ದ ಭರವಸೆಗಳಲ್ಲಿ ಎಷ್ಟು ಪೂರ್ತಿಗೊಳಿಸಿದ್ದಾರೆ. ಎಷ್ಟು ಬಿಟ್ಟಿದ್ದಾರೆ ಅನ್ನೋ ವಿಚಾರ ಸಂಪೂರ್ಣವಾಗಿ ಜನರಿಗೆ ತಲುಪಿಸುವಲ್ಲಿ ವಿಫಲವಾದರು. ಕೋಮುವಾದ ಪಕ್ಷ ಅನ್ನೋ ಕಾರಣಕ್ಕೆ ಸೋಲಿಸಿ ಅನ್ನೋ ಕಾರಣ ವರ್ಕೌಟ್ ಆಗ್ಲಿಲ್ಲ. ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿಯನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೋದಿ ಟೀಕಿಸುವ ಭರದಲ್ಲಿ ದೇಶದ ಭದ್ರತೆಯ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟ ಪಡಿಸಲಿಲ್ಲ.

ರಾಮ ಬದಲು ಅಯ್ಯಪ್ಪ ಬಂದ..

ಪ್ರತಿ ಚುನಾವಣೆಯಲ್ಲಿ ಬಿಜೆಪಿ ತನ್ನ ಮ್ಯಾನಿಫೆಸ್ಟೋದಲ್ಲಿ ರಾಮ ಮಂದಿರ ಜಪ ಮಾಡ್ತಿತ್ತು. ಈ ಬಾರಿ ಅದನ್ನ ಸೈಡ್ ಮಾಡಿ, ಅಯ್ಯಪ್ಪನನ್ನ ಎಳೆದು ತಂದಿತು. ಹಿಂದೂತ್ವ ಅನ್ನೋ ಟ್ರಂಪ್ ಕಾರ್ಡ್ ನ್ನ ಶಬರಿಮಲೆಯ ದೇವನಿಂದ ಬಳಸಿತು. ಕೇರಳ ವಿಚಾರ ಇಡೀ ದೇಶದ ವಿಚಾರ. ಹಿಂದೂಗಳ ವಿಚಾರ ಅನ್ನೋ ರೀತಿ ಬಿಂಬಿಸಿತು. ಈ ವಿಚಾರದಲ್ಲಿ ಕಾಂಗ್ರೆಸ್, ಕಮ್ಯೂನಿಸ್ಟ್, ಎಡ ಪಕ್ಷಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ. ಒಂದ್ಕಡೆ ಪ್ರಸಿದ್ಧ ದೇಗುಲಗಳ ಭೇಟಿಯಾಗ್ತಿದ್ದ ರಾಹುಲ್, ರ್ಯಾಲಿ ವೇಳೆ ಉಲ್ಟಾ ಆಗ್ತಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಟೆಂಪಲ್ ರನ್ ಸಹ ಕೈ ಹಿಡಿಯಲಿಲ್ಲ. ಇದನ್ನೇ ಬಿಜೆಪಿ ಭರ್ಜರಿಯಾಗಿ ಎನ್ ಕ್ಯಾಶ್ ಮಾಡಿಕೊಂಡಿತು.

ಸೀತಾರಾಮ್ ಯಚೂರಿ

ಯುವ ಮತದಾರರನ್ನ ಸೆಳೆಯುವಲ್ಲಿ ವಿಫಲ

ಇಡೀ ವಿಶ್ವದಲ್ಲಿಯೇ ಭಾರತ ಅತೀ ಹೆಚ್ಚು ಯುವ ಜನತೆಯನ್ನ ಹೊಂದಿದೆ. ಅದನ್ನ ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಸರಿಯಾಗಿ ಬಳಸಿಕೊಂಡಿತು. ಬಿಜೆಪಿ, ತನ್ನ ಅಝೆಂಡಾವನ್ನ ಯುವ ಮೆದುಳಿನಲ್ಲಿ ತುರುಕಲು ಮಾಡಿದ ಪ್ಲಾನ್ ಗಳನ್ನ, ಕಾಂಗ್ರೆಸ್, ಘಟಬಂಧನ್ ಪಕ್ಷಗಳು, ಎಡರಂಗ ಪಕ್ಷಗಳು ಫೇಲ್ ಮಾಡುವಲ್ಲಿ ಎಡವಿದ್ವು. ನಿರುದ್ಯೋಗ, ಬಡತನ, ರೈತ ವರ್ಗ, ನೋಟ್ ಬ್ಯಾನ್, ಜಿಎಸ್ ಟಿ ವಿಚಾರಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು. ಅದು ಮಾಡದೇ ಹೋದಾಗ, ಯುವ ಪಡೆಯಲ್ಲಿ ಮೋದಿ ಸೂಪರ್ ಮ್ಯಾನ್ ಆದರು. ದೇಶ ಭಕ್ತರು ವರ್ಸಸ್ ದೇಶ ಭ್ರಷ್ಟರು ಅನ್ನೋ ವಿಚಾರ ತುಂಬಿದರು. ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ತಪ್ಪುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೆ, ಯಂಗ್ ವೋಟರ್ಸ್ ನಿಂದ ದೂರವಾದರು.

ರಫೇಲ್ ವರ್ಸಸ್ ಬೋಪರ್ಸ್

ರಫೇಲ್ ಯುದ್ಧ ವಿಮಾನ ಖರೀದಿ, ಮಲ್ಯ, ನೀರವ್ ಮೋದಿ ವಿಚಾರದಲ್ಲಿ ಮೋದಿಯನ್ನ ಹಿಡಿದು ಎಳೆದಾಡಿದ ಕಾಂಗ್ರೆಸ್ ಹಾಗೂ ಘಟಬಂಧನ್ ಪಕ್ಷಗಳು, ಬೋಪರ್ಸ್, ಬಂಗಾಳದಲ್ಲಿನ ಅಪಾರ್ಟ್ ಮೆಂಟ್ ಹಗರಣದಿಂದ ಮುಜಗರಕ್ಕೆ ಒಳಗಾದರು. ಸುಪ್ರೀಂ ಕೋರ್ಟ್ ನಿಂದ ಸಹ ಛೀಮಾರಿ ಹಾಕಿಸಿಕೊಂಡ್ರು.

ಚೋರ್, ಚೌಕಿದಾರ್, ನಾಮ್ ದಾರ್..

ಮೋದಿಯನ್ನ ಚೋರ್ ಎಂದು ಕರೆದ ವಿರೋಧ ಪಕ್ಷಗಳು ಚೌಕಿದಾರ್ ನನ್ನ ಕಟ್ಟಿ ಹಾಕಲು ಹೆಣಗಾಡಿದ್ವು. ನಾನು ದೇಶದ ಚೌಕಿದಾರ್, ನಾಮದಾರ್ ಗಳಂತೆ ಲೂಟಿ ಮಾಡಲ್ಲ ಅಂತಾ ಹೇಳಿದಾಗ, ಸರಿಯಾಗಿ ಉತ್ತರ ಕೊಡಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ವಿತ್ ಸಚಿವ ಪಿ.ಚಿದಂಬರಂ ಸೇರಿ ಹಿರಿಯ ನಾಯಕರನ್ನ ಮಾತ್ನಾಡಲು ಬಿಡಲಿಲ್ಲ. ಹೀಗಾಗಿ ಮೋದಿ ಬಾಯಿಯನ್ನ ಮುಚ್ಚಲು ಆಗ್ಲಿಲ್ಲ. ಈ ಎಲ್ಲ ಪ್ರಮುಖ ಎಡವಟ್ಟುಗಳಿಂದ ಯುಪಿಎ, ಘಟಬಂಧನ್, ಎಡರಂಗಗಳು ಹೀನಾಯವಾಗಿ ಸೋಲುಂಡ್ವು. ಮೋದಿ ಮೇನಿಯಾ ಮತ್ತೊಮ್ಮೆ ವರ್ಕೌಟ್ ಆಯ್ತು.




Leave a Reply

Your email address will not be published. Required fields are marked *

error: Content is protected !!