ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಮತ್ತು ಪುರುಷರ ದರ್ಬಾರ್!

111

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬರುತ್ತಿದೆ. ಇದು ಒಂದು ಕಡೆ ಖುಷಿ ನೀಡುತ್ತದೆ. ಇನ್ನೊಂದು ಕಡೆ ನಮ್ಮೆದರು ಪ್ರಶ್ನೆಯೊಂದು ಇಟ್ಟಿದೆ. ಅದೇನು ಅಂದರೆ ಮಹಿಳೆಯರ ಹೆಸರಿನಲ್ಲಿ ಪುರುಷರ ಕಳ್ಳಾಟ ನಡೆಸುತ್ತಿರುವುದು.

ಹೌದು, ಈಗಾಗ್ಲೇ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಇದೆ. ಜಾತಿವಾರು ಮಹಿಳಾ ಮೀಸಲಾತಿ ಸಹ ಇದೆ. ಹೀಗಾಗಿ ಮೀಸಲು ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧಿಸಿ ರಾಜಕೀಯಕ್ಕೆ ಬರುತ್ತಿದ್ದಾರೆ. ಆದರೆ, ಹೆಸರಿಗೆ ಮಾತ್ರ ಅವರು ಜನಪ್ರತಿನಿಧಿ. ಅಧಿಕಾರ ಚಲಾಯಿಸುವುದು ಮಾತ್ರ ಪುರುಷರು ಅನ್ನೋದು ತೆರೆದ ರಹಸ್ಯ.

ಹೆಣ್ಮಕ್ಕಳಿಗೆ ನೀಡಿರುವ ರಾಜಕೀಯ ಸ್ಥಾನಮಾನದಲ್ಲಿ ಅವರ ಕುಟುಂಬಸ್ಥರು ಹಸ್ತಕ್ಷೇಪ ಜೋರಾಗಿದೆ. ತಾಯಿಯ ಹೆಸರಲ್ಲಿ ಮಗ, ಪತ್ನಿಯ ಹೆಸರಲ್ಲಿ ಗಂಡ ಅಧಿಕಾರ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಪ್ರಶ್ನಿಸುವವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಮಹಿಳಾ ಪ್ರತಿನಿಧಿಗಳು ಕೇವಲ ಸಭೆಗೆ ಹೋಗಿ ಬರಲು ಆಗಿದ್ದಾರೆ. ಅವರ ಮತಕ್ಷೇತ್ರದಲ್ಲಿ ಪುರುಷರೇ ಎಲ್ಲದರ ಉಸ್ತುವಾರಿ ವಹಿಸಿಕೊಂಡು ಮಹಿಳೆಯರನ್ನು ಉತ್ಸವಮೂರ್ತಿ ಮಾಡಿದ್ದಾರೆ. ಸದಸ್ಯರ ಪ್ರತಿನಿಧಿ ಎಂದು ದಪ್ಪ ಅಕ್ಷರದಲ್ಲಿ ಬರೆದುಕೊಳ್ಳುವುದು, ಕೆಲವು ಕಡೆ ತಾವೇ ಸದಸ್ಯರು ಎಂದು ಬರೆದುಕೊಂಡು ಸಭೆ, ಸಮಾರಂಭಗಳಲ್ಲಿ ರಾಜಾರೋಷವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿಯೂ ಇದು ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ.

ಮಹಿಳಾ ಮೀಸಲು ಕ್ಷೇತ್ರದ ಸದಸ್ಯರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಈ ಕುರಿತು ಮೊದಲೇ ಸ್ಪಷ್ಟಪಡಿಸಬೇಕು. ಸದಸ್ಯರ ಪ್ರತಿನಿಧಿ ಎಂದು ಹಣೆಪಟ್ಟಿ ಅಂಟಿಸಿಕೊಂಡು ಓಡಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳ ಮೇಲೂ ಶಿಸ್ತು ಕ್ರಮ ತೆಗೆದುಕೊಳ್ಳುವ ಕೆಲಸವಾಗಬೇಕು. ಇಲ್ಲದೆ ಹೋದರೆ ಹೆಣ್ಮಕ್ಕಳಿಗೆ ರಾಜಕೀಯ ಮೀಸಲಾತಿ ಅನ್ನೋದು ಪುಸ್ತಕದೊಳಗಿನ ಸಾಲುಗಳಾಗಿ ಮಾತ್ರ ಉಳಿಯಲಿದೆ.




Leave a Reply

Your email address will not be published. Required fields are marked *

error: Content is protected !!