ಕಣವಿ ಆಧುನಿಕ ಕನ್ನಡ ಕಾವ್ಯ ಪರಂಪರೆಯ ಒಂದು ಅಂಗ

539

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಭಾಗ್ಯಮ್ಮ.ಜಿ ಅವರು ಚೆಂಬೆಳಕಿನ ಕವಿ ಕಣವಿ ಅವರ ಕುರಿತು ಬರೆದ ಲೇಖನ..

ಮಮತೆಯಲ್ಲಿಮೂರ್ತಿಗೊಂಡ

ಸಮತೆಯಲ್ಲಿಸ್ಪೂರ್ತಿಗೊಂಡ

ದಿವ್ಯತೇಜದಲ್ಲಿತಾಯೆ

ಕಾವ್ಯಮೊಳೆಯಿತು.

ಚೆನ್ನವೀರಕಣವಿ

ಕಾವ್ಯದ ಮಾತನ್ನು ಮರೆತರೂ ಒಬ್ಬ ಮನುಷ್ಯ ಎನ್ನುವ ದೃಷ್ಟಿಯಿಂದಲೂ ಶ್ರೀಕಣವಿಯವರು ತುಂಬಾ ಗಣ್ಯರಾದ ವ್ಯಕ್ತಿ ಅವರ ಕಾವ್ಯ ದೊಡ್ಡದು. ಅವರ ವ್ಯಕ್ತಿತ್ವ ಅದಕ್ಕಿಂತಲೂ ದೊಡ್ಡದು–ಎಂಬ ಅಡಿಗರ ಮಾತಿನಂತೆ ಬದುಕಿದವರು. ಅನೇಕ ವೇಳೆ ಕೆಲವು ಕವಿಗಳಲ್ಲಿ ಕಾಣುವ ವ್ಯಕ್ತಿತ್ವದ ಬಿರುಕು ಇವರಲ್ಲಿರಲಿಲ್ಲ. ಏನನ್ನು ಹೇಳಿದರೋ ಅದೇ ರೀತಿ ಬದುಕಿದರು ಏನನ್ನು ಬದುಕುತ್ತಾರೋ ಅದನ್ನೇ ಬರೆವರು ಎಂಬ–ಎಚ್.ತಿಪ್ಪೇರುದ್ರಸ್ವಾಮಿ ಅವರ ಮಾತು ವಾಸ್ತವಕ್ಕೆ ಹತ್ತಿರವಾಗಿದೆ.

ಕಣವಿಯವರ ಕಾವ್ಯ, ವ್ಯಕ್ತಿತ್ವದ ಬಗ್ಗೆ ಅಸಂಖ್ಯ ಮಾತುಗಳಿವೆ. ಕಾವ್ಯದಲ್ಲೇ ಎತ್ತರದ ವ್ಯಕ್ತಿತ್ವಗಳನ್ನು ಹೊಂದಿದಂತಹ ಕಣವಿಯವರನ್ನು ಕಾವ್ಯಾಧ್ಯಯನ ಮಾಡುವುದು ಹೊಸಗನ್ನಡ ಕಾವ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ಮಹತ್ವ ದಾಯಕವಾದುದಾಗಿದೆ. ಆಧುನಿಕ ಕಾವ್ಯದ ಎಲ್ಲಾ ಚಳುವಳಿಗೆ ವಿಶೇಷವಾಗಿ ಸೂಕ್ಷ್ಮವಾಗಿ ಪ್ರತಿಸ್ಪಂದಿಸುವ ಬೆಳೆಯುವ ಗುಣ ಇವರ ಕಾವ್ಯಗಳಲ್ಲಿವೆ. ಚೆನ್ನವೀರ ಕಣವಿಯವರು ತಮ್ಮದೇ ಆದ ನೋಟದಲ್ಲಿ ಪರಂಪರೆಯನ್ನು ಇಡಿಯಾಗಿ ಗ್ರಹಿಸುತ್ತಿದ್ದರು. ಒಂದರ್ಥದಲ್ಲಿ ಇವರ ಕಾವ್ಯದ ಮರು ಓದುವಿಕೆ ಹೊಸಗನ್ನಡ ಕಾವ್ಯದ ಮಹತ್ವದ ಘಟ್ಟಗಳ ಅವಲೋಕನವೂ ಹೌದು. ಅವರ ಕಾವ್ಯ ಜೀವನದ ಉದ್ದಕ್ಕೂ ಆಯ್ಕೆಯ ವಿಷಯದಲ್ಲಿ ತೋರಿರುವ ಧೈರ್ಯ, ಸ್ವಾತಂತ್ರ್ಯ ಮತ್ತು ಕಾವ್ಯ ಪ್ರೇಮಗಳನ್ನು ಕಾಣಬಹುದು.

ಅನೇಕ ವಿವಿಧ ಅನುಭವಗಳನ್ನು ಪ್ರಭಾವಗಳನ್ನು ಅರಗಿಸಿಕೊಂಡು ಸ್ವಂತ ಪ್ರತಿಭೆಯಿಂದ ಪರಂಪರೆಯ ಸಾರವನ್ನು ಹೀರಿಕೊಂಡು ಸಮಕಾಲೀನ ಪ್ರಜ್ಞೆಯಿಂದ ಹೊಸತನ್ನು ನೀಡಬಲ್ಲ ಅನೇಕ ಅಂಶಗಳು ಗಮನಾರ್ಹವಾಗಿವೆ. ಆಧುನಿಕ ಕನ್ನಡ ಕಾವ್ಯಪರಂಪರೆಯ ಒಂದು ಅಂಗವಾಗಿಯೇ ಬೆಳೆದ ಕಣವಿಯವರು ತಮ್ಮ ಸೃಷ್ಠಿಕ್ರಿಯೆಯ ಉದ್ದಕ್ಕೂ ಜಾಗೃತ ಪ್ರಜ್ಞೆಯಿಂದ ಪ್ರತಿಕ್ರಿಯಿಸಿದ ಮಹಾನ್ ಕವಿ.

ಅವರ ಕಾವ್ಯ ಪರಂಪರೆಯ ಪ್ರಮುಖವಸ್ತುಗಳಾದ ಕವಿ ಮತ್ತು ಪ್ರಕೃತಿ, ಕವಿ ಮತ್ತು ಪ್ರೇಮ, ಕವಿ ಮತ್ತು ಸಾಂಸ್ಕೃತಿಕ ಕಾಳಜಿ, ಕವಿ ಮತ್ತು ಅನುಭಾವಿಕ ನೆಲೆ, ಭಾಷೆ, ರೀತಿ, ರೂಪ ಇತ್ಯಾದಿ ಸ್ಥೂಲ ನೋಟದಿಂದ ಸೂಕ್ಷ್ಮ ಅಂಶಗಳನ್ನು ವಿವೇಚಿಸಿದಂತಹವರು ಪ್ರಗತಿಶೀಲ ಚಳುವಳಿಯಲ್ಲಿ ನಡೆದ ಕೆಲವು ಕಾವ್ಯಾತ್ಮಕ ಬೆಳವಣಿಗೆಗಳನ್ನು ಆಲೋಚನಾಪೂರ್ವ ಹಿನ್ನೆಲೆಯಿಂದ ಅತ್ಯಂತ ಸಣ್ಣ ಪ್ರಮಾಣದಲ್ಲಿ ನವೋದಯದ ಒಂದು ಅಂಗವಾಗಿಯೇ ಭಿನ್ನ ರೀತಿಯಲ್ಲಿ ಸಂವೇದನೆ ಮತ್ತು ಉದ್ದೇಶಗಳಾದ ಸಂಪ್ರದಾಯ ಮತ್ತು ಪ್ರತಿಭಟನೆ, ಸಾಹಿತ್ಯ ಮತ್ತು ವಾಸ್ತವಪ್ರಜ್ಞೆ, ಸಮಾಜ ಮತ್ತು ಪರಿವರ್ತನೆ, ಅಭಿವ್ಯಕ್ತಿ ಮತ್ತು ಕಲಾತ್ಮಕತೆ ಪರಂಪರೆಯನ್ನು ಕುರಿತಂತೆ ಬರೆಯುತ್ತಿದ್ದರು.

ಕಣವಿಯವರ ಕಾವ್ಯ ಸಾಧನೆಯ ಉತ್ತುಂಗವಿರುವುದೇ ನವ್ಯಪರಂಪರೆಯಲ್ಲಿ ಅನೇಕ ಬದಲಾವಣೆಗಳನ್ನು ಕೆಲವು ಮೂಲಭೂತ ಜೀವಂತ ಅಂಶಗಳನ್ನು ಉಳಿಸಿಕೊಂಡು ನವ್ಯ ಪರಂಪರೆಯ ಪ್ರಮುಖ ಧಾತುಗಳನ್ನು ಸ್ವೀಕರಿಸಿಕೊಳ್ಳುವ ಈ ಕವಿತಾತ್ವಿಕವಾಗಿ, ಕಲಾತ್ಮಕವಾಗಿ, ಭಾಷಿಕವಾಗಿ ಮಹತ್ತ್ರದನಿಲುವನ್ನು ಸಾಧಿಸಿದ್ದರು. ಕಣವಿಯವರ ಕಾವ್ಯದಲ್ಲಿ ನವ್ಯದ ಆವಿಷ್ಕಾರ ಮತ್ತು ಅದರ ಮಿತಿಗಳಾದ ವ್ಯಕ್ತಿ ಮತ್ತು ಸಮಾಜ, ಕಾಲ ಮತ್ತು ಕಾಮ, ಭೂಮಿ ಮತ್ತು ಪ್ರಕೃತಿ, ಭಾಷೆ ಶಿಲ್ಪ ಶೈಲಿ ಇವರ ಕಾವ್ಯದ ವಿಶೇಷತೆಗಳಾಗಿವೆ.

ಬೇಂದ್ರೆ, ಮಧುರಚೆನ್ನ, ಚಿತ್ತಾಲರನ್ನು ಬಿಟ್ಟರೆ ಉತ್ತರ ಕರ್ನಾಟಕದ ಕನ್ನಡ ಕಾವ್ಯದ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಶ್ರೀಚೆನ್ನವೀರಕಣವಿಯವರದ್ದು. ಹೊಸಗನ್ನಡ ಕಾವ್ಯದ ನಾಲ್ಕುಘಟ್ಟಗಳಲ್ಲಿ ಸ್ಪಂದಿಸಿ, ಈ ಪರಂಪರೆಗಳ ಜೊತೆಗೆ ತಮ್ಮ ಸ್ವಂತ ಸೃಜನ ಪ್ರಕ್ರಿಯೆಗಳನ್ನು ಕವಿ ಕಣವಿಯವರು ನೀಡುತ್ತಾ ಬಂದಂತಹವರು.




Leave a Reply

Your email address will not be published. Required fields are marked *

error: Content is protected !!