LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

2047ರ ವೇಳೆ ಕರ್ನಾಟಕದ ಆರ್ಥಿಕತೆ 320 ಲಕ್ಷ ಕೋಟಿ ಗುರಿ: ಸಿಎಂ ಡಿಕೆಶಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ನಾಡಿನ 7.5 ಕೋಟಿ ಕನ್ನಡಿಗರು ಹಾಗೂ ಸಮಸ್ತ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಭಾರತವನ್ನು ಒಂದು ಭವ್ಯ ದೇಗುಲಕ್ಕೆ ಹೋಲಿಸಿದರೆ ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ. ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ವೀರ ಸೈನಿಕರ ತ್ಯಾಗವನ್ನು ಸ್ಮರಿಸುತ್ತಾ, ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳಡಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವ ಸಂಕಲ್ಪ ನಮ್ಮ ಸರ್ಕಾರದ್ದು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರ 'ನವ ಭಾರತ' ಕಲ್ಪನೆಯಂತೆ "ಯುವ ಕರ್ನಾಟಕ - ನವ ಭಾರತ" ಧ್ಯೇಯದೊಂದಿಗೆ, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 320 ಲಕ್ಷ ಕೋಟಿ ರೂಪಾಯಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಆಡಳಿತವನ್ನು ಜನರ ಮನೆಬಾಗಿಲಿಗೆ ತರಲು 'ಪ್ರಜಾಸೇವೆ ಇಲಾಖೆ' ಸ್ಥಾಪಿಸಿ, ಸಚಿವರು ಮತ್ತು ಶಾಸಕರಿಂದ ನಿರಂತರ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಸಾಮಾಜಿಕ ಭದ್ರತೆ ನೀಡುತ್ತಿರುವ ಪಂಚ ಗ್ಯಾರಂಟಿಗಳ ಜೊತೆಗೆ, ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು 6ನೇ ಗ್ಯಾರಂಟಿಯಾಗಿ 'ಭೂ-ಗ್ಯಾರಂಟಿ' ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 77,000 ಕೋಟಿಗೂ ಅಧಿಕ ಮೊತ್ತ ನೇರ ವರ್ಗಾವಣೆಯಾಗಿದ್ದು, NFHS-6 ವರದಿಯಂತೆ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಶೇಕಡ 44 ರಿಂದ ಶೇಕಡ 14 ಕ್ಕೆ ಇಳಿಕೆಯಾಗಿದೆ. ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಕೋಟ್ಯಂತರ ಜನರಿಗೆ ಆಸರೆಯಾಗಿವೆ. ಇದು ಕರ್ನಾಟಕ ಮಾದರಿ ಎಂದೇ ಜನಪ್ರಿಯವಾಗಿದೆ ಹಾಗೂ ಇಡೀ ರಾಷ್ಟ್ರ ಅನುಸರಿಸುತ್ತಿದೆ. ತಾಯಂದಿರ ಮರಣ ಪ್ರಮಾಣದಲ್ಲಿ ಶೇ.19 ರಷ್ಟು ಇಳಿಕೆ ಕಂಡಿದೆ.

ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ "ಯುವ ಉದ್ಯೋಗ ಸೇತು" ಹಾಗೂ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ 2,500 ರೂಪಾಯಿ ಪ್ರೋತ್ಸಾಹಧನ ನೀಡುವ "ಉದ್ಯೋಗ ನಿಧಿ" ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 6ನೇ ತರಗತಿಯಿಂದಲೇ ಎಐ ಶಿಕ್ಷಣ, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇಕಡ 7.5 ವಿಶೇಷ ಮೀಸಲಾತಿ ಹಾಗೂ 10,000 'ಭಾರತ್ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಲಾಗುತ್ತಿದೆ.

ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ "ಮುಖ್ಯಮಂತ್ರಿ ರೈತ ಚೈತನ್ಯ" ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ "ರೈತ ಮಿತ್ರ" ಯೋಜನೆ ಜಾರಿಗೊಳಿಸಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಹಾಗೂ ₹16,000 ಕೋಟಿ ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್‌ಸಿ/ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನ ಮೀಸಲಿಡಲಾಗಿದೆ.

ಬೆಂಗಳೂರಿಗೆ 1.50 ಲಕ್ಷ ಕೋಟಿ ರೂಪಾಯಿ ಮೂಲಸೌಕರ್ಯ, 26,000 ಕೋಟಿ ವೆಚ್ಚದ 117 ಕಿಲೋ ಮೀಟರ್ 'ಬೆಂಗಳೂರು ಬ್ಯುಸಿನೆಸ್ ಕಾರಿಡಾರ್', 5 ಹೊಸ ಪೊಲೀಸ್ ಕಮಿಷನರೇಟ್‌ಗಳು, ಆ್ಯಂಟಿ ರೌಡಿ ಸ್ಕ್ವಾಡ್, ಲಾಲ್‌ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್‌ಗಳು ಹಾಗೂ 7 ಕೆರೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂಪಾಯಿ ವೆಚ್ಚದ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್, 'ಬಿಯಾಂಡ್ ಬೆಂಗಳೂರು' ಅಡಿ 5 ಜಿಲ್ಲೆಗಳಲ್ಲಿ ಗ್ಲೋಬಲ್ ಟೆಕ್ ಸೆಂಟರ್‌ಗಳು ಮತ್ತು 'ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ' ಸ್ಥಾಪಿಸಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್‌ ರೋಡ್ ಹಾಗೂ ಮೊಬಿಲಿಟಿ ಗ್ರಿಡ್‌ ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು. ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ ಅಂತಾ ಹೇಳಿದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST