ಪ್ರಜಾಸ್ತ್ರ ಸುದ್ದಿ
ಚಿಕ್ಕಬಳ್ಳಾಪುರ(Chikkaballapura): ಪಾಕಿಸ್ತಾನ ಮೂಲದ ತಾಯಿ ಹಾಗೂ ಮಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 2021ರಿಂದ ಫರ್ಹಾನಾಜ್ ಖಾನ್(52), ಈಕೆಯ ಮಗ ಮೊಹಮ್ಮದ್ ಫರ್ದೀನ್ ಖಾನ್(22) ವಾಸಿಸುತ್ತಿದ್ದರು. ಬೆಂಗಳೂರು ಮೂಲದ ಅಯೂಬ್ ಖಾನ್ ಪಾಕಿಸ್ತಾನ ಮೂಲದ ಫರ್ಹಾನಾಜ್ ಅವರನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ.
ನಾಲ್ಕು ಮಕ್ಕಳಲ್ಲಿ ಮೂವರು ಭಾರತದಲ್ಲಿ ಜನಿಸಿದ್ದಾರೆ. ಪತಿ ಅಯೂಬ್ ಖಾನ್ ಕತಾರ್ ನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಫರ್ಹಾನಾಜ್ ಹಾಗೂ ಮೊದಲ ಮಗ ಮೊಹಮ್ಮದ್ ಪಾಕಿಸ್ತಾನ ಪೌರತ್ವ ಹೊಂದಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಇಲ್ಲೆ ವಾಸವಾಗಿದ್ದಾರೆ. 2016ರಲ್ಲೇ ಅಕ್ರಮವಾಗಿ ರೇಷನ್ ಕಾರ್ಡ್, ಮತದಾರರ ಕಾರ್ಡ್, ಆಧಾರ್ ಕಾರ್ಡ್ ಗಳನ್ನು ಮಾಡಿಕೊಂಡಿದ್ದಾರೆ. ಬ್ಯಾಂಕ್ ಖಾತೆಗಳನ್ನು ಸಹ ಹೊಂದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.



