ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಕರವಿನಾಳ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಗ್ರಾಮದ ಸರಹದ್ದಿನ ಬಗ್ಗೆ ಮರು ಸಮೀಕ್ಷೆ ಮಾಡುವ ತನಕ ರಸ್ತೆ ಕಾಮಗಾರಿ ತಡೆ ಹಿಡಿಯಬೇಕು. ಗಂವಠಾಣ ಜಾಗದ ನಕ್ಷೆಯನ್ನು ಪರಿಶೀಲಿಸಿ ಸಧ್ಯ ಮಾಡುತ್ತಿರುವ ಸಿಸಿ ರಸ್ತೆಯನ್ನು ಅಗಲಿಕರಿಸಿ ಆದೇಶ ನೀಡಬೇಕು ಎಂದು ಹೇಳಿ ಶುಕ್ರವಾರ ತಾಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಈ ವೇಳೆ ಮಾತನಾಡಿದ ಬೋರಮ್ಮ ಕುಂಬಾರ, ಶಿವಸತಿ ಬಿರಾದಾರ, ಚಾಂದಬಿ ವಾಲಿಕಾರ, ಮೈರುನಬಿ ಖಾನಾಪೂರ ಅವರು, ಗ್ರಾಮ ಪಂಚಾಯ್ತಿಯಿಂದ ಯಾವುದೇ ಸೌಲಭ್ಯಗಳು ನೀಡಿಲ್ಲ. ನಮ್ಮ ಊರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಕರವಿನಾಳ ತಾಂಡದವರೆಗೆ ಮಾತ್ರ ಬರುತ್ತೆ. ಇದರಿಂದಾಗಿ ಎಲ್ಲರಿಗೂ ತೊಂದರೆಯಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲ. ಸ್ಮಶಾನದ ವ್ಯವಸ್ಥೆ ಮಾಡಿಕೊಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಕರವಿನಾಳ ತಾಂಡಾದಿಂದ ಕರವಿನಾಳದ ಸುತ್ತ ಸಿಸಿ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆ ತುಂಬಾ ಇಕ್ಕಟ್ಟಾಗಿ ಮಾಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಜೆಜೆಎಂ ಕಾಮಗಾರಿ ಮುಗಿದು 3 ವರ್ಷ ಆಗಿದೆ. ನೀರಿನ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಹಳ್ಳೆಪ್ಪ ತಾಳಿಕೋಟಿ, ಸಂಜು ಪತ್ತಾರ, ಅಯ್ಯಪ್ಪಗೌಡ ಬಿರಾದಾರ, ಬಸವರಾಜ ದೇಸಾಯಿ, ಚನ್ನಬಸಪ್ಪ ಭೈರಿ, ಶಿವಕಾಂತ, ರೇಣುಕಾ ಭೈರೋಡಗಿ, ಚಂದ್ರಭಾಗಮ್ಮ ಬಿರಾದಾರ, ನಾಗಮ್ಮ ಕಕ್ಕಸಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


