ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀ ಸಂಗಮೇಶ್ವರ ವಿದ್ಯಾಲಯ, ಸಿಂದಗಿಯಲ್ಲಿ "ಶಾಲಾ ಪ್ರತಿಭಾನ್ವೇಷಣೆ (School Talent Hunt)" ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೇಮಾನಂದ ಜನಯ್, ಡಾ.ಪ್ರಕಾಶ, ಬಸಲಿಂಗಯ್ಯ ಹಿರೇಮಠ, ಬಸವರಾಜ ಅಗಸರ, ವಿದ್ಯಾಲಯದ ಮಾರ್ಗದರ್ಶಕರಾದ ಗುರುನಾಥ ಅರಳಗುಂಡಗಿ ಹಾಗೂ ಮೈತ್ರೆಯಿ ಮಲಿಪಾಟೀಲ ಉಪಸ್ಥಿತರಿದ್ದು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲೊಂದು ವಿಶೇಷ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸುವುದು ಶಾಲೆ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇಂತಹ ಪ್ರತಿಭಾನ್ವೇಷಣೆ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗಾಯನ, ನೃತ್ಯ, ಭಾಷಣ, ಅಭಿನಯ, ಚಿತ್ರಕಲೆ, ವೇಷಭೂಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನಕ್ಕೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು. ಶ್ರೀದೇವಿ ತಾಳಿಕೋಟಿ ನಿರೂಪಿಸಿದರು. ಅಭಿಷೇಕ ಸಿಂಗರೇ ಸಂಯೋಜಿಸಿ ವಂದಿಸಿದರು. ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತರಿದ್ದರು.



