ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯ ಅಕ್ಕಿ ಮಾಫಿಯಾ ಕುರಿತು ವಿಶೇಷ ವರದಿ ಬರೆದಿದ್ದಕ್ಕೆ ಪತ್ರಕರ್ತನ ಮನೆಗೆ ಹೋಗಿ ಗೂಂಡಾ ವರ್ತನೆ ತೋರಿ, ಜೀವಬೆದರಿಕೆ ಹಾಕಿದ ಅಕ್ಕಿ ಮಾಫಿಯಾದ ಆರೋಪಿಗಳಿಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಅನ್ನೋ ಇಬ್ಬರು ಆಅಕ್ಕಿ ಮಾಫಿಯಾ ಬಗ್ಗೆ ವರದಿ ಮಾಡಿದ್ದಕ್ಕೆ ಜೀವ ಬೆದರಿಕೆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸ ದಿಗಂತ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ ಅವರು, ಆಗಸ್ಟ್ 20, 2026 ರ ಸಂಚಿಕೆಯಲ್ಲಿ ‘ಬೇರು ಬಿಟ್ಟ ಅಕ್ರಮ ದಂಧೆಕೋರರ ಜಾಲ, ಕಾಳಸಂತೆಕೋರರಿಂದ ಮಹಾರಾಷ್ಟ್ರಕ್ಕೆ ಸಾಗಣೆ, ಅನ್ನಭಾಗ್ಯ ಅಕ್ಕಿ ಖದೀಮರಿಗೆ ವಿಜಯಪುರ ಸ್ವರ್ಗ' ಎಂಬ ಶಿರ್ಷಿಕೆಯಡಿ ವಿಶೇಷ ಸರಣಿ ವರದಿ ಬರೆದಿದ್ದಕ್ಕೆ, ಅಕ್ಕಿ ಮಾಫಿಯಾದ ಆರೋಪಿಗಳಾದ ಗುಡುಲಾಲ್ ತುಬಾಕೆ ಹಾಗೂ ಅಲ್ತಾಫ್ ಪುಣೇಕರ ಪತ್ರಕರ್ತ ಪರಶುರಾಮ ಶಿವಶರಣ ಮನೆಯಲ್ಲಿ ಇಲ್ಲದ ವೇಳೆ, ನಗರದ ಶಿಕಾರಖಾನೆಯಲ್ಲಿರುವ ಅವರ ಮನೆಗೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಹೋಗಿ ಗೂಂಡಾ ವರ್ತನೆ ತೋರಿದ್ದಾರೆ.
ನಮ್ಮ ಅಕ್ಕಿ ಮಾಫಿಯಾ ಬಗ್ಗೆ ಬರೆದ ಪತ್ರಕರ್ತ ಅಂವ ಎಲ್ಲಿದ್ದಾನ, ನಾವು ಎಲ್ಲಾ ಆಫೀಸ್ ದವರಿಗೆ ಮಂತ್ಲಿ ಕೊಡತಿವಿ. ನಮ್ಮ ಹಿಂದ ಕೆಲ ರಾಜಕಾರಣಿ ಇದಾರ, ಲೀಡರ್ ಇದ್ದಾರ, ಹೋರಾಟಗಾರರು ಇದ್ದಾರ. ಸುಮ್ನೆ ಧಿಮಾಕ್ ಮಾಡಬ್ಯಾಡ್ರಿ. ನಿಮ್ದು ಎಷ್ಟ ತಗೊತ್ತೀರಿ ತಗೊಂಡು ಇದ್ದರ ಚಲೋ ಆಗ್ತದ. ಇಲ್ಲಾಂದ್ರ ನಿಮ್ಗ ಏನ್ ಮಾಡಬೇಕು ಗೊತೈತಿ ಅಂತ ಅವಾಚ್ಯ ಪದಗಳಿಂದ ಬೈದು ಜೀವಬೆದರಿಕೆ ಹಾಕಿ, ಮನೆಯ ಎದುರು ಭಯ, ಭೀತಿ ಮೂಡಿಸಿದ ಹಿನ್ನೆಲೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.



